ಸಾರಾಂಶ
ದಿನೇ ದಿನೇ ಗಾಂಜಾ ಸೇವನೆ ಹಾಗೂ ಮದ್ಯವ್ಯಸನಿಗಳ ಹಾವಳಿ ಹೆಚ್ಚಾಗಿದ್ದು, ರಸ್ತೆಯಲ್ಲಿ ತಿರುಗಾಡಲೂ ಭಯ ಬೀಳುವ ಪರಿಸ್ಥಿತಿ ಎದುರಾಗಿದೆ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ವಾರ್ಡ್ ನಂಬರ್ 56ರ ಕೃಷ್ಣಮೂರ್ತಿಪುರಂ ಹಾಗೂ ಲಕ್ಷ್ಮಿಪುರಂ ವ್ಯಾಪ್ತಿಯಲ್ಲಿ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂಬ ದೂರು ಪಾದಯಾತ್ರೆ ವೇಳೆ ಕೇಳಿ ಬಂದ ಹಿನ್ನೆಲೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಶಾಸಕ ಟಿ.ಎಸ್. ಶ್ರೀವತ್ಸ ಖಡಕ್ ಸೂಚನೆ ನೀಡಿದರು.ಮಂಗಳವಾರ ಬೆಳಗ್ಗೆ ಕೃಷ್ಣಮೂರ್ತಿಪುರಂ ಹಾಗೂ ಲಕ್ಷ್ಮಿಪುರಂ ವ್ಯಾಪ್ತಿಯಲ್ಲಿ ಶಾಸಕರು ಪಾದಯಾತ್ರೆ ನಡೆಸಿ, ಮನೆ-ಮನೆಗೆ ತೆರಳಿ ಸಾರ್ವಜನಿಕರ ಸಮಸ್ಯೆ ಆಲಿಸಿದರು. ಈ ವೇಳೆ ಸ್ಥಳೀಯರು ಈ ಭಾಗದಲ್ಲಿ ಎರಡು ಕಡೆ ರಸ್ತೆ ಕಾಮಗಾರಿ ನಡೆದಿಲ್ಲ. ಒಳಚರಂಡಿ ಸಮಸ್ಯೆಯೂ ಇದೆ ಎಂಬದನ್ನು ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಶಾಸಕರು ಕೂಡಲೇ ರಸ್ತೆ ನಿರ್ಮಾಣ ಹಾಗೂ ಯುಜಿಡಿ ಸಮಸ್ಯೆ ಪರಿಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಈ ವ್ಯಾಪ್ತಿಯಲ್ಲಿ ದಿನೇ ದಿನೇ ಗಾಂಜಾ ಸೇವನೆ ಹಾಗೂ ಮದ್ಯವ್ಯಸನಿಗಳ ಹಾವಳಿ ಹೆಚ್ಚಾಗಿದ್ದು, ರಸ್ತೆಯಲ್ಲಿ ತಿರುಗಾಡಲೂ ಭಯ ಬೀಳುವ ಪರಿಸ್ಥಿತಿ ಎದುರಾಗಿದೆ. ಅಲ್ಲದೇ ಶಾಲಾ, ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೂಡ ರಸ್ತೆ ಪಕ್ಕ ನಿಂತು ಹರಟೆ ಹೊಡೆಯುತ್ತಿರುತ್ತಾರೆ ಎಂಬ ದೂರು ಕೇಳಿಬಂದಿತು. ಸ್ಥಳದಲ್ಲಿದ್ದ ಪೊಲೀಸರಿಗೆ ಈ ಸಂಬಂಧ ಕ್ರಮ ಕೈಗೊಳ್ಳುವಂತೆ ತಿಳಿಸಿದರಲ್ಲದೆ, ನಾಳೆಯಿಂದ ದಿನಂಪ್ರತಿ ಪೊಲೀಸ್ ಗರುಡ ವಾಹನ ಗಸ್ತಿಗೆ ಖಡಕ್ ಸೂಚನೆ ನೀಡಿದರು.ವಾರ್ಡಿನ ಪ್ರಮುಖರಾದ ವಿಶ್ವ, ಪಿ.ಟಿ. ಕೃಷ್ಣ, ರವಿ, ಮಧು, ಜೈರಾಮ್, ಪ್ರದೀಪ್ ಕುಮಾರ್, ಕಿಶೋರ್, ಶಶಿ ಇದ್ದರು.