ಹಾರೋಬಂಡೆ ಪಿಡಿಒ ವಿರುದ್ಧ ಲೋಕಾಯುಕ್ತಕ್ಕೆ ದೂರು; ನ್ಯಾಯಾಧೀಶೆ ಅರುಣಾಕುಮಾರಿ

| Published : Feb 28 2024, 02:40 AM IST

ಹಾರೋಬಂಡೆ ಪಿಡಿಒ ವಿರುದ್ಧ ಲೋಕಾಯುಕ್ತಕ್ಕೆ ದೂರು; ನ್ಯಾಯಾಧೀಶೆ ಅರುಣಾಕುಮಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಬಡತನ ನಿರ್ಮೂಲನೆಯಾದರೆ ಮಾತ್ರ ಬಾಲಕಾರ್ಮಿಕ ಪದ್ಧತಿ ಪಿಡುಗನ್ನು ಹೋಗಲಾಡಿಸಲು ಸಾಧ್ಯ. ಜಗತ್ತಿನ ಬಹುತೇಕ ರಾಷ್ಟ್ರಗಳು ಬಾಲಕಾರ್ಮಿಕ ಪದ್ಧತಿಯನ್ನು ನಿಷೇಧಿಸಿವೆ. ನಮ್ಮ ದೇಶದಲ್ಲೂ 1986ರಲ್ಲಿಯೇ ನಿಷೇಧ ಮಾಡಲಾಗಿದೆ. ಬಾಲ ಕಾರ್ಮಿಕ ಪದ್ಧತಿ ಸಮಾಜಕ್ಕೆ ಅಪಾಯಕಾರಿಯಾದುದು. ಬಾಲ್ಯದಲ್ಲಿಯೇ ಮಕ್ಕಳ ಭವಿಷ್ಯ ಮುಗುಚಿ ಹೋಗದಂತೆ ನೋಡಿಕೊಳ್ಳುವುದು ಎಲ್ಲರ ಹೊಣೆಯಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ತಾಲೂಕಿನ ಗುಂತಪ್ಪನ ಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಜಾಗದಲ್ಲಿ ಖಾಸಗಿಯವರು ಜಾಗ ಕಬಳಿಸಿಕೊಂಡು ದೇವಸ್ಥಾನವನ್ನು

ನಿರ್ಮಿಸಿದ್ದು, ದೇವಾಲಯದ ಸುತ್ತ ಕಾಂಪೌಂಡ್ ಹಾಕಿ ಅದರಲ್ಲಿ ಹೆಣ್ಣು ಮಕ್ಕಳ ಶೌಚಾಲಯಗಳನ್ನು ಸೇರಿಸಿ ಕೊಂಡಿದ್ದು, ಈ ಕುರಿತು ಬಗ್ಗೆ ಬಂದ ದೂರಿನ ಮೇರೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಎ.ಅರುಣಾಕುಮಾರಿಯವರು ಕಳೆದ 13 ರಂದು ಸ್ಥಳ ಪರಿಶೀಲನೆ ಮಾಡಿದ್ದರು. ಈ ಅನಧಿಕೃತ ಜಾಗದ ಒತ್ತುವರಿಗೆ ಸಂಬಂಧಿಸಿದಂತೆ ಹಾರೋಬಂಡೆ ಗ್ರಾಮ ಪಂಚಾಯತಿ ಅಭಿವೃಧ್ಧಿ ಅಧಿಕಾರಿ (ಪಿಡಿಒ) ವಿರುದ್ಧ ಲೊಕಾಯುಕ್ತ ತನಿಖೆಗೆ ಬರೆದಿರುವುದಾಗಿ ನ್ಯಾಯಾಧೀಶೆ ಎ.ಅರುಣ ಕುಮಾರಿ ತಿಳಿಸಿದರು.

ತಾಲೂಕಿನ ಹಾರೋಬಂಡೆ ಪಂಚಾಯಿತಿ ವ್ಯಾಪ್ತಿಯ ಗುಂತಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಲಕಾರ್ಮಿಕ ಪದ್ದತಿ ವಿರೋಧಿ ಬಗ್ಗೆ ಪೋಷಕರಿಗೆ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿದ ಅವರು, ಈ ಹಿಂದೆ ಗ್ರಾಮದವರಿಂದ ದೂರು ಬಂದಿದ್ದ ಹಿನ್ನೆಲೆಯಲ್ಲಿ ಇದೇ ಶಾಲೆಗೆ ಭೇಟಿ ನೀಡಿದ್ದ ವೇಳೆ ಶೌಚಾಲಯ ನಿರ್ಮಿಸುವುದು ಸೇರಿ ಕಾಂಪೌಂಡ್ ನಿರ್ಮಾಣದ ವೇಳೆ ಎರಡೆರಡು ಬಿಲ್ ಮಾಡಿದ ಬಗ್ಗೆ ವಿವರ ಕೇಳಿದ್ದರು. ಆದರೆ ಪಿಡಿಒ ಅದನ್ನು ಒದಗಿಸಲು ವಿಫಲರಾಗಿದ್ದರು. ಕೂಡಲೇ ಹೊಸ ಹೆಣ್ಣು ಮಕ್ಕಳ ಶೌಚಾಲಯ ನಿರ್ಮಿಸಿಕೊಡುವುದಾಗಿ ಒಪ್ಪಿಕೊಂಡಿದ್ದರು. ಆದರೆ ಇದುವರೆಗೂ ಶೌಚಾಲಯ ನಿರ್ಮಾಣವಾಗಿಲ್ಲ, ಕಾಂಪೌಂಡ್ ಗೆ ಎರಡೆರಡು ಬಿಲ್ ಮಾಡಿದ್ದರ ಬಗ್ಗೆ ವಿವರ ಒದಗಿಸಲೂ ಇಲ್ಲಾ. ಹಾಗಾಗಿ ಈ ಪಿಡಿಒ ಮೇಲೆ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದೇನೆಂದು ತಿಳಿಸಿದರು.

ಬಡತನ ನಿರ್ಮೂಲನೆಯಾದರೆ ಮಾತ್ರ ಬಾಲಕಾರ್ಮಿಕ ಪದ್ಧತಿ ಪಿಡುಗನ್ನು ಹೋಗಲಾಡಿಸಲು ಸಾಧ್ಯ. ಜಗತ್ತಿನ ಬಹುತೇಕ ರಾಷ್ಟ್ರಗಳು ಬಾಲಕಾರ್ಮಿಕ ಪದ್ಧತಿಯನ್ನು ನಿಷೇಧಿಸಿವೆ. ನಮ್ಮ ದೇಶದಲ್ಲೂ 1986ರಲ್ಲಿಯೇ ನಿಷೇಧ ಮಾಡಲಾಗಿದೆ. ಬಾಲ ಕಾರ್ಮಿಕ ಪದ್ಧತಿ ಸಮಾಜಕ್ಕೆ ಅಪಾಯಕಾರಿಯಾದುದು. ಬಾಲ್ಯದಲ್ಲಿಯೇ ಮಕ್ಕಳ ಭವಿಷ್ಯ ಮುಗುಚಿ ಹೋಗದಂತೆ ನೋಡಿಕೊಳ್ಳುವುದು ಎಲ್ಲರ ಹೊಣೆಯಾಗಿದೆ. ಬಾಲ ಕಾರ್ಮಿಕರು ಎಲ್ಲಿಯೇ ಕಂಡು ಬಂದರೂ ಅದರ ವಿರುದ್ಧ ಧ್ವನಿ ಎತ್ತಬೇಕು.ಆ ಪದ್ಧತಿಯಿಂದ ಮಕ್ಕಳನ್ನು ರಕ್ಷಣೆ ಮಾಡಬೇಕು. ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ಬಳಸಿಕೊಂಡರೆ ಅಂಥವರಿಗೆ ರು. 20 ರಿಂದ 50 ಸಾವಿರದವರೆಗೆ ದಂಡ ಮತ್ತು 6 ತಿಂಗಳಿಂದ 3 ವರ್ಷದವರೆಗೆ ಶಿಕ್ಷೆ ಆಗುತ್ತದೆ ಎಂದು ಹೇಳಿದರು.ಇದೇ ವೇಳೆ ಬಾಲಕಾರ್ಮಿಕ ಪದ್ದತಿ ವಿರೋಧಿ ಬಿತ್ತಿ ಪತ್ರಗಳನ್ನು ವಿದ್ಯಾರ್ಥಿಗಳಿಂದ ಬಿಡುಗಡೆಗೊಳಿಸಿದರು.

ಈ ವೇಳೆ ಕಾರ್ಮಿಕ ಅಧಿಕಾರಿ ಮಂಜುಳಾ,ಶಾಲಾ ಮುಖ್ಯ ಶಿಕ್ಷಕಿ ಪ್ರಭಾವತಿ ಮಯನಿರಾಜ್,ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳು ವಿದ್ಯಾರ್ಥಿಗಳು,ಪೋಷಕರು ಇದ್ದರು.ಬಾಲಕಾರ್ಮಿಕ ಪದ್ಧತಿಗೆ ನಿಷೇಧ ಇರುವ ವೃತ್ತಿಗಳು

ರೈಲ್ವೆ, ಕಟ್ಟಡ, ನಿಲ್ದಾಣ ಅಥವಾ ರೈಲ್ವೆ ಲೈನುಗಳ ಕಾಮಗಾರಿ, ರೈಲ್ವೆ ಆವರಣದಲ್ಲಿ ಕೆಂಡ ಆಯುವುದು, ಬೂದಿಗುಂಡಿ ತೆರವು, ಪ್ಲಾಟ್‌ಫಾರ್ಮ್‌ ಅಥವಾ ಚಲಿಸುವ ರೈಲುಗಳಲ್ಲಿ ಆಹಾರ ಪೂರೈಕೆ, ಬಂದರು ವ್ಯಾಪ್ತಿಯ ಕಾಮಗಾರಿ, ಕಸಾಯಿಖಾನೆ, ಆಟೊಮೊಬೈಲ್‌ ವರ್ಕ್‌ಶಾಪ್‌ಗಳು, ಗ್ಯಾರೇಜುಗಳು, ಎರಕದ ಮನೆ, ವಿಷಕಾರಿ ವಸ್ತು ಅಥವಾ ಸ್ಫೋಟಕಗಳ ನಿರ್ವಹಣೆ, ಕೈಮಗ್ಗ, ವಿದ್ಯುತ್‌ ಮಗ್ಗ, ಗಣಿಗಳು, ಪ್ಲಾಸ್ಟಿಕ್‌ ಘಟಕಗಳು, ಮನೆಕೆಲಸ, ಹೋಟೆಲುಗಳು, ಸ್ಪಾ, ಮನರಂಜನಾ ಸ್ಥಳ, ಮುಳುಗು ಶೋಧನೆ, ಸರ್ಕಸ್‌, ಬೀಡಿ, ಕಾರ್ಪೆಟ್‌, ಸಿಮೆಂಟ್‌ ತಯಾರಿಕೆ, ಬಟ್ಟೆ ಮುದ್ರಣ, ಬಣ್ಣ, ಬೆಂಕಿಪೊಟ್ಟಣ, ಸ್ಫೋಟಕ, ಪಟಾಕಿ, ಅರಗು, ಸೋಪು ತಯಾರಿಕೆ, ಕಟ್ಟಡ ನಿರ್ಮಾಣ, ಗ್ರಾನೈಟ್‌ ಕಲ್ಲುಗಳ ಸಂಸ್ಕರಣೆ ಮತ್ತು ಪಾಲಿಷ್‌, ಬಳಪ, ಅಗರಬತ್ತಿ, ಪಾತ್ರೆಗಳು, ಟೈರ್‌, ಗಾಜಿನ ವಸ್ತು ತಯಾರಿಕೆ, ಸೀಸ, ಪಾದರಸದಂಥ ವಿಷಕಾರಿ ಖನಿಜಗಳು ಮತ್ತು ಕೀಟನಾಶಕ ಬಳಸುವ ಸಂಸ್ಕರಣಾ ಘಟಕಗಳು, ಚಿಂದಿ ಆಯುವುದು ಇತ್ಯಾದಿ ಸ್ಥಳಗಳಲ್ಲಿ ಬಾಲ ಕಾರ್ಮಿಕರನ್ನು ನಿಷೇಧಿಸಲಾಗಿದೆ. ಪೋಷಕರಿಗೆ ಆರ್ಥಿಕ ಸ್ವಾವಲಂಬನೆ ಬಂದಾಗ ಬಾಲ ಕಾರ್ಮಿಕ ಪದ್ಧತಿ ಸಂಪೂರ್ಣ ಹೋಗಲಾಡಿಸಬಹುದು. ಮಕ್ಕಳಿಗೆ ಶಿಕ್ಷಣ ಕಲ್ಪಿಸುವುದು ಪೋಷಕರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.