ಸಾಮಾಜಿಕ ಸುಧಾರಣೆಗೆ ಕನಕದಾಸರಿಂದ ಕೀರ್ತನೆಗಳ ರಚನೆ

| Published : Nov 19 2024, 12:49 AM IST

ಸಾರಾಂಶ

ಚಾಮರಾಜನಗರದ ಪ್ರವಾಸಿ ಮಂದಿರದಿಂದ ಅಲಂಕೃತ ಬೆಳ್ಳಿರಥದಲ್ಲಿ ಕನಕದಾಸರ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಮಾಜದ ಅಂಕುಡೊಂಕುಗಳನ್ನು ತಿದ್ದುವಂತಹ ಸರಳ ಕೀರ್ತನೆಗಳನ್ನು ರಚಿಸಿ ಕನಕದಾಸರು ಸಾಮಾಜಿಕ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.ನಗರದ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಭಕ್ತಶ್ರೇಷ್ಠ ಶ್ರೀ ಕನಕದಾಸರ 537ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾಮಾಜಿಕ ಅಸಮಾನತೆ ತಾಂಡವವಾಡುತ್ತಿದ್ದ ಅಂದಿನ ಕಾಲಘಟ್ಟದಲ್ಲಿ ಜನರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ಕೀರ್ತನೆಗಳನ್ನು ರಚಿಸಿ ಜನರನ್ನು ಬಡಿದೆಚ್ಚರಿಸಿದ ಕನಕದಾಸರು ಮನುಕುಲದ ಒಳಿತಿಗೆ ದುಡಿದ ಮಹಾನ್ ಸಾಧಕರಾಗಿದ್ದಾರೆ. ಸಂಗೀತ ಹಾಗೂ ನಾಟಕಕಾರರು ಆಗಿದ್ದ ಕನಕದಾಸರ ಚರಿತ್ರೆಯನ್ನು ಓದಿದರೇ ಸಾಲದು. ಅವರ ತತ್ವಸಿದ್ದಾಂತಗಳನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪದ ಮೂಲಕ ಎಲ್ಲಾ ವರ್ಗದವರನ್ನು ಒಂದೆಡೆ ಕಲೆಹಾಕಿ ಸಮಾನತೆಗೆ ಒತ್ತುಕೊಟ್ಟಿದ್ದರು. ಬಳಿಕ 16ನೇ ಶತಮಾನದಲ್ಲಿ ಕನಕದಾಸರು ಅದೇ ದಾರಿಯಲ್ಲಿ ಜನರನ್ನು ಮುನ್ನೆಡೆಸಿದರು. ಕನಕದಾಸರ ಜೀವನಚರಿತ್ರೆಯನ್ನಾಧರಿಸಿದ ‘ಭಕ್ತ ಕನಕದಾಸ’ ಚಲನಚಿತ್ರದಲ್ಲಿ ನಮ್ಮ ಜಿಲ್ಲೆಯ ಡಾ.ರಾಜ್‌ಕುಮಾರ್ ಮನೋಜ್ಞವಾಗಿ ನಟಿಸಿದ್ದಾರೆ. ಆ ಮೂಲಕ ಕನಕದಾಸರು ಜನಮಾನಸದಲ್ಲಿ ಅಚ್ಚಳಿಯದೇ ಚಿರಸ್ಥಾಯಿಯಾಗಿದ್ದಾರೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಸಮಾಜದಲ್ಲಿ ಮೇಲು-ಕೀಳು, ಬಡವ-ಬಲ್ಲಿದ ಭೇದ ಭಾವಗಳನ್ನು ಹೋಗಲಾಡಿಸಲು ಶ್ರಮಿಸಿದ ಕನಕದಾಸರು ದಾಸರಲ್ಲಿ ಅತೀ ಶ್ರೇಷ್ಠ ದಾಸರಾಗಿದ್ದಾರೆ. 316 ಕೀರ್ತನೆಗಳನ್ನು ರಚಿಸಿದ ಕನಕದಾಸರು ಶ್ರೀಕೃಷ್ಣನ ಪರಮಭಕ್ತರಾಗಿ ಭಕ್ತಶ್ರೇಷ್ಠರೆನಿಸಿಕೊಂಡರು. ಅವರ ಅದರ್ಶ ಮೌಲ್ಯಗಳು ಇಂದಿಗೂ ದಾರಿದೀಪವಾಗಿವೆ ಎಂದರು. ಮುಖ್ಯ ಭಾಷಣ ಮಾಡಿದ ಗುಂಡ್ಲುಪೇಟೆ ಶ್ರೀ ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರು ಹಾಗೂ ಸಂಶೋಧಕ ಡಾ.ಎಂ.ಮಂಜುನಾಥ್ ಅವರು ಕನಕದಾಸರ ಮೊದಲ ಹೆಸರು ತಿಮ್ಮಪ್ಪನಾಯಕ. ವಿಜಯನಗರದ ಶ್ರೀಕೃಷ್ಣದೇವರಾಯನ ಸಾಮಂತರಾಗಿದ್ದ ಕನಕದಾಸರು ಸೈನಿಕನಾಗಿ ದಂಡನಾಯಕನಾಗಿ ಹಲವಾರು ಯುದ್ಧಗಳಲ್ಲಿ ಭಾಗವಹಿಸಿ ಅಲ್ಲಿನ ಸಾವು-ನೋವುಗಳನ್ನು ಕಣ್ಣಾರೆ ಕಂಡು ಬಳಿಕ ವೈರಾಗ್ಯ ತಾಳಿದರು. ವ್ಯಾಸರಾಯರ ಶಿಷ್ಯರಾಗಿದ್ದ ಕನಕದಾಸರು ಪ್ರತಿಯೊಂದು ಜೀವಿಯಲ್ಲಿಯೂ ದೇವರನ್ನು ಕಂಡರು ಎಂದು ಹೇಳಿದರು.

ಶ್ರೀಕೃಷ್ಣದೇವರಾಯನ ಸೈನ್ಯದ ಜೊತೆ ಚಾಮರಾಜನಗರ ತಾಲೂಕಿನ ಉಮ್ಮತ್ತೂರಿಗೆ 1512ರಲ್ಲಿ ದಂಡೆತ್ತಿ ಬರುವ ಮೂಲಕ ಕನಕದಾಸರು ಚಾಮರಾಜನಗರಕ್ಕೂ ಬಂದಿದ್ದರು ಎಂಬ ಐತಿಹ್ಯವಿದೆ. ಉಮ್ಮತ್ತೂರಿನ ದೈವ ರಂಗನಾಥಸ್ವಾಮಿಯ ಬಗ್ಗೆ ಕೀರ್ತನೆಯಲ್ಲಿ ಸ್ಮರಿಸಿದ್ದಾರೆ. ಕನಕದಾಸರು ರಾಮಧ್ಯಾನ ಚರಿತೆ ಹಾಗೂ ಹರಿಭಕ್ತಿಸಾರ ಕೃತಿಗಳನ್ನು ರಚಿಸಿ ಜನರನ್ನು ಭಕ್ತಿಮಾರ್ಗದಲ್ಲಿ ನಡೆಸುವ ಮೂಲಕ ಸಮಾಜ ಸುಧಾರಣೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು. ಚಾಮರಾಜನಗರ ಮತ್ತು ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ (ಮುನ್ನ) ಹಾಗೂ ಸಮಾಜದ ತಾಲೂಕು ಅಧ್ಯಕ್ಷ ಉಮೇಶ್ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾದಾಪುರ ರವಿಕುಮಾರ್ ಅವರು ಕನಕದಾಸರ ಬಗ್ಗೆ ಕಿರುಕವನ ವಾಚನ ಮಾಡಿದರು. ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತ, ಮುಖಂಡರಾದ ಬೆಳ್ಳೇಗೌಡ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರವಾಸಿ ಮಂದಿರದಿಂದ ಅಲಂಕೃತ ಬೆಳ್ಳಿರಥದಲ್ಲಿ ಕನಕದಾಸರ ಭಾವಚಿತ್ರದ ಅದ್ದೂರಿ ಮೆರವಣಿಗೆಗೆ ಚಾಲನೆ ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಚಾಲನೆ ನೀಡಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಅಕರ್ಷಕ ಕಲಾತಂಡಗಳು, ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಆಟೋ ಟ್ಯಾಬ್ಲೋಗಳು ಗಮನ ಸೆಳೆದವು.