ಸಾರಾಂಶ
ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲೂಕು ಉಸ್ತುವಾರಿ
ಕನ್ನಡಪ್ರಭ ವಾರ್ತೆ ಕಂಪ್ಲಿಕೇವಲ ಪೇಪರ್‌ನಲ್ಲಿ ಸಾಧನೆ ತೋರಿಸದೆ ಭೌತಿಕವಾಗಿ ಸಾಧನೆ ತೋರಬೇಕು ಹಾಗೂ ಹೊಸ ಕ್ರಿಯಾ ಯೋಜನೆಗಳನ್ನು ಸಕಾಲಕ್ಕೆ ಪೂರ್ಣಗೊಳಿಸಬೇಕು ಎಂದು ತಾಲೂಕು ಉಸ್ತುವಾರಿ, ಶಿರಸಿಯ ಎಸಿ ಕಾವ್ಯಾರಾಣಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ಎಲ್ಲಾ ಅಧಿಕಾರಿಗಳು ಸಭೆಗೆ ಬರುವಾಗ ಪೂರ್ವ ಸಿದ್ಧತೆಯೊಂದಿಗೆ, ತಮ್ಮ ಇಲಾಖೆಗೆ ಸಂಬಂಧಿಸಿದ ಅಗತ್ಯ ಅಂಕಿ-ಅಂಶಗಳೊಂದಿಗೆ ಬರಬೇಕು. ಯಾವುದೇ ಕಾರಣಗಳನ್ನು ನೀಡದೆ ಇಲಾಖಾ ಮುಖ್ಯಾಧಿಕಾರಿಗಳೇ ಸಭೆಗೆ ಆಗಮಿಸಬೇಕು. ಇಲಾಖೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ, ಇಲಾಖೆ ಯೋಜನೆಗಳ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು ಎಂದರು.
ಸಭೆಯಲ್ಲಿ ಮಹಿಳಾ ಮೇಲ್ವಿಚಾರಕಿ ಲತೀಫಾಬೇಗಂ ತಾಲೂಕಿನಲ್ಲಿ 39 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದಾಗ, ಸ್ಥಳೀಯ ಸಂಸ್ಥೆಗಳು ಅಂಗನವಾಡಿ ಕೇಂದ್ರಗಳಿಗೆ ನಿವೇಶನ ದೊರಕಿಸಿ ಕೊಡಬೇಕು ಎಂದು ತಾಪಂ ಇಒ ಆರ್.ಕೆ. ಶ್ರೀಕುಮಾರ್, ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನಗೆ ತಾಲೂಕು ಉಸ್ತುವಾರಿ ಸೂಚಿಸಿದರು. ಶಿಕ್ಷಣ ಇಲಾಖೆಯ ಕುರಿತು ಚರ್ಚೆಗೆ ಬಂದಾಗ ತಾಲೂಕಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಿಸಲು ಯಾವ ಕ್ರಮಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದಾಗ, ಇಸಿಒ ಟಿ.ಎಂ. ಬಸವರಾಜ ಅಗತ್ಯ ಕ್ರಮಗಳ ಕುರಿತು ಮಾಹಿತಿ ನೀಡಿದರು. ಈ ಬಾರಿ ಶೇ.90ರಷ್ಟು ಫಲಿತಾಂಶ ಸಾಧಿಸಬೇಕು ಎಂದು ಸೂಚಿಸಿದರು.ವಿದ್ಯಾರ್ಥಿಗಳಿಂದ ಮನವಿ:
ತಾಲೂಕಿನ ನಂ. 2 ಮುದ್ದಾಪುರ, ಎಮ್ಮಿಗನೂರು, ದೇವಲಾಪುರ, ಮೆಟ್ರಿ, ಸುಗ್ಗೇನಹಳ್ಳಿ, ಸಮೀಪದ ಹೊಸ ದರೋಜಿ, ಹಳೆ ದರೋಜಿ ಸೇರಿ ಅನೇಕಕಡೆಗಳಿಂದ ನಿತ್ಯ ಹಲವಾರು ವಿದ್ಯಾರ್ಥಿನಿಯರು ಪಟ್ಟಣದಲ್ಲಿನ ಶಾಲಾ ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕಾಗಿ ಆಗಮಿಸುತ್ತೇವೆ. ನಮ್ಮ ತಾಲೂಕಿನ ಬಹುತೇಕ ಗ್ರಾಮಗಳಿಗೆ ಸಮರ್ಪಕ ರೀತಿಯಲ್ಲಿ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ನಿತ್ಯ ನಮಗೆ ಸರಿಯಾದ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ತೆರಳಲಾಗುತ್ತಿಲ್ಲ. ಈ ಕುರಿತು ಹಲವು ಬಾರಿ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ನಮ್ಮ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಪಟ್ಟಣದಲ್ಲಿ ಬಿಸಿಎಂ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮೀಣ ಪ್ರದೇಶಗಳ ಕಾಲೇಜು ವಿದ್ಯಾರ್ಥಿನಿಯರಾದ ಉಷಾ, ಕಲ್ಪನಾ, ಇಂದು, ಎಂ.ಲೀಲಾವತಿ, ರಜಿಯಾಬೇಗಂ ಇತರರು ಒತ್ತಾಯಿಸಿದರು.ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಮಸಾಗರದಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಸಿಬ್ಬಂದಿ ಕೊರತೆ ನೀಗಿಸುವಂತೆ, ದಿನದ 24 ಗಂಟೆಗಳ ಕಾಲವು ಸರ್ಕಾರಿ ಆಸ್ಪತ್ರೆ ಕಾರ್ಯನಿರ್ವಹಿಸಬೇಕು, ಲ್ಯಾಬ್ ಟೆಕ್ನಿಷಿಯನ್ ರನ್ನು ಒದಗಿಸಬೇಕು ಹಾಗೂ ಸ್ಥಳೀಯರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಅಂಬ್ಯುಲೆನ್ಸ್ ಸೌಲಭ್ಯ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದಾಗ ಬೆಂಚ್ ವ್ಯವಸ್ಥೆ, ಸಮವಸ್ತ್ರ, ಪಠ್ಯಪುಸ್ತಕ, ಕ್ರೀಡೋಪಕರಣಗಳ ಸೌಲಭ್ಯ ಒದಗಿಸಬೇಕೆಂಬ ಮಾಹಿತಿ ತಿಳಿದುಬಂದಿದೆ. ಇನ್ನು ನಾಲ್ಕು ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ತಹಸೀಲ್ದಾರ್ ಜೂಗಲ ಮಂಜುನಾಯಕ, ತಾಪಂ ಇಒ ಆರ್.ಕೆ. ಶ್ರೀಕುಮಾರ್, ಸೇರಿ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.