ಕಾಲಮಿತಿಯಲ್ಲಿ ನೀರಾವರಿ ಯೋಜನೆ ಮುಗಿಸಿ: ಸಚಿವ ತಂಗಡಗಿ

| Published : Jan 08 2025, 12:15 AM IST

ಕಾಲಮಿತಿಯಲ್ಲಿ ನೀರಾವರಿ ಯೋಜನೆ ಮುಗಿಸಿ: ಸಚಿವ ತಂಗಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ನಡೆಯುತ್ತಿರುವ ನೀರಾವರಿ ಯೋಜನೆಯನ್ನು ಕಾಲಮಿತಿಯಲ್ಲಿ ಮುಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೂಚಿಸಿದರು.

ಜಿಲ್ಲೆಯ ವಿವಿಧ ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಜಿಲ್ಲೆಯಲ್ಲಿ ನಡೆಯುತ್ತಿರುವ ನೀರಾವರಿ ಯೋಜನೆಯನ್ನು ಕಾಲಮಿತಿಯಲ್ಲಿ ಮುಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲೆಯ ವಿವಿಧ ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾಲಮಿತಿಯಲ್ಲಿ ನೀರಾವರಿ ಯೋಜನೆಗಳು ಆಗದಿದ್ದರೆ ರೈತರಿಗೆ ನೀರು ಕೊಡಲು ಹೇಗೆ ಸಾಧ್ಯ. ಕೆಲವೊಂದು ಯೋಜನೆಗಳು ಸುಮಾರು ವರ್ಷಗಳಿಂದ ಹಾಗೆ ನಡೆಯುತ್ತಲೆ ಇವೆ. ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿದಾಗ ಅವುಗಳು ಕಾಲಮಿತಿಯಲ್ಲಿ ಮುಗಿಯುತ್ತವೆ ಎಂದರು.

ಅಳವಂಡಿ ಬೆಟಗೇರಿ ಏತ ನೀರಾವರಿ ಯೋಜನೆಯ ಜ. 30ರ ಒಳಗಡೆ ಮುಗಿಯಬೇಕು. ಸಿಂಗಟಾಲೂರು ಏತ ನೀರಾವರಿ ಯೋಜನೆ ನಮ್ಮ ಜಿಲ್ಲೆಯಲ್ಲಿ ಏನಾಗಿದೆ ಯಾವ ಹಂತದಲ್ಲಿದೆ ಎಂಬ ಮಾಹಿತಿಯನ್ನು ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು, ಈ ಯೋಜನೆಯ ಕಾಮಗಾರಿಯನ್ನು ವಿಳಂಬ ಮಾಡದೇ ಪೂರ್ಣಗೊಳಿಸಬೇಕೆಂದರು.

ಮುಂದಿನ ಸಭೆಯಲ್ಲಿ ಗುತ್ತಿಗೆದಾರರಿಗೂ ಬರುವಂತೆ ಹೇಳಬೇಕು. ಕಾಲಮಿತಿಯಲ್ಲಿ ಕೆಲಸ ಮುಗಿಸದ ಗುತ್ತಿಗೆದಾರರಿಗೆ ನೋಟೀಸ್ ನೀಡಿ ಕಪ್ಪುಪಟ್ಟಿಗೆ ಸೇರಿಸಬೇಕು. ಕೆರೆಗಳ ವೀಕ್ಷಣೆಗೂ ಬರುತ್ತೇನೆ. ಕಾಟಾಪುರ, ಶಿರವಾರ, ಕರಡೋಣ ಕೆರೆಗಳಿಗೆ ನೀರು ಬಿಡಬೇಕು. ಈಗ ಕೆರೆಗಳು ತುಂಬಿದರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆಗಳಾಗುವುದಿಲ್ಲ. ಸಭೆಯಲ್ಲಿ ಚರ್ಚೆಯಾದ ಎಲ್ಲಾ ವಿಷಯಗಳನ್ನು ಅಧಿಕಾರಿಗಳು ಪಾಲನೆ ಮಾಡಬೇಕು ಎಂದು ಹೇಳಿದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ನೀರಾವರಿ ಯೋಜನೆಯ ಯಾವುದೇ ಕೆಲಸ ಮತ್ತು ಕಾಮಗಾರಿಗಳ ಕುರಿತು ಮೂರು ತಿಂಗಳಿಗೊಮ್ಮೆ ಸಭೆ ನಡೆಯಬೇಕು. 18 ತಿಂಗಳಲ್ಲಿ ಮುಗಿಯುವ ಕೆಲಸಗಳು ಹಲವಾರು ವರ್ಷಗಳು ತೆಗೆದುಕೊಳ್ಳುತ್ತವೆ. ಆಗಾಗ ನೀರಾವರಿ ಯೋಜನೆಗಳ ಸಭೆ ನಡೆಸಿದರೆ ಅವುಗಳ ಸಮಸ್ಯೆ ಬಗೆಹರಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಸಂಸದ ಕೆ.ರಾಜಶೇಖರ ಹಿಟ್ನಾಳ, ಜಿಲ್ಲಾಧಿಕಾರಿ ನಲಿನ್ ಅತುಲ್, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತ ಮಹೇಶ ಮಾಲಗಿತ್ತಿ ಸೇರಿದಂತೆ ಕೃಷ್ಣ ಭಾಗ್ಯ ಜಲ ನಿಗಮ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರಿದ್ದರು.