ಚರಂಡಿ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯ

| Published : Jun 21 2024, 01:03 AM IST

ಸಾರಾಂಶ

ಸುರಪುರ ತಾಲೂಕಿನ ಕೆಂಭಾವಿ ಹಿಂದಿನ ಬಜಾರ್ ಕೇದಾರ ಕಟ್ಟೆಯಿಂದ ಮಾರುತಿ ದೇವಸ್ಥಾನದವರೆಗಿನ ಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ಶ್ರೀ ಮಾರುತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಸದಸ್ಯರು ಪುರಸಭೆ ಅಧಿಕಾರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಸುರಪುರ

ಕೆಂಭಾವಿ ಪಟ್ಟಣದ ಹಿಂದಿನ ಬಜಾರ್ ಕೇದಾರ ಕಟ್ಟೆಯಿಂದ ಮಾರುತಿ ದೇವಸ್ಥಾನದವರೆಗಿನ ಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಮಾರುತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಸದಸ್ಯರು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಮಾರುತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ಹಾಗೂ ಸಾರ್ವಜನಿಕರು ಈ ಕುರಿತು ಪುರಸಭೆ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದಿದ್ದರೂ ಪ್ರಯೋಜನವಾಗಿಲ್ಲ. ಆದರೆ, ಅಧಿಕಾರಿಗಳು ಯಾವುದೇ ತರಹದ ದುರಸ್ತಿ ಕಾರ್ಯಕ್ಕೆ ಮುಂದಾಗಿಲ್ಲ. ಇದರಿಂದ ಮಾರುತಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾರುತಿ ದೇವಸ್ಥಾನದ ಜೀರ್ಣೋದ್ದಾರ ಕಾಮಗಾರಿ ನಡೆಯುತ್ತಿರುವುದರಿಂದ ಹಿಂಭಾಗದಲ್ಲಿನ ಚರಂಡಿ ನೀರು ಮೂಲ ಮಂದಿರ ಮತ್ತು ಮಂದಿರದ ಸುತ್ತಮುತ್ತ ನುಸಳದಂತೆ ಚರಂಡಿ ಕಾಮಗಾರಿ ಪರಿಶೀಲಿಸಿ ಪೂರ್ಣಗೊಳಿಸಬೇಕು. ಈ ಪ್ರದೇಶದಲ್ಲಿ ಸಾರ್ವಜನಿಕರಿಗೆ ತಿರಗಾಡಲು ಸಹ ಬಹಳ ಕಷ್ಟವಾಗುತ್ತಿದೆ. ಮಹಿಳೆಯರು, ಮಕ್ಕಳು, ವೃದ್ಧರು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ. ಆದಷ್ಟು ಶೀಘ್ರದಲ್ಲಿ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಅಧ್ಯಕ್ಷರಾದ ಅರುಣ ಸೊನ್ನದ, ಅಮ್ಮಣ್ಣ ಧರಿ, ಮಡಿವಾಳಪ್ಪಗೌಡ ಪೊಲೀಸ್ ಪಾಟೀಲ್ , ಮಹಿಪಾಲರೆಡ್ಡಿ ಡಿಗ್ಗಾವಿ, ಪುರಸಭೆ ಸದಸ್ಯ ಶರಣಪ್ಪ ಯಾಳಗಿ, ತಿಪ್ಪಣ್ಣ ಯಾಳಗಿ, ನಂದಪ್ಪ ಕವಲ್ದಾರ, ಹಳ್ಳೆಪ್ಪ ಕವಲ್ದಾರ ಸೇರಿದಂತೆ ಇತರರಿದ್ದರು.