ಮಧುಗಿರಿಯ ಸಮಗ್ರ ಅಭಿವೃದ್ಧಿ ನಮ್ಮ ಕನಸು: ಆರ್‌. ರಾಜೇಂದ್ರ

| Published : Feb 04 2024, 01:32 AM IST

ಸಾರಾಂಶ

ಇನ್ನೆರೆಡು ವರ್ಷದಲ್ಲಿ ಮಧುಗಿರಿ ಕ್ಷೇತ್ರದ ಚಿತ್ರಣವೇ ಬದಲಾಗಿ ಅಭಿವೃದ್ಧಿ ಪರ್ವ ಮುನ್ನಲೆಗೆ ಬರಲಿದೆ ಎಂದು ವಿಧಾನ ಪರಿಷತ್‌ ಸದಸ್ಯೆ ಆರ್‌. ರಾಜೇಂದ್ರ ರಾಜಣ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಇನ್ನೆರೆಡು ವರ್ಷದಲ್ಲಿ ಮಧುಗಿರಿ ಕ್ಷೇತ್ರದ ಚಿತ್ರಣವೇ ಬದಲಾಗಿ ಅಭಿವೃದ್ಧಿ ಪರ್ವ ಮುನ್ನಲೆಗೆ ಬರಲಿದ್ದು, ಮುಂದಿನ ನಾಲ್ಕೂ ವರ್ಷಗಳ ಒಳಗಾಗಿ ಮಧುಗಿರಿ ಪ್ರತ್ತೇಕ ಜಿಲ್ಲೆಯಾಗುವುದರಲ್ಲಿ ಯಾವುದೇ ಅನುಮಾನ ಬೇಡ, ಕ್ಷೇತ್ರದ ಸಮಗ್ರ ಅಭಿವೃದ್ಧಿ ನಮ್ಮ ಕನಸು ಎಂದು ವಿಧಾನ ಪರಿಷತ್‌ ಸದಸ್ಯೆ ಆರ್‌. ರಾಜೇಂದ್ರ ರಾಜಣ್ಣ ತಿಳಿಸಿದರು.

ತಾಲೂಕಿನ ದೊಡ್ಡೇರಿ ಹೋಬಳಿ ಕೊಟಗಾರಲಹಳ್ಳಿಯಲ್ಲಿ ಶನಿವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್‌ ರಾಜ್‌ ಇಲಾಖೆಯಿಂದ ಗ್ರಾಪಂ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ನಾನಾ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಈಗಾಗಲೇ ಮಧುಗಿರಿ ಶೈಕ್ಷಣಿಕ ಜಿಲ್ಲೆಯಾಗಿದ್ದು, ಆಡಳಿತ್ಮಾಕ ದೃಷ್ಠಿಯಿಂದ ಮಧುಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಅದಕ್ಕೆ ಒಂದು ಕಮಿಟಿ ರಚಿಸಿ ಮಧುಗಿರಿ ಜಿಲ್ಲೆ ಮಾಡಲು ತಿರ್ಮಾನ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಮಾತು ಕೊಟ್ಟಿದ್ದಾರೆ ಎಂದರು.

2018ರಲ್ಲಿ ಚುನಾಯಿತರಾದ ಶಾಸಕರು ಈ ಭಾಗದಲ್ಲಿ ಸಮುದಾಯ ಭವನ ನಿರ್ಮಿಸುವುದಾಗಿ ಭರವಸೆ ನೀಡಿ ಕೈ ಬಿಟ್ಟಿದ್ದಾರೆ. ಕೆಟ್ಟಿರುವ ರಸ್ತೆ ದುರಸ್ತಿ, ಸ್ಥಳೀಯರಿಗೆ ಒಂದು ಮನೆ, ನಿವೇಶನ ಕೂಡ ಕೊಡಲಿಲ್ಲ. ಇದರಿಂದ ಬೇಸತ್ತ ಮತದಾರರು ದೊಡ್ಡೇರಿ ಹೋಬಳಿಯಲ್ಲಿ ಕಳೆದ ಆಸೆಂಬ್ಲಿ ಚುನಾವಣೆಯಲ್ಲಿ ನಮ್ಮ ತಂದೆ ರಾಜಣ್ಣರವರಿಗೆ ನಾಲ್ಕೂ ಸಾವಿರಕ್ಕೂ ಅಧಿಕ ಮತ ನೀಡಿದ್ದು, ಈ ಭಾಗದಲ್ಲಿ ಹತ್ತಕ್ಕೂ ಹೆಚ್ಚು ಹಳ್ಳಿಗಳಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿದ್ದು ಆಸ್ಪತ್ರೆ, ಬಸ್‌ ವ್ಯವಸ್ಥೆ ಸೇರಿ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು. ಇಲ್ಲಿನ ನಾಲ್ಕೂ ಸ್ವಸಹಾಯ ಸಂಘಗಳಿಗೆ ನಾಲ್ಕೂ ಕೋಟಿ ಸಾಲ ನೀಡಲಾಗಿದೆ ಎಂದರು.

ತಾಲೂಕಿಗೆ 1500 ಮನೆಗಳು ಮಂಜೂರಾಗಿದ್ದು, ಯಾವುದೇ ತಾರತಮ್ಯ ಪಕ್ಷಭೇಧ ಮಾಡದೇ ಎಲ್ಲ ಜಾತಿಯ ಬಡವರನ್ನು ಗುರುತಿಸಿ ಮನೆ ಕೊಡಿ ಎಂದು ತಾಪಂ ಇಒ, ಪಿಡಿಒಗಳಿಗೆ ಈಗಾಗಲೇ ಸಚಿವರು ಸಲಹೆ ನೀಡಿದ್ದು, ಅದರಂತೆ ಅರ್ಹ ಫಲಾನುಭವಿಗಳಿಗೆ ಮನೆ ವಿತರಿಸುವಂತೆ ಸೂಚಿಸಿದರು.

ಮಧುಗಿರಿ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ 25 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇದರಿಂದ ಪಟ್ಟಣದ ಚಿತ್ರಣವೇ ಬದಲಾಗಲಿದೆ. ಲೋಕಸಭೆ ಚುನಾವಣೆಗೂ ಮುನ್ನ ಬಡವರಿಗೆ ಮನೆ, ನಿವೇಶನ ಕೊಡುವುದಾಗಿ ತಿಳಿಸಿ, ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷದಿಂದ ಹೈಕಮಾಂಡ್‌ ಯಾರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸದರೂ ಅವರನ್ನು ಗೆಲ್ಲಿಸಲು ಪಣ ತೊಡಬೇಕು. ಈ ಭಾಗದಲ್ಲಿ ಪಕ್ಷ ಸದೃಡಗೊಳಿಸೋಣ ನೀವುಗಳು ದೊಡ್ಡ ಮನಸ್ಸು ಮಾಡಿ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸಿದರೆ ಸಚಿವ ರಾಜಣ್ಣರವರಿಗೆ ಶಕ್ತಿ ತುಂಬಿದಂತೆ. ಆದ ಕಾರಣ ಮತದಾರರು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ರಾಜೇಂದ್ರ ಮನವಿ ಮಾಡಿದರು.

ಸಮಾರಂಭದಲ್ಲಿ ಸಹಕಾರ ಮಹಾ ಮಂಡಲದ ನಿರ್ದೇಶಕ ಎನ್‌. ಗಂಗಣ್ಣ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಬಿ.ನಾಗೇಶ್‌ಬಾಬು, ಕೆಎಂಎಫ್‌ ನಿರ್ದೇಶಕ ಮೈದನಹಳ್ಳಿ ಕಾಂತರಾಜು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗೋಪಾಲಯ್ಯ, ಕೊಟಗಾರಲಹಳ್ಳಿ ಗ್ರಾಪಂ ಅಧ್ಯಕ್ಷೆ ಲಾವಣ್ಯ ಶಿವಣ್ಣ, ಉಪಾಧ್ಯಕ್ಷೆ ಸಿದ್ದರಾಜಮ್ಮ, ಯುವ ಮುಖಂಡ ದೀಪಕ್‌, ಮುಖಂಡರಾದ ತುಂಗೋಟಿ ರಾಮಣ್ಣ, ಜಿಪಂ ಮಾಜಿ ಸದಸ್ಯ ಕೆಂಪಚೌಡಪ್ಪ, ತಾಪಂ ಮಾಜಿ ಸದಸ್ಯರಾದ ಇಂದಿರಾ, ಸುವರ್ಣಮ್ಮ, ಪಿಡಿಒ ದಯಾನಂದ್‌ ಸೇರಿದಂತೆ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಇದ್ದರು.