ಗಾಂಜಾ ಸೇವನೆಯ ಆರೋಪದ ಅಡಿ ಆದಿತ್ಯಾ ಸೇರಿದಂತೆ ಹತ್ತು ವಿದ್ಯಾರ್ಥಿಗಳನ್ನು ವಿದ್ಯಾಗಿರಿ ಠಾಣೆ ಪೊಲೀಸರು ಕಳೆದ ಶನಿವಾರ ವಶಕ್ಕೆ ತೆಗೆದುಕೊಂಡಿದ್ದರು. ಆದರೆ, ಗಾಂಜಾ ಸೇವನೆಯ ವರದಿಯಲ್ಲಿ ಗಾಂಜಾ ಸೇವನೆ ಮಾಡಿರಲಿಲ್ಲ ಎಂಬ ವರದಿ ಬಂದಿತ್ತು.

ಧಾರವಾಡ: ಪೊಲೀಸರ ಕಿರುಕುಳದಿಂದ ಬಿಎಸ್ಸಿ ಓದುತ್ತಿದ್ದ ಯುವಕನ ಆತ್ಮಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾಗಿರಿ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಈ ಮೂಲಕ ಡ್ರಗ್ಸ್‌ ಡ್ರೈವ್‌ ವೇಳೆ ಸಿಕ್ಕಿಬಿದ್ದವರಿಂದ ಪೊಲೀಸರು ಹಣ ಪಡೆಯುತ್ತಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಹೆಡ್ ಕಾನ್‌ಸ್ಟೆಬಲ್‌ ಚಂದ್ರು ನಡುವಿನಮನಿ, ಕಾನ್‌ಸ್ಟೆಬಲ್‌ಗಳಾದ ಕಿರಣ್ ಡೊಕ್ಕನ್ನವರ ಹಾಗೂ ಸೈಯದ್ ತಹಶೀಲ್ದಾರ ಅಮಾನತುಗೊಂಡ ಠಾಣೆಯ ಸಿಬ್ಬಂದಿ. ಇಲ್ಲಿಯ ಗಿರಿನಗರದ, ಮೂಲತಃ ಬಾಗಲಕೋಟ ಜಿಲ್ಲೆಯ ಆದಿತ್ಯಾ ಮ್ಯಾಗೇರಿ (20) ಆತ್ಮಹತ್ಯೆ ಪ್ರಕರಣದಲ್ಲಿ ಈ ಮೂವರನ್ನು ಅಮಾನತು ಮಾಡಲಾಗಿದೆ.

ಹತ್ತು ವಿದ್ಯಾರ್ಥಿಗಳನ್ನು ವಿದ್ಯಾಗಿರಿ ಠಾಣೆ ಪೊಲೀಸರು ಕಳೆದ ಶನಿವಾರ ವಶಕ್ಕೆ ತೆಗೆದುಕೊಂಡಿದ್ದರು

ಗಾಂಜಾ ಸೇವನೆಯ ಆರೋಪದ ಅಡಿ ಆದಿತ್ಯಾ ಸೇರಿದಂತೆ ಹತ್ತು ವಿದ್ಯಾರ್ಥಿಗಳನ್ನು ವಿದ್ಯಾಗಿರಿ ಠಾಣೆ ಪೊಲೀಸರು ಕಳೆದ ಶನಿವಾರ ವಶಕ್ಕೆ ತೆಗೆದುಕೊಂಡಿದ್ದರು. ಆದರೆ, ಗಾಂಜಾ ಸೇವನೆಯ ವರದಿಯಲ್ಲಿ ಗಾಂಜಾ ಸೇವನೆ ಮಾಡಿರಲಿಲ್ಲ ಎಂಬ ವರದಿ ಬಂದಿತ್ತು. ಇಷ್ಟಾಗಿಯೂ ಈ ಪ್ರಕರಣದಿಂದ ಹೊರ ಬರಲು ಪೊಲೀಸರು ಹಣ ಕೇಳಿದ್ದರು. ತಂದೆ ಇಲ್ಲದೆ ತಾಯಿಯ ಆಶ್ರಯದಲ್ಲಿದ್ದ ಆದಿತ್ಯಾ ಈ ವಿಚಾರವಾಗಿ ಸೋಮವಾರ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು.

ಮೂವರನ್ನು ಅಮಾನತು

ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸ್‌ ಇಲಾಖೆ ಇದೀಗ ಮೂವರನ್ನು ಅಮಾನತು ಮಾಡಿದೆ. ಈ ಕುರಿತು ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ ಮಾತನಾಡಿ, ಈ ಪ್ರಕರಣ ಕುರಿತು ಹಿರಿಯ ಅಧಿಕಾರಿಗಳು ತಮಗೆ ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೂವರನ್ನು ಅಮಾನತು ಮಾಡಲಾಗಿದೆ. ಪ್ರಕರಣದ ವಿಚಾರಣೆಯನ್ನು ಡಿಸಿಪಿ ಶ್ರುತಿ ಮಾಡುತ್ತಿದ್ದು, ವಿದ್ಯಾಗಿರಿ ಠಾಣೆಯ ಸಿಬ್ಬಂದಿ ಹಣ‌ ಕೇಳಿದ್ದರ ಬಗ್ಗೆಯೂ ತನಿಖೆಯಾಗಲಿದೆ. ಯುವಕನ ಪೋಷಕರು ಹೆಚ್ಚುವರಿ ದೂರು‌ ನೀಡಿದರೆ ಕಾನೂನು ಕ್ರಮ ನಡೆಯಲಿದೆ. ಈ ಆತ್ಮಹತ್ಯೆ ಪ್ರಕರಣದಲ್ಲಿ ಮತ್ತಾರಾದರೂ ಭಾಗಿಯಾಗಿದ್ದರೂ ಕ್ರಮ ಆಗಲಿದೆ. ಯಾರನ್ನೂ ರಕ್ಷಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.