ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ತ್ವರಿತ ಪೂರ್ಣಗೊಳಿಸಿ: ಸಂಸದ ಕೋಟ ಸೂಚನೆ

| Published : Aug 19 2025, 01:00 AM IST

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ತ್ವರಿತ ಪೂರ್ಣಗೊಳಿಸಿ: ಸಂಸದ ಕೋಟ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಹಾಗೂ ಅಭಿಯಂತರರಿಗೆ ಸೂಚನೆ ನೀಡಿದ್ದಾರೆ.

ಉಡುಪಿ: ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಹಾಗೂ ಅಭಿಯಂತರರಿಗೆ ಸೂಚನೆ ನೀಡಿದರು.

ಶನಿವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ರ್ರೀಯ ಹೆದ್ದಾರಿ 169 ಎ ಗೆ ಸಂಬಂಧಿಸಿದಂತೆ ಹಾಗೂ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಪ್ರಗತಿ ಪರಿಶೀಲನೆ ಕುರಿತು ಚರ್ಚಿಸುವ ಸಲುವಾಗಿ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ರಾಹೆ ಕಾಮಗಾರಿಗಳು ನಿಗಧಿತ ಕಾಲಾವಧಿಯಲ್ಲಿ ಪೂರ್ಣಗೊಳ್ಳದೇ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಮಳೆಯಿಂದಾಗಿ ರಸ್ತೆಗಳು ಹೊಂಡ-ಗುಂಡಿಗಳಿಂದ ಕೂಡಿದ್ದು, ಇವುಗಳ ದುರಸ್ತಿಗೆ ಹಾಗೂ ನಿರ್ವಹಣೆಗೆ ಮುಂದಾಗಬೇಕು ಎಂದರು.ರಾಹೆ 169 ಎ ಕರಾವಳಿ ಜಂಕ್ಷನ್‌ನಿಂದ ಮಲ್ಪೆವರೆಗಿನ ರಸ್ತೆ ಕಾಮಗಾರಿಗೆ ಅಗತ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ಪರಿಹಾರದ ಹಣ ಕಾಲಮಿತಿಯಲ್ಲಿ ನೀಡಬೇಕು. ಭೂಸ್ವಾಧೀನಕ್ಕೆ ದಾಖಲೆಗಳನ್ನು ನೀಡದ 18 ಭೂಮಾಲಿಕರ ಪರಿಹಾರ ಮೊತ್ತವನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸಲು ಅಧಿಕಾರಿಗಳಿಗೆ ಸೂಚಿಸಿದರು ಮತ್ತು ಸೆಪ್ಟಂಬರ್ ಮೊದಲ ವಾರದಿಂದ ಕಾಂಕ್ರೀಟ್ ಕಾಮಗಾರಿ ಕೈಗೊಳ್ಳಬೇಕು ಎಂದರು.

ಸಣ್ಣಪುಟ್ಟ ಕಾರಣಗಳಿಂದ ಬಾಕಿ ಉಳಿದಿರುವ 90 ಭೂಸ್ವಾಧೀನ ಪ್ರಕರಣಗಳಿಗೆ 2 ದಿನಗಳ ಒಳಗಾಗಿ 3ಡಿ ಸಮರ್ಪಕಗೊಳಿಸಿ, ಬೆಂಗಳೂರು ಆರ್.ಓ ಕಚೇರಿಗೆ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.ಹೆಬ್ರಿ-ಚಾರದ ವರೆಗೆ ಮತ್ತು ಆಗುಂಬೆ ಘಾಟ್‌ನ ಹೆದ್ದಾರಿಯ ಡಿ.ಪಿ.ಆರ್. ಸಿದ್ಧವಾಗಿದೆ. ಈ ಎರಡೂ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗಳನ್ನು ತ್ವರಿತವಾಗಿ ಫೂರ್ಣಗೊಳಿಸಿ, ಕಾಮಗಾರಿಗಳನ್ನು ಪ್ರಾರಂಭಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ವೇಗ ಹೆಚ್ಚಿಸಬೇಕು. ರಸ್ತೆ ಕಾಮಗಾರಿಗಳನ್ನು ಕೈಗೊಳ್ಳುವಾಗ ಸಾರ್ವಜನಿಕ ವಾಹನಗಳ ಚಾಲನೆಗೆ ಅಗತ್ಯವಿರುವ ಬದಲಿ ತಾತ್ಕಾಲಿಕ ರಸ್ತೆಗಳನ್ನು ಸಹ ಮಾಡಿಕೊಡಬೇಕು ಎಂದು ಅಭಿಯಂತರರಿಗೆ ಸೂಚಿಸಿದರು.ಶಾಸಕ ಯಶ್‌ಪಾಲ್ ಎ ಸುವರ್ಣ ಮಾತನಾಡಿ, ಪರ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಘು ವಾಹನಗಳಿಗೆ ಸಂಚರಿಸಲು ಒಂದು ಬದಿಯಲ್ಲಿ ಅವಕಾಶ ಕಲ್ಪಿಸಿ, ಭಾರೀ ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ ಮಾಡುವುದರೊಂದಿಗೆ ಕಾಮಗಾರಿ ಆರಂಭಿಸುವಂತೆ ಸಲಹೆ ನೀಡಿದರು.ಸಭೆಯಲ್ಲಿ ಗುರ್ಮೆ ಸುರೇಶ್ ಶೆಟ್ಟಿ, ಡಿ.ಎಫ್.ಓ ಗಣಪತಿ, ಎಎಸ್‌ಪಿ ಸುಧಾಕರ್ ನಾಯಕ್, ಉಡುಪಿ ನಗರಸಭೆ ಪೌರಾಯುಕ್ತ ಮಹಾಂತೇಶ ಹಂಗರಗಿ, ಭೂದಾಖಲೆಗಳ ಉಪನಿರ್ದೇಶಕ ರವೀಂದ್ರ, ರಾ.ಹೆ. ಅಭಿಯಂತರರು, ಅಧಿಕಾರಿಗಳು ಉಪಸ್ಥಿತರಿದ್ದರು.