ಗುಂಡ್ಲು ಪೇಟೆ : ಬಿಜೆಪಿ ಸದಸ್ಯರ ಪಕ್ಷಾಂತರ - ಐವರು ಸದಸ್ಯರ ಅನರ್ಹಗೊಳಿಸಲು ದೂರು

| Published : Sep 13 2024, 01:35 AM IST / Updated: Sep 13 2024, 11:12 AM IST

ಗುಂಡ್ಲು ಪೇಟೆ : ಬಿಜೆಪಿ ಸದಸ್ಯರ ಪಕ್ಷಾಂತರ - ಐವರು ಸದಸ್ಯರ ಅನರ್ಹಗೊಳಿಸಲು ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಗುಂಡ್ಲುಪೇಟೆ ಪುರಸಭೆ ಐವರು ಬಿಜೆಪಿ ಸದಸ್ಯರು ಪಕ್ಷಾಂತರ ಮಾಡಿದ್ದಾರೆ. ಅವರ ಸದಸ್ಯತ್ವ ಅನರ್ಹಗೊಳಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗೆ ಪುರಸಭೆ ಬಿಜೆಪಿ ಸದಸ್ಯರು ದೂರು ಸಲ್ಲಿಸಿದರು.

 ಗುಂಡ್ಲುಪೇಟೆ :  ಇತ್ತೀಚೆಗೆ ನಡೆದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ವಿಪ್‌ ಉಲ್ಲಂಘಿಸಿದ ಐವರು ಬಿಜೆಪಿ ಸದಸ್ಯರ ಅನರ್ಹಗೊಳಿಸಲು ಪುರಸಭೆ ಮುಖ್ಯಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗಿದೆ ಎಂದು ವಕೀಲ ಸಯ್ಯದ್‌ ಹಮೀರ್ ಹೇಳಿದರು.

ಪಟ್ಟಣದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಪಿ. ಗಿರೀಶ್‌ ಅವರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷಾಂತರ ನಿಷೇಧದಡಿ ಪುರಸಭೆಯ ಬಿಜೆಪಿ ಸದಸ್ಯರಾದ ಕಿರಣ್‌ ಗೌಡ, ಹೀನಾ ಕೌಸರ್‌, ರಮೇಶ್‌, ರಾಣಿ ಲಕ್ಷ್ಮೀದೇವಿ, ವೀಣಾ ಮಂಜುನಾಥ್‌ ಅವರು ಬಿಜೆಪಿ ಪಕ್ಷದಲ್ಲಿ ಆಯ್ಕೆಯಾಗಿದ್ದಾರೆ. ಪಕ್ಷ ನೀಡಿದ ವಿಪ್‌ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಹಾಗಾಗಿ ಪುರಸಭೆ ಬಿಜೆಪಿ ಸದಸ್ಯರಾದ ಎಸ್.ಕುಮಾರ್‌, ಪಿ.ಗಿರೀಶ್‌ ದೂರು ಸಲ್ಲಿಸಿ ಐವರು ಸದಸ್ಯರ ಸದಸ್ಯತ್ವ ಅನರ್ಹಗೊಳಿಸಬೇಕು ಎಂದು ದೂರು ಸಲ್ಲಿಸಿದ್ದಾರೆ ಎಂದರು.ವಿಪ್‌ ಉಲ್ಲಂಘಿಸಿದ ಸದಸ್ಯರ ಅನರ್ಹಗೊಳಿಸುವ ಸಂಬಂಧ ಪುರಸಭೆ ಮುಖ್ಯಾಧಿಕಾರಿಗೆ ದೂರುದಾರರು ಸಲ್ಲಿಸಿದ ಅರ್ಜಿ 24 ಗಂಟೆಯೊಳಗೆ ಜಿಲ್ಲಾಧಿಕಾರಿಗೆ ಕಳುಹಿಸಲಿದ್ದಾರೆ. ಜಿಲ್ಲಾಧಿಕಾರಿ 30 ದಿನಗಳಲ್ಲಿ ದೂರು ವಿಲೇವಾರಿ ಮಾಡಲಿದ್ದಾರೆ ಎಂದರು. ಪಕ್ಷಾಂತರ ನಿಷೇಧ ಸಂಬಂಧ 30 ದಿನಗಳಲ್ಲೇ ಅರ್ಜಿ ವಿಲೇವಾರಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಜಡ್ಜ್‌ ಮೆಂಟ್‌ ಕೂಡ ಇದೆ. ಇದನ್ನೆಲ್ಲ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸದಸ್ಯರ ಸದಸ್ಯತ್ವ ವಜಾಗೊಳ್ಳಲಿದೆ ಇದರಲ್ಲಿ ಯಾವುದೇ ಅನುದಾನ ಬೇಡ ಎಂದರು.

ಜಿಲ್ಲಾಧಿಕಾರಿ 30 ದಿನಗಳ ಒಳಗೆ ಪಕ್ಷಾಂತರ ನಿಷೇಧ ಅರ್ಜಿ ವಿಲೇವಾರಿ ಮಾಡದಿದ್ದಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ಮೂಲಕ ಇಷ್ಟೆ ದಿನದಲ್ಲಿ ಅರ್ಜಿ ವಿಲೇವಾರಿ ಮಾಡಬೇಕು ಎಂದು ಸೂಚನೆ ಕೊಡಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸುದ್ದಿಗೋಷ್ಠಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಪಿ.ಗಿರೀಶ್‌, ಎಲ್.ಸುರೇಶ್‌, ಮುಖಂಡ ವೆಂಕಟೇಶ್‌ ಸೇರಿದಂತೆ ಪುರಸಭೆ ಸದಸ್ಯರು ಇದ್ದರು.

 ಕೈ ಅಧಿಕಾರ ಹಿಡಿದಿದ್ದಕ್ಕೆ ಜನತೆ ತಲೆ ತಗ್ಗಿಸುವಂತಾಗಿದೆ : ಪಿ.ಗಿರೀಶ್‌

ಕಾಂಗ್ರೆಸ್‌ ವಾಮ ಮಾರ್ಗದಲ್ಲಿ ಪುರಸಭೆ ಅಧಿಕಾರ ಹಿಡಿದಿದ್ದಕ್ಕೆ ಪಟ್ಟಣದ ಜನತೆ ತಲೆ ತಗ್ಗಿಸುವಂತಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಪಿ. ಗಿರೀಶ್‌ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಪುರಸಭೆ ಐವರು ಬಿಜೆಪಿ ಸದಸ್ಯರು ವಿಪ್‌ ಉಲ್ಲಂಘಿಸಿದ್ದಾರೆ. ಸದಸ್ಯತ್ವ ವಜಾಗೊಳಿಸಿಬೇಕು ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ದೂರನ್ನು ಪುರಸಭೆ ಮುಖ್ಯಾಧಿಕಾರಿಗೆ ಸಲ್ಲಿಸಿದ ಬಳಿಕ ಮಾತನಾಡಿದರು. ಕಾಂಗ್ರೆಸ್‌ ಪುರಸಭೆ ಅಧಿಕಾರವನ್ನು ವಾಮ ಮಾರ್ಗದಲ್ಲಿ ಹಿಡಿದಿದೆ. ಪುರಸಭೆಯಲ್ಲಿ ಕಾಂಗ್ರೆಸ್‌ ಗೆದ್ದಿದ್ದು 9 ಸ್ಥಾನ, ಬಿಜೆಪಿ 13 ಸ್ಥಾನ ಗೆದ್ದು ಸ್ಪಷ್ಟ ಬಹುಮತ ಪಡೆದಿದ್ದೇವು. ಸ್ಪಷ್ಟ ಬಹುಮತ ಇಲ್ಲ, ಅಧಿಕಾರ ಬೇಡ ಎಂದು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೂ ಮುನ್ನ ಶಾಸಕರೇ ಹೇಳಿದ್ದರು. ಆ ಮಾತು ಕೇಳಿದಾಗ ಪರವಾಗಿಲ್ಲ ಶಾಸಕರು ನೈತಿಕ ರಾಜಕಾರಣ ಮಾಡಲು ಮುಂದಾಗಿದ್ದಾರೆ ಎಂದು ಕೊಂಡಿದ್ದೆವು ಎಂದರು.

ಅದೇ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಸದಸ್ಯರಾದ ಕಿರಣ್‌ ಗೌಡ ಹಾಗೂ ಹೀನಾ ಕೌಸರ್‌ ಸೆಳೆದುಕೊಂಡು ಅಧಿಕಾರ ನೀಡಿದ್ದಾರೆ. ಆದರೆ ಶಾಸಕರ ಚುನಾವಣೆಯಲ್ಲಿ 36 ಸಾವಿರ ಲೀಡ್‌ ಇತ್ತು. ಲೋಕಸಭೆ ಚುನಾವಣೇಲಿ 18 ಸಾವಿರಕ್ಕೆ ಬಂತು. ರಾಜಕಾರಣ ನಿಂತ ನೀರಲ್ಲ, ಹರಿಯುವ ನೀರು, ರಾಜಕಾರಣದಲ್ಲಿ ಏರಿಳಿತಗಳು ಸರ್ವೇ ಸಾಮಾನ್ಯ ಎಂದರು. ಪುರಸಭೆ ಬಿಜೆಪಿ ಐವರು ಸದಸ್ಯರ ಅನರ್ಹಗೊಳಿಸಲು ಪಣ ತೊಟ್ಟಿದ್ದೇವೆ. ಅದೇ ನನ್ನ ಹಠ. ಪಕ್ಷಾಂತರ ಮಾಡಿದ ಸದಸ್ಯರಿಗೆ ಬುದ್ಧಿ ಕಲಿಸಲು ಹೊರಟಿದ್ದೇವೆ. ಕೇವಲ 30 ದಿನಗಳಲ್ಲೇ ಪಕ್ಷಾಂತರರಿಗೆ ಉತ್ತರ ಸಿಗಲಿದೆ ಎಂದರು. ಈ ಸಮಯದಲ್ಲಿ ವಕೀಲ ಸಯ್ಯದ್‌ ಹಮೀರ್‌, ಪುರಸಭೆ ಮಾಜಿ ಉಪಾಧ್ಯಕ್ಷೆ ದೀಪಿಕಾ ಅಶ್ವಿನ್‌, ಪುರಸಭೆ ಸದಸ್ಯರಾದ ಎಸ್.ಕುಮಾರ್‌, ಪಟ್ಟಾಭಿ, ಮಹದೇವಮ್ಮ, ಸಾಜೀದಾ ಬೇಗಂ ಇದ್ದರು.