ಸಾರಾಂಶ
ಉತ್ತಮ ಮುಂಗಾರಿನ ಪರಿಣಾಮ ಗದಗ ಅಷ್ಟೆ ಅಲ್ಲ ಹಾವೇರಿ, ಧಾರವಾಡ ಭಾಗದಲ್ಲೂ ಹೆಸರು ಬೆಳೆ ಚೆನ್ನಾಗಿದೆ
ಮುಳಗುಂದ: ಪಟ್ಟಣದ ದಾವಲ್ ಮಲ್ಲಿಕ್ ಪಹಾಡಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಭೂಮಿ ಪೂಜೆ ನೆರವೇರಿಸಿದರು.
ಆ ನಂತರ ಮಾತನಾಡಿದ ಅವರು, 41 ಲಕ್ಷ ವಿಶೇಷ ಅನುದಾನದಡಿ 3 ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, 6 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಈ ಮೂಲಕ ಶಾಲೆ ಮಕ್ಕಳಿಗೆ ಹೆಚ್ಚಿನ ಶೈಕ್ಷಣಿಕ ಸೌಲಭ್ಯ ದೊರಕಲಿವೆ. ಪಟ್ಟಣದಲ್ಲಿ ಸರ್ಕಾರಿ ಪಿಯು ಕಾಲೇಜು ಕಟ್ಟಡ ಕಾಮಗಾರಿ ಪೂರ್ಣವಾಗುವ ಹಂತಕ್ಕೆ ಬಂದಿದ್ದು, ನವೆಂಬರ್ ಹೊತ್ತಿಗೆ ಪೂರ್ಣವಾಗಲಿದೆ. ಇಂದು ಹೈಸ್ಕೂಲ್ ಮತ್ತು ಪಿಯು ಕಾಲೇಜಗಳ ಶೈಕ್ಷಣಿಕ ಅಭಿವೃದ್ಧಿ ಕುರಿತು ಸಭೆ ನಡೆಸಲಾಗಿದ್ದು, ಗದಗ ಜಿಲ್ಲೆಯಲ್ಲಿ ಅನುದಾನಿತ ಶಾಲೆ ಹೊರತುಪಡಿಸಿ ಕೊರತೆ ಇರುವ 70 ಕೊಠಡಿಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿ ಅವುಗಳ ನಿರ್ಮಾಣಕ್ಕೆ ಸರ್ಕಾರ ನಿರ್ಣಯಿಸಿದೆ. ನ. 14 ರಂದು ಭೂಮಿ ಪೂಜೆ ನಡೆಯಲಿದೆ ಎಂದು ತಿಳಿಸಿದರು.ಉತ್ತಮ ಮುಂಗಾರಿನ ಪರಿಣಾಮ ಗದಗ ಅಷ್ಟೆ ಅಲ್ಲ ಹಾವೇರಿ, ಧಾರವಾಡ ಭಾಗದಲ್ಲೂ ಹೆಸರು ಬೆಳೆ ಚೆನ್ನಾಗಿದೆ, ಬೆಳೆ ಕಟಾವು ಮಾಡಿ ಮಾರುಕಟ್ಟೆಗೆ ಬಂದಾಗ ಬೆಲೆ ಕಡಿಮೆ ಆಗುವ ಭಯ ರೈತರಲ್ಲಿದೆ, ಹೀಗಾಗಿ ಅದಷ್ಟು ಬೇಗ ಎಂಎಸ್‌ಪಿ ಆಧರಿಸಿ ದಾಖಲು ಮಾಡುವ ಖರೀದಿ ಮಾರುಕಟ್ಟೆ ಆರಂಭಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೆರ, ಕ್ಷೇತ್ರಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ, ಎಂ.ಡಿ.ಬಟ್ಟೂರ, ಆರ್.ಸಿ. ಕಮಾಜಿ, ಮುಳಗುಂದ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಬಿ.ವಿ. ಸುಂಕಾಪೂರ, ಪಪಂ ಸದಸ್ಯರಾದ ಮಹಾಂತೇಶ ನೀಲಗುಂದ, ಎನ್.ಆರ್. ದೇಶಪಾಂಡೆ, ಎಸ್.ಸಿ. ಬಡ್ನಿ, ಮಹಾದೇವಪ್ಪ ಗಡಾದ, ಹೊನ್ನಪ್ಪ ಹಳ್ಳಿ, ಅಂಜುನ್ ಕಮೀಟಿ ಅಧ್ಯಕ್ಷ ತಾಜುದ್ದಿನ ಕಿಂಡ್ರಿ, ಅಶೋಕ ಹುಣಸಿಮರದ, ಇಸ್ಮಾಯಿಲ್ ಖಾಜಿ, ಎ.ಡಿ. ಮುಜಾವರ, ಸೈಯದ್ ಶೇಖ, ಅಲ್ಲಾಭಕ್ಷಿ ಹೊಂಬಳ, ಲಾಡಸಾಬ್ ಕಿತ್ತೂರ, ಸೈಯದ್ ಕೊಪ್ಪಳ, ಮಹ್ಮದ ರಫೀಕ ದಲೀಲ, ಉಮರ ಫಾರೂಕ್ ಹುಬ್ಬಳ್ಳಿ, ಹೈದರ ಖವಾಸ, ದಾವುದ ಜಮಾಲಸಾಬನವರ, ಶಿಕ್ಷಕ ಅಬ್ದುಲ್ ಹಮೀದ ಹುಯಿಲಗೋಳ, ಜಾಫರ್ ಮುಲ್ಲಾ, ವೀರೇಂದ್ರ ಹುಲಿ, ನಿಯಾಜ್ ಶೇಖ, ಪಿಡಬ್ಲೂಡಿ ಎಂಜನಿಯರ್ ರಾಘವೇಂದ್ರ ಯಲಿಗಾರ ಮೊದಲಾದವರು ಇದ್ದರು.