ಸಾರಾಂಶ
ಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ಇಲ್ಲಿನ ಸಿಂಗಟಾಲೂರು ಯೋಜನೆ ವ್ಯಾಪ್ತಿಯ ಮಾಗಳ ಜಾಕ್‌ವೆಲ್ ಮೂಲಕ ಕಾಲುವೆಗೆ ನೀರಿಸುವಂತೆ ಒತ್ತಾಯಿಸಿ, ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಯಿತು.ಕಳೆದೊಂದು ವಾರದ ಹಿಂದೆ ಶಾಸಕರ ಸಮ್ಮುಖದಲ್ಲಿ ರೈತರು ಮತ್ತು ಅಧಿಕಾರಿಗಳನ್ನು ಕರೆದು, ವಾರದೊಳಗೆ ಮಾಗಳ ಜಾಕ್ವೆಲ್‌ನ ಮೋಟಾರ್ ಹಾಗೂ ಪಂಪ್ ದುರಸ್ತಿ ಮಾಡಿಸಿ, ರೈತರ ಜಮೀನುಗಳಿಗೆ ನೀರು ಹರಿಸುವ ತೀರ್ಮಾನದಂತೆ ಅಧಿಕಾರಿಗಳು ನಡೆದುಕೊಂಡಿಲ್ಲ, ರೈತರ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ. ಮಳೆ ಇಲ್ಲದೇ ಬೆಳೆಗಳು ಒಣಗುತ್ತಿವೆ. ಅದಕ್ಕಾಗಿ ನೀರು ಕೇಳಲು ಬಂದಿದ್ದೇವೆ. ಆದರೆ, ಅಧಿಕಾರಿಗಳು ಸಮರ್ಪಕ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿ ತಾಸಿಗೂ ಹೆಚ್ಚು ಕಾಲ ಕಚೇರಿಗೆ ಬೀಗ ಹಾಕಿದ್ದರು.
ಮಾಗಳ ಜಾಕ್ವೆಲ್‌ನ ಅಚ್ಚುಕಟ್ಟು ಪ್ರದೇಶದ ರೈತರು, ಕಾಲುವೆ ನೀರು ನಂಬಿಕೊಂಡು ಸಾವಿರಾರು ಎಕರೆ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಅತ್ತ ಮಳೆ ಇಲ್ಲದೇ ಬೆಳೆಗಳು ಒಣಗುತ್ತಿವೆ. ಕೊಳವೆ ಬಾವಿಯಲ್ಲಿನ ನೀರು ಕಡಿಮೆಯಾಗಿದೆ. ಆದ್ದರಿಂದ ಕೋಟ್ಯಂತರ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಮಾಗಳ ಜಾಕ್ವೆಲ್ ಪೈಪ್‌ಲೈನ್ ಸಂಪೂರ್ಣವಾಗಿದೆ. ಆದರೆ, ದುರಸ್ತಿಗೆ ಬಂದಿರುವ ಮೋಟಾರ್ ಹಾಗೂ ಪಂಪ್‌ಗಳನ್ನು ರಿಪೇರಿ ಮಾಡಿ ರೈತರಿಗೆ ನೀರು ಕೊಡುವಲ್ಲಿ ಅಧಿಕಾರಿಗಳು ಹಿಂದೇಟು ಹಾಕುತ್ತ, ಇಲ್ಲ ಸಲ್ಲದ ನೆಪಗಳನ್ನು ಹೇಳುತ್ತಿದ್ದಾರೆ ಎಂದು ರೈತರು ದೂರಿದರು.ಜಾಕ್ವೆಲ್‌ನ ಮೋಟಾರ್ ಹಾಗೂ ಪಂಪ್‌ಗಳು ರಿಪೇರಿಯಾಗಿ ಚೆನ್ನೈನಿಂದ ಬಂದು ಮೂರು ದಿನಗಳು ಕಳೆದಿವೆ. ಆದರೆ, ಗುತ್ತಿಗೆದಾರರಿಂದ ಅಧಿಕಾರಿಗಳು ಕೆಲಸ ಮಾಡಿಸುತ್ತಿಲ್ಲ. ಇದರಿಂದ ರೈತರ ಜಮೀನುಗಳಿಗೆ ನೀರು ಹರಿಯುತ್ತಿಲ್ಲ. ಕಳೆದ ಬಾರಿ ಬರ ಬಿದ್ದು ಸಾಲದಲ್ಲಿ ಸಿಲುಕಿಕೊಂಡಿದ್ದೇವೆ, ಈ ಬಾರಿ ಮತ್ತೆ ಸಾಲ ಮಾಡಿ ಬಿತ್ತನೆ ಮಾಡಿದ್ದರೂ, ಕಾಲುವೆಗಳಿಗೆ ನೀರು ಬರುತ್ತಿಲ್ಲ. ನೀರು ಬಿಡುವ ವರೆಗೂ ಕಚೇರಿ ಬೀಗ ತೆರೆಯುವುದಿಲ್ಲವೆಂದು ರೈತರು ಪಟ್ಟು ಹಿಡಿದಿದ್ದರು.
ಪ್ರತಿಭಟನಾಕಾರರ ಮನವೊಲಿಕೆಸಿಂಗಟಾಲೂರು ಏತ ನೀರಾವರಿ ಯೋಜನೆಯ ಇಇ ಶಿವಮೂರ್ತಿ ಸ್ಥಳಕ್ಕೆ ಬಂದು, ಮಾಗಳ ಜಾಕ್ವೆಲ್ ಬಂದ್ ಆಗಿ 5 ವರ್ಷ ಕಳೆದಿವೆ. ಇದರಿಂದ ಮೋಟಾರ್ ಪಂಪ್ ದುರಸ್ತಿಗೆ ಬಂದಿದ್ದವು. ರಿಪೇರಿಗೆ ಅನುದಾನ ಇರಲಿಲ್ಲ. ಗುತ್ತಿಗೆದಾರರ ಮನವೊಲಿಸಿ ಕೆಲಸ ಮಾಡಿಸುತ್ತಿದ್ದೇವೆ. ಈಗಾಗಲೇ ಸಾಮಗ್ರಿಗಳು ಬಂದಿವೆ. ಇನ್ನು 5 ದಿನದೊಳಗೆ ಎಲ್ಲ ದುರಸ್ತಿ ಮಾಡಿಸಿ ರೈತರಿಗೆ ನೀರು ಹರಿಸುವ ಕೆಲಸ ಮಾಡುತ್ತೇವೆ ಎದು ಹೇಳಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ರೈತರು ಕಚೇರಿಯ ಬೀಗ ತೆರೆದು ಪ್ರತಿಭಟನೆಯಿಂದ ಹಿಂದೆ ಸರಿದರು.
ಈ ಸಂದರ್ಭದಲ್ಲಿ ಈಟಿ ಕೋಟೆಪ್ಪ, ಎಂ.ನಾರಾಯಣರೆಡ್ಡಿ, ಎಚ್.ಶಂಕ್ರಪ್ಪ, ಶಿವಪುರ ನಿಂಗಪ್ಪ, ಕೋಟೆಪ್ಪ, ಹನುಮಂತರೆಡ್ಡಿ ಸೇರಿದಂತೆ ಮಾಗಳ, ಶಿವಪುರ, ವಡ್ಡನಹಳ್ಳಿ ತಾಂಡ ಮತ್ತು ಕೆ.ಅಯ್ಯನಹಳ್ಳಿನ ರೈತರು ಭಾಗವಹಿಸಿದ್ದರು.