ಚಿತ್ರದುರ್ಗದ ಲಿಡ್ಕರ್ ಭವನದಲ್ಲಿ ಮಂಗಳವಾರ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿ ವ್ಯವಸ್ಥೆಯಿಂದಾಗಿ ಸಮಾನತೆ ಕಾಣುತ್ತಿದ್ದೇವೆ. ಆದರೆ ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕ ವ್ಯವಸ್ಥೆಯಲ್ಲಿ ನಾವಿನ್ನೂ ಪೂರ್ಣ ಸಮಾನತೆ ಕಂಡುಕೊಂಡಿಲ್ಲ. ಸಂವಿಧಾನವನ್ನು ಉಳಿಸುತ್ತಾ, ಓದುತ್ತಾ ಮತ್ತು ತಿಳಿಯುತ್ತಾ ಎಲ್ಲರಿಗೂ ಸಮಾನತೆ ದೊರಕಿಸುವ ಹೋರಾಟ ಮುಂದುವರಿಸಬೇಕಾದ ಅಗತ್ಯ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಪ್ರತಿಪಾದಿಸಿದರು.ನಗರದ ಲಿಡ್ಕರ್ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರು ‘ನಾನು ತಂದ ರಥವನ್ನು ಮುಂದಕ್ಕೆ ಕೊಂಡೊಯ್ಯಿರಿ, ಹಿಂದಕ್ಕೆ ತಳ್ಳಬೇಡಿ’ ಎಂದು ಹೇಳಿದ್ದರು. ಆ ರಥವನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿ ಇಂದಿನ ಯುವ ಜನತೆ ಹಾಗೂ ವಿದ್ಯಾರ್ಥಿಗಳ ಮೇಲಿದೆ. ಯುವಕರು ಸಂವಿಧಾನದ ಮೌಲ್ಯಗಳನ್ನು ಅರಿತು ದೇಶದ ಜವಾಬ್ದಾರಿಯುತ ಪ್ರಜೆಗಳಾಗಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳು ಮತ್ತು ಯುವಜನತೆಯಲ್ಲಿ ಪ್ರಜಾಪ್ರಭುತ್ವ ಹಾಗೂ ಸಂಸದೀಯ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸಲು ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಸೆ.16 ರಿಂದ 30ರವರೆಗೆ 15 ದಿನಗಳ ಕಾಲ ಜರುಗುವ ಯುವ ಸಂಸತ್ತು ಸಭೆಗಳು ನಡೆಯಲಿವೆ. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರತಿಯೊಬ್ಬ ಅಧಿಕಾರಿಯೂ ತಮ್ಮ ಜವಾಬ್ದಾರಿ ಅರಿತು ಗಂಭೀರವಾಗಿ ಸಂವಿಧಾನಿಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.ಪ್ರಜೆಗಳೇ ದೇಶದ ಪ್ರಭುಗಳು ಎಂಬ ತತ್ವದಡಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವುದು ಹಾಗೂ ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಕರ್ನಾಟಕ ಸರ್ಕಾರವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ಸಂವಿಧಾನದ ಪೀಠಿಕೆ ಓದುವ ಕಾರ್ಯಕ್ರಮ ಹಾಗೂ ಬೀದರ್‌ನಿಂದ ಚಾಮರಾಜನಗರದವರೆಗೆ ಬೃಹತ್ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಿದೆ ಎಂದು ಸಚಿವರು ಸ್ಮರಿಸಿದರು.
ಜಿಲ್ಲಾಧಿಕಾರಿ ಎಸ್.ರಮ್ಯಾ ಮಾತನಾಡಿ, ಪ್ರಜಾಪ್ರಭುತ್ವ ಎಂಬ ಆಡಳಿತ ವ್ಯವಸ್ಥೆ ಭಾರತ ದೇಶಕ್ಕೆ ಹೊಸದೇನಲ್ಲ. ರಾಜಪ್ರಭುತ್ವಕ್ಕೂ ಮೊದಲು, ವೈದಿಕ ಕಾಲದಲ್ಲೇ ಸಭಾ ಮತ್ತು ಸಮಿತಿಗಳಂತಹ ಸಣ್ಣ ಸಣ್ಣ ಗಣರಾಜ್ಯ ಮಾದರಿಯ ಪ್ರಜಾಸತ್ತಾತ್ಮಕ ವ್ಯವಸ್ಥೆ ನಮ್ಮಲ್ಲಿ ಅಸ್ತಿತ್ವದಲ್ಲಿತ್ತು ಎಂದು ತಿಳಿಸಿದರು.ಆರಂಭಿಕ ವೈದಿಕ ಕಾಲದಲ್ಲಿ ರಾಜಪ್ರಭುತ್ವ ಇರಲಿಲ್ಲ. ಬದಲಿಗೆ ಇಂದಿನ ಸಂಸತ್ತಿನ ಮೇಲ್ಮನೆ ಮತ್ತು ಕೆಳಮನೆಗಳಂತೆಯೇ ಕಾರ್ಯನಿರ್ವಹಿಸುತ್ತಿದ್ದ ‘ಸಭಾ’ ಮತ್ತು ‘ಸಮಿತಿ’ಗಳ ಮೂಲಕ ಸಾರ್ವಜನಿಕರೇ ನಾಯಕರನ್ನು ಆಯ್ಕೆ ಮಾಡುತ್ತಿದ್ದರು ಮತ್ತು ಮುಖ್ಯ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು ಎಂದು ತಿಳಿಸಿದರು.
ಜಗತ್ತಿನ ಶ್ರೇಷ್ಠ ತತ್ವಜ್ಞಾನಿ ಗೌತಮ ಬುದ್ಧ ಅವರು ಕೂಡ ಶಾಕ್ಯ ಎಂಬ ಗಣರಾಜ್ಯ ಹಿನ್ನೆಲೆಯಿಂದ ಬಂದವರು. ಅವರ ವಿಶಾಲ ಆಲೋಚನೆಗಳು ಮತ್ತು ಸಮಾನತೆಯ ಚಿಂತನೆಗಳಿಗೆ ಅಂದಿನ ಪ್ರಜಾಸತ್ತಾತ್ಮಕ ವಾತಾವರಣವೇ ಪ್ರೇರಣೆಯಾಗಿತ್ತು. ಹೀಗಾಗಿ ಪ್ರಜಾಪ್ರಭುತ್ವದ ಕಲ್ಪನೆ ನಮಗೆ ಹೊಸತಲ್ಲ, ಅದು ನಮ್ಮ ಸಂಸ್ಕೃತಿ ಬೇರುಗಳಲ್ಲೇ ಇದೆ ಎಂದರು.ಮೈಸೂರಿನ ಚಿಂತಕ ಹಾಗೂ ಬರಹಗಾರ ಅರಕಲವಾಡಿ ನಾಗೇಂದ್ರ ಉಪನ್ಯಾಸ ನೀಡಿ, ನಮಗೆ ಲಭಿಸಿರುವ ಸ್ವಾತಂತ್ರ್ಯ, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯು ಪೂರ್ವಜರ ತ್ಯಾಗದ ಫಲವಾಗಿದೆ. ಅಂಬೇಡ್ಕರ್ ಅವರು ಹೇಳಿದಂತೆ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಸಿಗದಿದ್ದರೆ ಸಂವಿಧಾನವು ತನ್ನ ಆಶಯ ಹಾಗೂ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಹಕ್ಕುಗಳನ್ನು ಕಳೆದುಕೊಂಡರೆ ಮನುಷ್ಯ ಸತ್ತಂತೆ ಬದುಕಬೇಕಾಗುತ್ತದೆ. ಆದ್ದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು, ಸಂವಿಧಾನ ಪೀಠಿಕೆ ವಾಚಿಸಿ, ಪ್ರತಿಜ್ಞಾವಿಧಿ ಬೋಧಿಸಿದರು.ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಂ.ಬಾಬು, ವಕೀಲರ ಸಂಘದ ಅಧ್ಯಕ್ಷ ಮಹೇಶ್ವರಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ಮಲ್ಲಿಕಾರ್ಜುನ ಸೇರಿದಂತೆ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಇದ್ದರು.