ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿದೆ. ಬಾಕಿ ಉಳಿದಿರುವ ಎಲ್ಲ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಹಾವೇರಿ: ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿದೆ. ಬಾಕಿ ಉಳಿದಿರುವ ಎಲ್ಲ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಕೃತಿ ವಿಕೋಪ ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.2024ರಲ್ಲೇ ಪೂರ್ಣಗೊಳ್ಳಬೇಕಿದ್ದ ತಡಸ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇನ್ನೂ ಮುಗಿಯದಿರುವುದು ಬೇಸರದ ಸಂಗತಿ. ಕಾಮಗಾರಿಯನ್ನು ಪ್ರಸಕ್ತ ವರ್ಷದ ಡಿಸೆಂಬರ್ ಒಳಗೆ ಪೂರ್ಣಗೊಳಿಸಿ ನೀರು ಪೂರೈಕೆ ಆರಂಭಿಸಬೇಕು ಎಂದು ಗಡುವು ನೀಡಿದರು.
ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಜೂನ್‌ನಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಶೇ.42ರಷ್ಟು ಮಳೆ ಕೊರತೆಯಾಗಿದೆ. ಹಿರೇಕೆರೂರು, ರಟ್ಟಿಹಳ್ಳಿ ಸೇರಿದಂತೆ ನಾಲ್ಕು ತಾಲೂಕುಗಳಲ್ಲಿ ಶೇ.60ಕ್ಕಿಂತ ಹೆಚ್ಚು ಮಳೆ ಕೊರತೆಯಿದ್ದು, ರಾಣಿಬೆನ್ನೂರು ತಾಲೂಕಿನಲ್ಲಿ ಮಾತ್ರ ಸಾಧಾರಣ ಮಳೆಯಾಗಿದೆ. ಉಳಿದ ತಾಲೂಕುಗಳಲ್ಲಿ ಶೇ.20ರಿಂದ 60ರವರೆಗೆ ಮಳೆ ಕೊರತೆ ದಾಖಲಾಗಿದೆ ಎಂದು ಮಾಹಿತಿ ನೀಡಿದರು.ಪ್ರಸ್ತುತ ಜಿಲ್ಲೆಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಸೆಪ್ಟೆಂಬರ್‌ವರೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇಲ್ಲ. ಆದರೆ ಕೊಳವೆಬಾವಿಗಳು ಮರುಪೂರಣಗೊಳ್ಳಲು ಇನ್ನಷ್ಟು ಮಳೆಯ ಅಗತ್ಯವಿದೆ. ಬರಗಾಲ ಘೋಷಣೆಯಾದರೆ ಮಾತ್ರ ಎಸ್‌ಡಿಆರ್‌ಎಫ್ ಅನುದಾನ ಬಳಸಲು ಅವಕಾಶವಿದ್ದರೂ, ಯಾವುದೇ ಪರಿಸ್ಥಿತಿ ಎದುರಾದರೂ ನೀರು ಪೂರೈಕೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದರು.
ಜಿಪಂ ಸಿಇಒ ದಲ್ಜೀತ್‌ಕುಮಾರ್ ಮಾತನಾಡಿ, ಜಿಲ್ಲೆಯ 44 ಗ್ರಾಮಗಳಿಗೆ ಅಗತ್ಯವಿದ್ದರೆ ಖಾಸಗಿ ಕೊಳವೆಬಾವಿಗಳಿಂದ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಜನವರಿಯೊಳಗೆ 66 ಹೊಸ ಕೊಳವೆಬಾವಿಗಳನ್ನು ಕೊರೆಯಲಾಗುವುದು. ಟಾಸ್ಕ್‌ಫೋರ್ಸ್ ಮೂಲಕ 336 ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, 2.40 ಕೋಟಿ ರು. ವೆಚ್ಚ ಮಾಡಲಾಗಿದೆ ಎಂದರು.ತಡಸ ಯೋಜನೆ ವಿಳಂಬಕ್ಕೆ ಶಾಸಕರ ಆಕ್ರೋಶ: ತಡಸ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಎರಡು ವರ್ಷ ವಿಳಂಬವಾಗಿರುವುದಕ್ಕೆ ಶಿಗ್ಗಾಂವಿ ಶಾಸಕ ಯಾಸೀರ್‌ಖಾನ್ ಪಠಾಣ ಆಕ್ರೋಶ ವ್ಯಕ್ತಪಡಿಸಿದರು. ಗುತ್ತಿಗೆದಾರರ ವಿರುದ್ಧ ಇನ್ನೂ ಕ್ರಮ ಕೈಗೊಳ್ಳದಿರುವುದೇಕೆ ಎಂದು ಪ್ರಶ್ನಿಸಿದ ಅವರು, ಬಿಲ್ ತಡೆಹಿಡಿದರೆ ಗುತ್ತಿಗೆದಾರರು ಕೆಲಸ ಪೂರ್ಣಗೊಳಿಸುತ್ತಾರೆ ಎಂದರು.
ಇದಕ್ಕೆ ಉತ್ತರಿಸಿದ ಸಿಇಒ ದಲ್ಜೀತ್ ಕುಮಾರ್, ಸುಮಾರು 25 ಕಿಮೀ ಪೈಪ್‌ಲೈನ್ ಅಳವಡಿಕೆ ಸೇರಿದಂತೆ ಕೆಲವೇ ಕಾಮಗಾರಿಗಳು ಬಾಕಿ ಉಳಿದಿದ್ದು, ಆ. 30ರೊಳಗೆ ಅವುಗಳನ್ನು ಪೂರ್ಣಗೊಳಿಸಲಾಗುವುದು ಎಂದರು. ಈ ಹಿಂದೆ 30ಕ್ಕೂ ಹೆಚ್ಚು ನೋಟಿಸ್‌ಗಳನ್ನು ಗುತ್ತಿಗೆದಾರರಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.ಅಧಿಕಾರಿಗಳಿಗೆ ಶಿವಣ್ಣನವರ ತರಾಟೆ: ದೇವಗಿರಿ ಕುಡಿಯುವ ನೀರಿನ ಯೋಜನೆ ವಿಳಂಬವಾಗುತ್ತಿರುವ ವಿಚಾರವಾಗಿ ಶಾಸಕ ಬಸವರಾಜ ಶಿವಣ್ಣನವರ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಟೆಂಡರ್ ಪೂರ್ಣಗೊಂಡಿರುವ ಯೋಜನೆಗೆ ತಕ್ಷಣ ಕಾರ್ಯಾದೇಶ ನೀಡುವಂತೆ ಸೂಚಿಸಿದರು. ಕಾಮಗಾರಿ ವಿಳಂಬಕ್ಕೆ ಇಂಜಿನಿಯರ್ ನೀಡಿದ ವಿವರಣೆಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದರು. ಸಭೆಗೆ ಗೈರಾಗಿದ್ದ ತುಂಗಾ ಮೇಲ್ದಂಡೆ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ನೋಟಿಸ್ ನೀಡುವಂತೆಯೂ ಸೂಚಿಸಿದರು.
ಕೆರೆಗಳ ನೀರು ಸಮರ್ಪಕ ಬಳಕೆಗೆ ಸೂಚನೆ: ಗುತ್ತಲ ಕೆರೆ ಈಗಾಗಲೇ ತುಂಬಿದ್ದು, ನೆಗಳೂರು ಕೆರೆ ಕೂಡ ತುಂಬುವ ಹಂತದಲ್ಲಿದೆ. ಲಭ್ಯವಿರುವ ನೀರಿನ ಸಮರ್ಪಕ ಬಳಕೆಗೆ ಅಗತ್ಯ ಕ್ರಿಯಾ ಯೋಜನೆ ರೂಪಿಸುವಂತೆ ಸಚಿವ ರುದ್ರಪ್ಪ ಲಮಾಣಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶಾಸಕ ಪ್ರಕಾಶ ಕೋಳಿವಾಡ, ರಾಜ್ಯ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಎಸ್‌ಪಿ ಯಶೋದಾ ವಂಟಗೋಡಿ, ಎಸ್‌ಎಫ್‌ನ್ ಗಾಜಿಗೌಡ್ರು ಸೇರಿದಂತೆ ವಿವಿಧ ಜನಪ್ರತಿನಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.