ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಆಶ್ರಯ ಮನೆ ಕಟ್ಟಡ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಿ ಮೂಲ ಸೌಲಭ್ಯ ಕಲ್ಪಿಸಬೇಕು. ಕಟ್ಟಡ ಕಾರ್ಮಿಕರಿಗೆ ನೀಡಾಬೇಕಾದ ಎಲ್ಲ ಸೌಲಭ್ಯಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಆಗ್ರಹಿಸಿ ರಾಷ್ಟ್ರಭಕ್ತರ ಬಳಗದಿಂದ ಮಂಗಳವಾರ ಮಹಾನಗರ ಪಾಲಿಕೆ ಎದುರು ಬೃಹತ್ ಪ್ರತಿಭಟನೆ ನಡೆಯಿತು.ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರ ನೇತೃತ್ವದಲ್ಲಿ ನಗರದ ದೈವಜ್ಞ ಕಲ್ಯಾಣ ಮಂದಿರದಿಂದ ಮಹಾನಗರ ಪಾಲಿಕೆಯವರೆಗೆ ಆಶ್ರಯ ಫಲಾನುಭವಿಗಳು ಮತ್ತು ಕಟ್ಟಡ ಕಾರ್ಮಿಕರು ಬೃಹತ್ ಮೆರವಣಿಗೆ ಮೂಲಕ ಆಗಮಿಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಆವರಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಕಟ್ಟಡ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ಬಾಕಿ ಇರುವ ವಿದ್ಯಾರ್ಥಿ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಇತರೆ ಧನ ಸಹಾಯಕ್ಕಾಗಿ ಹಾಕಿರುವ ಬಾಕಿ ಉಳಿದ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಬರಬೇಕಾಗಿರುವ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಪರಿಶಿಷ್ಟ ಜಾತಿ, ಪಂಗಡಗಳ ಕಾಲೋನಿಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು. ಕೊಳಚೆ ಪ್ರದೇಶದ ನಿವಾಸಿಗಳಿಗೆ ಪರಿಚಯ ಪತ್ರ, ಹಕ್ಕುಪತ್ರ, ಅಗತ್ಯ ಇರುವಲ್ಲಿ ಪಹಣಿ ವಿತರಿಸಬೇಕು ಎಂದು ಒತ್ತಾಯಿಸಿದರು.ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ಸರ್ಕಾರ ಹಿಂಪಡೆದಿದ್ದು, ಕೂಡಲೇ ಮರು ಬಿಡುಗಡೆ ಮಾಡಿ ಬಾಕಿ ಇರುವ ಅನುದಾನಗಳಿಗೆ ಉಪಯೋಗಿಸಬೇಕು. ಶಿವಮೊಗ್ಗ ನಗರದಲ್ಲಿ ಹೆಚ್ಚುತ್ತಿರುವ ಕಲುಷಿತ ಕುಡಿಯುವ ನೀರಿನ ಸರಬರಾಜು, ಹದಗೆಟ್ಟ ರಸ್ತೆ, ಕಸವಿಲೇವಾರಿಯಲ್ಲಿನ ವಿಳಂಬ ಹಾಗೂ ಕುಂಠಿತಗೊಂಡಿರುವ ಪಾಲಿಕೆಯ ಅಭಿವೃದ್ಧಿ ಕಾರ್ಯಗಳಿಗೆ ಮರುಜೀವ ನೀಡಲು ಕೂಡಲೇ ಪಾಲಿಕೆ ಚುನಾವಣೆಯನ್ನು ನಡೆಸಿ ಜನಪ್ರತಿನಿಧಿಗಳ ಪಾಲ್ಗೊಳ್ಳುವಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಈ.ವಿಶ್ವಾಸ್, ಶಂಕರ್‌ಗನ್ನಿ, ಎಂ.ಶಂಕರ್, ಕೆ.ಈ.ಕಾಂತೇಶ್, ಮಹಾಲಿಂಗಶಾಸ್ತ್ರಿ, ಮಂಜುನಾಥ್, ಬಾಲು, ಶಂಕರ್ ಹಾಗೂ ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರು, ಆಶ್ರಯ ಬಡಾವಣೆಯ ಫಲಾನುಭವಿಗಳು, ಕಟ್ಟಡ ಕಾರ್ಮಿಕರು ಉಪಸ್ಥಿತರಿದ್ದರು.ಕೋಟ್:ಗೋವಿಂದಾಪುರ ಆಶ್ರಯ ಬಡಾವಣೆಯ ಎಲ್ಲಾ ಮನೆಗಳನ್ನು ಪೂರ್ಣಗೊಳಿಸಿ ಅಗತ್ಯ ಮೂಲ ಸೌಕರ್ಯಗಳಾದ ವಿದ್ಯುತ್, ಕುಡಿಯುವ ನೀರು, ರಸ್ತೆ ಹಾಗೂ ನಗರ ಸಾರಿಗೆ ವ್ಯವಸ್ಥೆ, ಬೀದಿ ದೀಪ ವ್ಯವಸ್ಥೆ ಕಲ್ಪಿಸಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಬೇಕು.
- ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ