ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಂಗಾರು ಮಳೆ ಹಿನ್ನೆಲೆಯಲ್ಲಿ ಹಳೆ ವಿಮಾನ ನಿಲ್ದಾಣ ರಸ್ತೆಯ ವಿಂಡ್ ಟನಲ್ ಜಂಕ್ಷನ್‌ನಲ್ಲಿ ಕೈಗೆತ್ತಿಕೊಂಡಿರುವ ಕೆಳಸೇತುವೆ ಕಾಮಗಾರಿಯನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮೂರು ತಿಂಗಳ ಒಳಗಾಗಿ ಪೂರ್ಣಗೊಳಿಸುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬುಧವಾರ ವಿಂಡ್ ಟನಲ್ ಜಂಕ್ಷನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಈ ರಸ್ತೆಯು ಹೆಚ್ಚಿನ ಸಂಚಾರ ದಟ್ಟಣೆಯುಳ್ಳ ಪ್ರದೇಶವಾಗಿರುವುದರಿಂದ ಹೆಚ್ಚುವರಿ ಯಂತ್ರೋಪಕರಣಗಳನ್ನು ಬಳಸಿಕೊಂಡು, ಮೂರು ಪಾಳಿಗಳಲ್ಲಿ ಕಾಮಗಾರಿ ನಡೆಸಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ನಿರ್ದೇಶನ ನೀಡಿದರು.

ಕೆಳಸೇತುವೆ ಕಾಮಗಾರಿಗೆ ಸಂಚಾರ ಪೊಲೀಸ್ ವಿಭಾಗ ಈಗಾಗಲೇ ಅನುಮತಿ ನೀಡಿದ್ದು, ಹೆಚ್.ಎ.ಎಲ್ ಕಡೆಯಿಂದ ನಗರದೊಳಗೆ ಬರುವ ರಸ್ತೆ ಭಾಗದಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಆರ್.ಸಿ.ಸಿ ಗೋಡೆ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಸದರಿ ಭಾಗದಲ್ಲಿ ಇರುವ ಜಲಮಂಡಳಿ ಪೈಪ್‌ಲೈನ್, ಕೇಬಲ್ ಗಳನ್ನು ಸಮಾನಾಂತರವಾಗಿ ಸ್ಥಳಾಂತರಿಸಿ ಕಾಮಗಾರಿ ನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

ವಿಂಡ್ ಟನಲ್ ಜಂಕ್ಷನ್‌ನಲ್ಲಿ 19 ಕೋಟಿ ರೂಪಾಯಿ ವೆಚ್ಚದಲ್ಲಿ 300 ಮೀಟರ್ ಉದ್ದದ ಕೆಳಸೇತುವೆ ಕಾಮಗಾರಿ ಇದಾಗಿದ್ದು, ಎರಡೂ ಬದಿಗಳಲ್ಲಿ 7.5 ಮೀಟರ್ ಅಗಲದ 6 ಪಥಗಳ ಕೆಳಸೇತುವೆ ನಿರ್ಮಿಸಲಾಗುತ್ತಿದೆ. ಶೇ60ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಎಂಜಿನಿಯರ್ ಮಾಹಿತಿ ನೀಡಿದರು.


ಕೆಳಸೇತುವೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಸೂಚನಾ ಫಲಕಗಳು, ಬ್ಯಾರಿಕೇಡ್‌ಗಳು, ಎಚ್ಚರಿಕೆ ಟೇಪ್‌ಗಳನ್ನು ಅಳವಡಿಸಬೇಕು.ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅಭಿವೃದ್ಧಿ ಹೆಚ್ಚುವರಿ ಆಯುಕ್ತ ದಲ್ಜಿತ್ ಕುಮಾರ್, ಮುಖ್ಯ ಎಂಜಿನಿಯರ್ ಜಯ್ ಕುಮಾರ್ ಹರಿದಾಸ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

17 ಕಿಲೋಮೀಟರ್ ರಸ್ತೆ ನಿರ್ಮಾಣ

ಹಳೆ ವಿಮಾನ ನಿಲ್ದಾಣ ರಸ್ತೆಯ ಎ.ಎಸ್.ಇ ಜಂಕ್ಷನ್ ನಿಂದ ಹೋಫ್‌ ಫಾರ್ಮ್ ಜಂಕ್ಷನ್ ವರೆಗೆ 17 ಕಿ.ಮೀ ಉದ್ದದ ಮಾರ್ಗವನ್ನು ಮೂರು ಕೆಳಸೇತುವೆ ಒಳಗೊಂಡಂತೆ ಸಮಗ್ರ ಅಭಿವೃದ್ಧಿಪಡಿಸಲು 2015ರಲ್ಲಿ ಕಾರ್ಯಾದೇಶ ನೀಡಲಾಗಿತ್ತು. 2022ರಲ್ಲಿ ಕುಂದಲಹಳ್ಳಿ ಜಂಕ್ಷನ್ ಹಾಗೂ 2023ರಲ್ಲಿ ಸುರಂಜನ್ ದಾಸ್ ಜಂಕ್ಷನ್‌ನಲ್ಲಿ ಕೆಳಸೇತುವೆ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ವಿಂಡ್ ಟನಲ್ ಜಂಕ್ಷನ್‌ನ ಕಾಮಗಾರಿಗೆ ಈಗ ಪೊಲೀಸ್ ಅನುಮತಿ ದೊರೆತಿದೆ.