ಮಹಿಳಾ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ ನಗರದಲ್ಲಿ ಮಹಿಳಾ ಪೊಲೀಸ್ ಠಾಣೆ ಆರಂಭವಾಗಿದೆ.

ಬಳ್ಳಾರಿ: ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ನೇಮಿಸಬೇಕು ಎಂದು ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್‌) ಒತ್ತಾಯಿಸಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ ಸಂಘಟನೆಯ ಜಿಲ್ಲಾಧ್ಯಕ್ಷೆ ಚಂದ್ರಕುಮಾರಿ ಹಾಗೂ ಸಂಘಟನೆಯ ಜಿಲ್ಲಾ ಪ್ರಮುಖರು, ಮಹಿಳಾ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ ನಗರದಲ್ಲಿ ಮಹಿಳಾ ಪೊಲೀಸ್ ಠಾಣೆ ಆರಂಭವಾಗಿದೆ. ಆದರೆ, ಠಾಣೆಯಲ್ಲಿ ಮಹಿಳೆಯರ ಸಮಸ್ಯೆ ಆಲಿಸಲು ಮಹಿಳಾ ಅಧಿಕಾರಿಗಳ ಬದಲು ಪುರುಷರು ಇರುವುದರಿಂದ ಮಹಿಳೆಯರು ಕೆಲವೊಂದು ಸಮಸ್ಯೆಗಳನ್ನು ಹೇಳಿಕೊಳ್ಳಲು ಹಿಂದೇಟು ಹಾಕುತ್ತಿದ್ದು, ಇದರಿಂದ ಠಾಣೆ ಸ್ಥಾಪನೆಯ ಆಶಯವೇ ವಿಮುಖವಾಗಿದೆ.

ಮಹಿಳೆಯರು ತಮ್ಮ ವೈಯಕ್ತಿಕ, ಕುಟುಂಬ ಮತ್ತು ಸಾಮಾಜಿಕ ಸಮಸ್ಯೆಗಳನ್ನು ನೇರವಾಗಿ ಮಹಿಳಾ ಪೊಲೀಸರ ಮುಂದೆ ಹಂಚಿಕೊಳ್ಳಲು ಹೆಚ್ಚು ವಿಶ್ವಾಸ ಹೊಂದುತ್ತಾರೆ. ಆದರೆ, ನಗರದ ಮಹಿಳಾ ಠಾಣೆಯಲ್ಲಿ ಮಹಿಳಾ ಕಾನ್‌ಸ್ಟೇಬಲ್‌ಗಳು ಮತ್ತು ಅಧಿಕಾರಿಗಳ ಕೊರತೆಯಿಂದಾಗಿ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಪುರುಷ ಅಧಿಕಾರಿಗಳ ಬಳಿ ಹೇಳಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೀಗಾಗಿ ಎಷ್ಟೋ ಮಹಿಳೆಯರು ಸಂಕೋಚದಿಂದ ಗೃಹಹಿಂಸೆ, ಲೈಂಗಿಕ ಕಿರುಕುಳ, ದೌರ್ಜನ್ಯ ಮುಂತಾದ ಸೂಕ್ಷ್ಮ ವಿಷಯಗಳನ್ನು ಹೇಳಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಈ ಕಾರಣಕ್ಕಾಗಿ ಅನೇಕ ಪ್ರಕರಣಗಳು ದಾಖಲೆಯಾಗದೇ ಉಳಿಯುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಮಹಿಳಾ ಪೊಲೀಸ್ ಠಾಣೆಗೆ ಬರುವ ಪ್ರಕರಣಗಳು ಇತ್ಯರ್ಥವಾಗಲು ಹಣ ಇರಬೇಕು. ಹಣವುಳ್ಳವರ ಪರವಾಗಿ ಕೆಲಸವಾಗುತ್ತಿವೆ. ಠಾಣೆ ಬಳಿ ಪಂಚಾಯತಿ ಮಾಡಿಸುವ ಮಧ್ಯವರ್ತಿಗಳು ಹೆಚ್ಚಾಗುತ್ತಿದ್ದು, ಇದರಿಂದ ಅನೇಕ ಬಡ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪಗಳು ದಟ್ಟವಾಗಿವೆ. ಹೀಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಹಿಳಾ ಪೊಲೀಸ್ ಠಾಣೆಯ ಕಡೆ ಗಮನ ಹರಿಸಬೇಕು. ಠಾಣೆಗೆ ಮಹಿಳಾ ಅಧಿಕಾರಿಗಳು ಹಾಗೂ ಹೆಚ್ಚಿನ ಮಹಿಳಾ ಸಿಬ್ಬಂದಿಯನ್ನು ನೇಮಿಸಬೇಕು. ಮಧ್ಯವರ್ತಿಗಳನ್ನು ನಿಯಂತ್ರಿಸಿ ಹಣಕಾಸು ವ್ಯವಹಾರಗಳಿಗೆ ಕಡಿವಾಣ ಹಾಕಬೇಕು ಎಂದು ಮನವಿ ಪತ್ರದಲ್ಲಿ ಸಂಘಟನೆಯ ಮುಖಂಡರು ಒತ್ತಾಯಿಸಿದರು. ಎಎಎಸ್ಪಿ ನವೀನ್ ಕುಮಾರ್ ಮನವಿ ಸ್ವೀಕರಿಸಿದರು.

ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಈ.ವರಲಕ್ಷ್ಮಿ, ವಿ.ಈರಮ್ಮ, ಅನುಪಮಾ, ರಾಧಿಕಾ, ಕೆ.ಭಾಗ್ಯ, ಅನ್ನಪೂರ್ಣ ಮತ್ತಿತರರಿದ್ದರು.

ಬಳ್ಳಾರಿಯ ಮಹಿಳಾ ಪೊಲೀಸ್ ಠಾಣೆಗೆ ಮಹಿಳಾ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಒತ್ತಾಯಿಸಿ ಜನವಾದಿ ಮಹಿಳಾ ಸಂಘಟನೆಯ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು. ಎಎಸ್ಪಿ ನವೀನ್ ಕುಮಾರ್ ಮನವಿ ಸ್ವೀಕರಿಸಿದರು.