ಸಾರಾಂಶ
ಮುಜರಾಯಿ ಇಲಾಖೆಗೆ ಸೇರಿದ ಗುಂಡ್ಲುಪೇಟೆ ಪಟ್ಟಣದ ಪುರಾತನ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಅಕ್ರಮವಾಗಿ ಖಾಸಗಿ ವಾಟರ್ ಪ್ಲಾಂಟ್ ನಿರ್ಮಿಸಿ, ವ್ಯಾಪಾರಕ್ಕಿಳಿದ ಸಂಬಂಧ ಅರ್ಚಕ ಶಂಕರನಾರಾಯಣ ಜೋಯಿಸ್‌ಗೆ ಮುಜರಾಯಿ ಅಧಿಕಾರಿ ನೋಟೀಸ್ ಜಾರಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಮುಜರಾಯಿ ಇಲಾಖೆಗೆ ಸೇರಿದ ಪಟ್ಟಣದ ಪುರಾತನ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಅಕ್ರಮವಾಗಿ ಖಾಸಗಿ ವಾಟರ್ ಪ್ಲಾಂಟ್ ನಿರ್ಮಿಸಿ, ವ್ಯಾಪಾರಕ್ಕಿಳಿದ ಸಂಬಂಧ ಅರ್ಚಕ ಶಂಕರನಾರಾಯಣ ಜೋಯಿಸ್‌ಗೆ ಮುಜರಾಯಿ ಅಧಿಕಾರಿ ನೋಟೀಸ್ ಜಾರಿ ಮಾಡಿದ್ದಾರೆ.ಶ್ರೀ ರಾಮೇಶ್ವರ ದೇವಸ್ಥಾನದೊಳಗೆ ಖಾಸಗಿ ಟ್ರಸ್ಟ್ ವಾಟರ್ ಪ್ಲಾಂಟ್ ನಿರ್ಮಿಸಿ ಸಾರ್ವಜನಿಕರಿಗೆ ನೀರನ್ನು ಮಾರಾಟ ಮಾಡುತ್ತಿರುವ ಸಂಬಂಧ ಅರ್ಚಕ ಶಂಕರನಾರಾಯಣ ಜೋಯಿಸ್‌ಗೆ ನೋಟೀಸ್ ಜಾರಿ ಮಾಡಿ ಉತ್ತರ ಕೇಳಲಾಗಿದೆ. ಆದರೆ ಅರ್ಚಕ ಶಂಕರನಾರಾಯಣ ಜೋಯಿಸ್ ನೋಟೀಸ್ ಪಡೆದ ಬಳಿಕ ಕಳೆದ ತಿಂಗಳು ತಹಸೀಲ್ದಾರ್ ಕಚೇರಿಗೆ ವಾಟರ್ ಪ್ಲಾಂಟ್ ನಿರ್ಮಿಸುತ್ತಿರುವ ಬಗ್ಗೆ ಪತ್ರ ಬರೆದಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೂ ಮುಜರಾಯಿ ಅಧಿಕಾರಿಗಳೂ ಆದ ತಹಸೀಲ್ದಾರ್ ನೋಟೀಸ್‌ಗೆ ಉತ್ತರ ನೀಡುವಂತೆ ಸಲಹೆ ನೀಡಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.ವಾಟರ್ ಪ್ಲಾಂಟ್ ಮಾಡಿದ್ದೇ ಸರಿಯಲ್ಲ
ಪಟ್ಟಣದ ಮುಜರಾಯಿ ಇಲಾಖೆಗೆ ಸೇರಿದ ಶ್ರೀ ರಾಮೇಶ್ವರ ದೇವಸ್ಥಾನದೊಳಗೆ ವಾಟರ್ ಪ್ಲಾಂಟ್ ಮಾಡಿದ್ದೇ ಸರಿಯಲ್ಲ ಎಂದು ಹಿಂದೂ ಹಿತರಕ್ಷಣಾ ಸಮಿತಿ ಹೇಳಿದೆ. ಶ್ರೀರಾಮೇಶ್ವರ ದೇವಸ್ಥಾನದೊಳಗೆ ಭಕ್ತರು ಕೂರಲು ಅವಕಾಶವಿಲ್ಲ. ಅಂತ ಸ್ಥಳದೊಳಗೆ ನೀರಿನ ಘಟಕ ಆರಂಭಿಸಿದ್ದು ಖಂಡನೀಯ ಎಂದು ಹಿಂದೂ ಹಿತರಕ್ಷಣಾ ಸಮಿತಿಯ ನಂದೀಶ್ ಹೇಳಿದ್ದಾರೆ. ಕನ್ನಡಪ್ರಭದೊಂದಿಗೆ ಮಾತನಾಡಿ, ದೇವಸ್ಥಾನದ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಸುವುದು ಅಕ್ಷಮ್ಯ ಅಪರಾಧ. ನೀರಿನ ಘಟಕ ಆರಂಭಿಸಿದ್ದೂ ಅಪರಾಧವೇ ಹಾಗಾಗಿ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಲಿ ಎಂದರು.