ನರೇಗಾ ಕಾರ್ಮಿಕರ ಇ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ: ಧರ್ಮರ ಕೃಷ್ಣಪ್ಪ

| Published : Oct 09 2025, 02:01 AM IST

ನರೇಗಾ ಕಾರ್ಮಿಕರ ಇ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ: ಧರ್ಮರ ಕೃಷ್ಣಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಇ- ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದರೆ ಕೂಲಿ ಪಾವತಿಯಲ್ಲಿ ವೇಗ ಮತ್ತು ಪಾರದರ್ಶಕತೆ ಹೆಚ್ಚುತ್ತದೆ. ಜತೆಗೆ ಕಾರ್ಮಿಕರ ಹಾಜರಾತಿಯನ್ನು ಮುಖ ಆಧರಿತ ತಂತ್ರಾಂಶದ ಮೂಲಕ ಎನ್ಎಂಎಂಎಸ್ ಅಪ್ಲಿಕೇಶನ್‌ನಲ್ಲಿ ನಿಖರವಾಗಿ ದಾಖಲಿಸಬಹುದು.

ಲಕ್ಷ್ಮೇಶ್ವರ: ನರೇಗಾ ಕೂಲಿಕಾರರು ಇ- ಕೆವೈಸಿ ಪ್ರಕ್ರಿಯೆ ಮಾಡಿಸುವುದನ್ನು ಕಡ್ಡಾಯಗೊಳಿಸಿದ್ದು, 14 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಜಾಬ್ ಕಾರ್ಡ್ ಹೊಂದಿರುವ ಕೂಲಿಕಾರರು ಇ- ಕೆವೈಸಿ ಪ್ರಕ್ರಿಯೆಯನ್ನು ತಕ್ಷಣ ಪೂರ್ಣಗೊಳಿಸಬೇಕೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ ತಿಳಿಸಿದರು.

ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿರುವ ಅವರು, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಿಂದ ಬಂದ ಸೂಚನೆ ಮೇರೆಗೆ ಎನ್ಎಂಎಂಎಸ್(ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಮ್) ಇ- ಕೆವೈಸಿ ಪ್ರಕ್ರಿಯೆ ಕಡ್ಡಾಯವಾಗಿದೆ. ಆದರೆ ತಾಲೂಕಿನಲ್ಲಿ ಇನ್ನೂ ಹೆಚ್ಚಿನ ಕೂಲಿಕಾರರು ಈ ಪ್ರಕ್ರಿಯೆ ಪೂರ್ಣಗೊಳಿಸದಿರುವುದರಿಂದ ತಾಲೂಕು ಪಂಚಾಯಿತಿಯ ಐಇಸಿ ಚಟುವಟಿಕೆಗಳ ಮೂಲಕ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚಿಸಲಾಗಿದೆ.ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಐಇಸಿ ಚಟುವಟಿಕೆಗಳ ಮೂಲಕ ಗ್ರಾಮಸ್ಥರಿಗೆ ಇ- ಕೆವೈಸಿಯ ಮಹತ್ವ ತಿಳಿಸಲಾಗುತ್ತಿದೆ. ಕಾರ್ಮಿಕರು ತಮ್ಮ ಜಾಬ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಸಹಿತವಾಗಿ ಗ್ರಾಮ ಪಂಚಾಯಿತಿ ಕಚೇರಿಗೆ ಅಥವಾ ಆಧಾರ್ ಕೇಂದ್ರಗಳಿಗೆ ಭೇಟಿ ನೀಡಿ ಅ. 20ರೊಳಗಾಗಿ ಇ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ ಎಂದರು.ಇ- ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದರೆ ಕೂಲಿ ಪಾವತಿಯಲ್ಲಿ ವೇಗ ಮತ್ತು ಪಾರದರ್ಶಕತೆ ಹೆಚ್ಚುತ್ತದೆ. ಜತೆಗೆ ಕಾರ್ಮಿಕರ ಹಾಜರಾತಿಯನ್ನು ಮುಖ ಆಧರಿತ ತಂತ್ರಾಂಶದ ಮೂಲಕ ಎನ್ಎಂಎಂಎಸ್ ಅಪ್ಲಿಕೇಶನ್‌ನಲ್ಲಿ ನಿಖರವಾಗಿ ದಾಖಲಿಸಬಹುದು. ಇದು ನರೇಗಾ ಯೋಜನೆಯ ವಿಶ್ವಾಸಾರ್ಹತೆ ಮತ್ತು ಪರಿಣಾಮಕಾರಿತೆಯನ್ನು ಹೆಚ್ಚಿಸುತ್ತದೆ. ಸದ್ಯದಲ್ಲೇ ಎನ್ಎಂಎಂಎಸ್ ಅಪ್ಲಿಕೇಶನ್‌ನಲ್ಲಿ ಕಾರ್ಮಿಕರ ಫೋಟೋ ಸೆರೆ ಹಿಡಿದು ಆಧಾರ್ ಸಂಖ್ಯೆಯೊಂದಿಗೆ ಮುಖ ಹೊಂದಾಣಿಕೆ ಮೂಲಕ ಹಾಜರಾತಿ ದೃಢಪಡಿಸಲಾಗುತ್ತಿದೆ. ಇ-ಕೆವೈಸಿ ಪೂರ್ಣಗೊಳಿಸದ ಕಾರ್ಮಿಕರ ಹಾಜರಾತಿಯನ್ನು ಮುಂದಿನ ದಿನಗಳಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದರು.