ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ ಪಠ್ಯದ ಜೊತೆಗಿನ ಪಠ್ಯೇತರ ಚಟುವಟಿಕೆಗಳು ಸಮಗ್ರ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬಲ್ಲದು ಎಂದು ದಕ್ಷಿಣ ಕನ್ನಡ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಆಯುಕ್ತ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ನುಡಿದರು.
ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಬಾಗಿತ್ವದಲ್ಲಿ ಕೃಷಿ ಸಿರಿ ವೇದಿಕೆಯಲ್ಲಿ ಗುರುವಾರ ‘ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ಯಾಂಪೋರಿ’ ಕಾರ್ಯಕ್ರಮದ ಸ್ಕೌಟ್ಸ್ ಮತ್ತು ಗೈಡ್ಸ್ ಮೇಳ, ರೋವರ್ಸ್ ಮತ್ತು ರೇಂಜರ್ಸ್ ಸಮಾಗಮವನ್ನು ಉದ್ಘಾಟಿಸಿ ಮಾತನಾಡಿದರು. ಬಾಲ್ಯದ ಕಲಿಕೆ ಉಜ್ವಲ ಭವಿಷ್ಯವನ್ನು ರೂಪಿಸುತ್ತದೆ. ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣದಲ್ಲಿ ವಿದ್ಯೆ ಮತ್ತು ಬುದ್ಧಿಯ ಜೊತೆಗೆ ಪಠ್ಯೇತರ ವಿಚಾರಗಳಲ್ಲಿ ತೊಡಗಿಸಿಕೊಂಡಾಗ ಸುಂದರ ಮನಸನ್ನು ಕಟ್ಟಿಕೊಳ್ಳಲು ಸಾಧ್ಯ ಎಂದರು.ಜಿಲ್ಲಾ ಸ್ಕೌಟ್ ಆಯುಕ್ತ ಮಹಮ್ಮದ್ ತುಂಬೆ, ಜಿಲ್ಲಾ ಗೈಡ್ ಆಯುಕ್ತೆ ವಿಮಲಾ ರಂಗಯ್ಯ, ಜಿಲ್ಲಾ ಕಾರ್ಯದರ್ಶಿ ಪ್ರತಿಮ್ ಕುಮಾರ್, ಜಿಲ್ಲಾ ಜಂಟಿ ಕಾರ್ಯದರ್ಶಿ ಜಯವಂತಿ ಸೋನ್ಸ್, ಜಿಲ್ಲಾ ಸಂಘಟನಾ ಆಯುಕ್ತೆ ಸುನೀತಾ, ಜಿಲ್ಲಾ ತರಬೇತಿ ಆಯುಕ್ತ ಶಾಂತಾರಾಮ ಪ್ರಭು, ಶಿಬಿರ ನಿರ್ದೇಶಕ ನಾರಾಯಣ್ ನಾಯ್ಕ, ಗೈಡ್ ವಿಭಾಗ ನಾಯಕಿ ತ್ರಿಶಲಾ, ರೋವರ್ ಮತ್ತು ರೇಂಜರ್ ವಿಭಾಗ ನಾಯಕಿ ಡಾ. ಅಪರ್ಣಾ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಭಾರತಿ ನಾಯಕ್, ರಾಜ್ಯ ಸಹಾಯಕ ಸಂಘಟನಾ ಆಯುಕ್ತರು ಭರತ್ ರಾಜ್ ಕೆ. ಇದ್ದರು. ಜಿಲ್ಲೆಯ 13 ಸ್ಥಳೀಯ ಸಂಸ್ಥೆಗಳಿಂದ ಸ್ಕೌಟ್- 450, ಗೈಡ್- 331, ರೋವರ್ಸ್- 12, ರೇಂಜರ್ಸ್- 33, ಸ್ಕೌಟ್ ಮಾಸ್ಟರ್- 33, ಗೈಡ್ ಕ್ಯಾಪ್ಟನ್- 25, ರೇಂಜರ್ ಲೀಡರ್- 2, ಸ್ವಯಂಸೇವಕರಾಗಿ ರೋವರ್ಸ್- 27, ರೇಂಜರ್ಸ್- 44, ಸಿಬ್ಬಂದಿ ವರ್ಗದವರು- 35 ಸೇರಿದಂತೆ 992 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಜಿಲ್ಲಾ ಕೋಶಾಧಿಕಾರಿ ನವೀನ್ ಚಂದ್ರ ಅಂಬೂರಿ ನಿರೂಪಿಸಿದರು. ಜಿಲ್ಲಾ ಸಂಘಟನಾ ಆಯುಕ್ತ ವಸಂತ್ ದೇವಾಡಿಗ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಪ್ರತಿಮ್ ಕುಮಾರ್ ವಂದಿಸಿದರು. ಉದ್ಘಾಟನಾ ಸಮಾರಂಭದ ನಂತರ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.