ಸರ್ವಜ್ಞ ಪ್ರಾಧಿಕಾರದ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

| Published : Mar 05 2024, 01:32 AM IST

ಸಾರಾಂಶ

ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗ್ರಾಪಂ ಆವರಣದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಮಾಸೂರ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ

ಕನ್ನಡಪ್ರಭ ವಾರ್ತೆ ರಟ್ಟೀಹಳ್ಳಿ

ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲೂಕಿನ ಮಾಸೂರ ಗ್ರಾಮದ ಗ್ರಾಪಂ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗ್ರಾಪಂ ಆವರಣದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಮೀಳಾ ನಡುವಿನಮನೆ ಮಾತನಾಡಿ, ೧೬ನೇ ಶತಮಾನದ ಮಹಾನ್ ಮಾನವತಾವಾದಿ, ತ್ರಿಪದಿಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನ ತಿದ್ದಿ, ಕನ್ನಡ ನಾಡು ನುಡಿ ಕಂಡಂತಹ ಸರ್ವಜ್ಞರ ಐಕ್ಯ ಸ್ಥಳವನ್ನು ಅಭಿವೃದ್ಧಿ ಪಡಿಸದೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಈ ಬಗ್ಗೆ ಅನೇಕ ವರ್ಷಗಳಿಂದ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿಂದೆ ಮಾಸೂರಿನಲ್ಲಿ ಸರ್ವಜ್ಞನ ಐಕ್ಯ ಸ್ಥಳದ ಸುತ್ತಲಿನ ಜಮೀನನ್ನು ಪ್ರಾಧಿಕಾರದಿಂದ ಖರೀದಿಸಿದ್ದು ಬಿಟ್ಟರೆ ಮಾಸೂರಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಆದ್ದರಿಂದ ತಾಲೂಕಾಡಳಿತ ಹಾಗೂ ಜಿಲ್ಲಾಡಳಿತ ತಕ್ಷಣ ಸರ್ಕಾರದ ಮೇಲೆ ಒತ್ತಡ ಹೇರಿ ಸರ್ವಜ್ಞ ಐಕ್ಯಸ್ಥಳದಲ್ಲಿ ಪ್ರಾಧಿಕಾರದಿಂದ ಖರೀದಿಸಿದ ಭೂಮಿಯಲ್ಲಿ ಸರ್ಕಾರದಿಂದ ₹೫೦ ಕೋಟಿ ಅನುದಾನ ನೀಡಿ ಐಕ್ಯ ಮಂಟಪವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸಬೇಕು, ಸರ್ವಜ್ಞ ಪ್ರಾಧಿಕಾರದ ಕೇಂದ್ರ ಕಚೇರಿಯನ್ನು ಮಾಸೂರಿನಲ್ಲಿ ನಿರ್ಮಾಣ ಮಾಡಬೇಕು, ಮುಂಬರುವ ದಿನಗಳಲ್ಲಿ ಸರ್ವಜ್ಞನ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಿಡುಗಡೆಯಾಗುವ ಅನುದಾನದಲ್ಲಿ ಮಾಸೂರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಹೋರಾಟ ಬೆಂಬಲಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಸರ್ವಜ್ಞರು ನಾಡಿನಾದ್ಯಂತ ಹೆಸರು ಮಾಡಿದ ಶ್ರೇಷ್ಠ ಕವಿ. ಅಂತಹ ಮಹಾನ್ ಶರಣರ ಕುರಿತು ಸರ್ಕಾರ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ಅಧಿಕಾರಿಗಳ ನಿಷ್ಕಾಳಜಿಯಿಂದಾಗಿ ಬಂದಂತಹ ಅನುದಾನ ಬಳಸದೆ ಪುನಃ ಸರ್ಕಾರಕ್ಕೆ ವಾಪಸ್ಸಾಗುತ್ತಿದ್ದು, ಜಿಲ್ಲಾಡಳಿತ, ತಾಲೂಕಾಡಳಿತ ನಡೆಸುವ ಕಾರ್ಯವೈಖರಿ ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಸರ್ವಜ್ಞರ ಜಯಂತಿಯಂದು ಸರ್ವಜ್ಞರ ಐಕ್ಯ ಮಂಟಪಕ್ಕೆ ತಾಲೂಕಾಡಳಿತ ಒಂದು ಮಾಲೆಯನ್ನು ಹಾಕದಂತಹ ನಿರ್ಲಕ್ಷ್ಯ ಮಾಡಿರುವುದು ನಾಚಿಕಿಗೇಡಿನ ಸಂಗತಿ. ಅಧಿಕಾರಿಗಳು ರಾಜಕಾರಣಿಗಳ ಕೈಗೊಂಬೆಯಾಗಿ ಕೆಲಸ ಮಾಡದೇ ನ್ಯಾಯಯುತವಾಗಿ ಕಾರ್ಯನಿರ್ವಹಿಸಿ ಎಂದು ಮನವಿ ಮಾಡಿದರು.

ಮುಖಂಡ ಮಲ್ಲೇಶ ಗುತ್ತೇಣ್ಣನವರ ಮಾತನಾಡಿ, ಸರ್ವಜ್ಞರ ಜನ್ಮ ಸ್ಥಳ ಮಾಸೂರು ಎಂದು ಅನೇಕ ದಾಖಲಾತಿಗಳು ಇದ್ದರೂ ಸಹ ಸತ್ಯವನ್ನು ಮರೆಮಾಚಿ ಶಿಕ್ಷಣ ಇಲಾಖೆ ೪ನೇ ತರಗತಿ ಪುಸ್ತಕದಲ್ಲಿ ಸರ್ವಜ್ಞರ ಜನ್ಮ ಸ್ಥಳ ಅಬಲೂರು ಎಂದು ತಪ್ಪು ಮಾಹಿತಿ ನೀಡಿ ಮಕ್ಕಳಿಗೆ ಬೋಧನೆ ಮಾಡುತ್ತಿರುವುದು ಸರಿಯಲ್ಲ. ಈಗಾಗಲೇ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಸರ್ವಜ್ಞರು ವಚನಗಳ ೧೦೦ ತಾಡೋಲೆಗಳು ಹಾಗೂ ೧೯೦೦ ವಚನಗಳ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಇನ್ನು ಅನೇಕ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ತಾಲೂಕಾಡಳಿತ ಲಿಖಿತ ರೂಪದಲ್ಲಿ ಭರವಸೆ ನೀಡಿದರೆ ಮಾತ್ರ ಹೋರಾಟ ಕೈಬಿಡಲಾಗುವುದು. ಇಲ್ಲವಾದಲ್ಲಿ ನಮ್ಮ ಹೋರಾಟ ನಿರಂತ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಕಾವ್ಯ ಹಿತ್ತಲಮನಿ, ಶಾರದಾ ಕಲಾಲ, ಇರ್ಫಾನ, ಶಿವರಾಜ, ಪೂರ್ಣಿಮಾ ಹೊನ್ನಾಳ್ಳಿ, ರಾಜು ಸುಣಗಾರ, ಗಿರೀಶ ಪಾಟಿಲ, ಬಸವರಾಜ ಬುಡ್ಡಣ್ಣನವರ, ಫಾತಿಮಾ ಬಳ್ಳಾರಿ, ಶ್ರೀಧರ ನಾಯ್ಕ, ವೀರಪ್ಪ ಬೇವಿನಮರದ, ಬಸವರಾಜ ಹೊನ್ನಾಳ್ಳಿ, ಸುರೇಶ ಬಡಗೇರ, ಮಂಜುನಾಥ ಲಿಂಗದಳ್ಳಿ, ಶಂಭುಗೌಡ ಪರಸಪ್ಪನವರ, ಅಶೋಕ ಬೇವಿನಮರದ, ರಾಮು ನೆಗಳೂರ, ಅಶೋಕ ದೊಂಬಲೂರ, ರಮೇಶ ಚಕ್ರಸಾಲಿ ಮುಂತಾದವರು ಇದ್ದರು.