ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು ಶಾಸಕ ಎಚ್.ಕೆ. ಸುರೇಶ್‌ರವರು ತಮ್ಮ ಹೆಸರು ತಾಲೂಕಿನಲ್ಲಿ ಶಾಶ್ವತವಾಗಿ ಉಳಿಯಬೇಕೆಂದರೆ ನೀರಾವರಿ ಯೋಜನೆಯ ಕೆಲಸಗಳನ್ನು ಸಂಪೂರ್ಣವಾಗಿ ಮಾಡಿಸಬೇಕು ಎಂದು ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಏತ ನೀರಾವರಿ ಯೋಜನೆ ಮೂಲಕ ಮಾದಿಹಳ್ಳಿ-ಹಳೇಬೀಡು ಹೋಬಳಿ ಕೆರೆಗಳನ್ನು ತುಂಬಿಸಲು ತಾಲೂಕಿನ ಹಾಲ್ತೊರೆ ಗ್ರಾಮದಲ್ಲಿರುವ ಮೋಟಾರ್ ಪಂಪ್‌ಸೆಟ್‌ನಿಂದ ನೀರು ಹರಿಸಲು ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಶಾಸಕ ಎಚ್.ಕೆ.ಸುರೇಶ್‌ರವರು ಬಂದ ನಂತರ ಉತ್ತಮ ಮಳೆಯಾಗಿದೆ. ಕೆರೆಗಳು ತುಂಬಿ ಒಳ್ಳೆ ಬೆಳೆಯಾಗಿದೆ. ಹಳೇಬೀಡು ಕೆರೆ ತುಂಬುವ ಸಾಧ್ಯತೆ ಇದೆ. ರೈತರಿಗೆ ನೀರು ನಿರಂತರವಾಗಿ ಸಿಗಲಿದೆ. ಅಧಿಕಾರಿಗಳು ಮೋಟಾರ್ ಪಂಪ್ ಅನ್ನು ನಿಲ್ಲಿಸದೆ ನಿರಂತರವಾಗಿ ನೀರು ಹರಿಸಬೇಕು ಎಂದರು.
ಎತ್ತಿನಹೊಳೆ ಯೋಜನೆಯಿಂದ ಚಿಕ್ಕಬಳ್ಳಾಪುರ-ಕೋಲಾರಕ್ಕೆ ನೀರು ಹೋಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಯೋಜನೆಯಿಂದ ತಾಲೂಕಿನಲ್ಲಿರುವ ಆ ಭಾಗದ ಕೆರೆಗಳನ್ನು ತುಂಬಿಸಲು ಅಲ್ಲಲ್ಲಿ ಪಾಯಿಂಟ್‌ಗಳನ್ನು ಮಾಡಿಸಲು ಶಾಸಕರು ಮುಂದಾಗಬೇಕು. ಯಗಚಿ ಜಲಾಶಯ ತುಂಬಿರುವುದರಿಂದ ಅದರ ಉಪಯೋಗವನ್ನು ಪಡೆಯಬೇಕು. ಹಾಗೂ ರಾಜ್ಯದಲ್ಲಿ ಎಲ್ಲೆಲ್ಲಿ ನೀರಾವರಿ ಯೋಜನೆ ಇದೆಯೋ ಅಲ್ಲಿಗೆ ಸರ್ಕಾರದಿಂದ ೫ ಕೋಟಿ ರು. ಡಿಪಾಜಿಟ್ ಇಟ್ಟರೆ, ಅಲ್ಲಿ ಕೆಲಸಗಳನ್ನು ಸುಗಮವಾಗಿ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಸಂಬಂಧಿಸಿದ ಸಚಿವರು ಗಮನ ಹರಿಸಬೇಕು. ಜತೆಗೆ ಹಳೇಬೀಡು ಸಮೀಪದ ರಾಜನಶಿರಿಯೂರು ಭಾಗಕ್ಕೆ ಏತ ನೀರಾವರಿ ಯೋಜನೆ ತರುವುದಕ್ಕೆ ಶಾಸಕರು ನಿಯೋಗ ಕರೆದೊಯ್ದು ಸರ್ಕಾರಕ್ಕೆ ಮನವಿ ಮಾಡಲು ಮುಂದಾಗಬೇಕಿದೆ ಎಂದರು.ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ವರುಣನ ಆಶೀರ್ವಾದದಿಂದ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿ ಕೆರೆಕಟ್ಟೆಗಳು ತುಂಬಿವೆ. ಈಗಾಗಲೇ ಸಾಕಷ್ಟು ಕೆರೆಗಳಿಗೆ ಬಾಗಿನ ಅರ್ಪಿಸಿದ್ದೇವೆ. ಜತೆಗೆ ಏತ ನೀರಾವರಿ ಯೋಜನೆ ಮೂಲಕ ಹಳೇಬೀಡು-ಮಾದಿಹಳ್ಳಿ ಹೋಬಳಿಯ ೨೬ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ರಣಘಟ್ಟ ಯೋಜನೆ ಕಾಮಗಾರಿ ಸ್ವಲ್ಪ ನನೆಗುದಿಗೆ ಬಿದ್ದಿದೆ. ಅದಕ್ಕೆ ಅನುದಾನ ತಂದು ಕೆಲಸ ಮಾಡಿಸಲಾಗುವುದು. ಹೆಬ್ಬಾಳು ಏತ ನೀರಾವರಿ ಯೋಜನೆ ಬಗ್ಗೆ ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದು, ಶೀಘ್ರವಾಗಿ ಯೋಜನೆ ಮಂಜೂರಿಗೆ ಕ್ರಮ ಕೈಗೊಂಡು ರೈತರಿಗೆ ನೀರು ಕೊಡುವುದಕ್ಕೆ ಕ್ರಮ ವಹಿಸಲಾಗುವುದು ಎಂದರು.
ಯಗಚಿ ನೀರಾವರಿ ಯೋಜನಾ ವಿಭಾಗದ ಇಇ ಪುನೀತ್, ಎಇ ಪ್ರವೀಣ್, ನವೀನ್, ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷ ಬಸವರಾಜು, ಬಿಜೆಪಿ ಜಲ್ಲಾ ಉಪಾಧ್ಯಕ್ಷ ಹಗರೆ ಡಿಶಾಂತ್ ಕುಮಾರ್, ತಾಪಂ ಮಾಜಿ ಸದಸ್ಯ ವಿಜಯ್ ಕುಮಾರ್, ಗ್ರಾಪಂ ಅಧ್ಯಕ್ಷ ಸಂಜು, ರೈತ ಮುಖಂಡರಾದ ವಿಜಯ್ ಕುಮಾರ್, ಕುಮಾರ್, ನಾಗಚಂದ್ರ, ಛಲವಾದಿ ಪುಟ್ಟರಾಜು, ಕೆರೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹರೀಶ್ ಸೇರಿದಂತೆ ಇತರರಿದ್ದರು.