ಸಾರಾಂಶ
ದೊಡ್ಡಬಳ್ಳಾಪುರ: ಕನ್ನಡ ಜಾಗೃತಿ ವೇದಿಕೆ ತಾಲೂಕು ಮತ್ತು ಜಿಲ್ಲಾ ಘಟಕದ ವತಿಯಿಂದ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ 51ನೇ ವರ್ಷಾಚರಣೆ ಅಂಗವಾಗಿ ನಗರದ ಶ್ರೀ ನೆಲದಾಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಭುವನೇಶ್ವರಿ ಮಾತೆಗೆ ಪೂಜೆ ಸಲ್ಲಿಸಿ ಬೈಕ್ ಜಾಥಾಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ಎಂ.ನಾಗರಾಜ್, ಕನ್ನಡ ಜಾಗೃತಿ ವೇದಿಕೆ 31 ವರ್ಷಗಳಿಂದ ಕನ್ನಡ ನಾಡು-ನುಡಿ, ಜಲ-ಭಾಷೆ ವಿಷಯವಾಗಿ ಹಲವಾರು ಹೋರಾಟಗಳನ್ನು ಮಾಡುತ್ತಿರುವ ಹೆಮ್ಮೆಯ ಸಂಘಟನೆಯಾಗಿದೆ.ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ನೀಡಬೇಕು, ನಾಮ ಫಲಕಗಳು ಕಡ್ಡಾಯವಾಗಿ ಕನ್ನಡದಲ್ಲಿ ಹಾಕಬೇಕು, ಕನ್ನಡಿಗರ ಅಸ್ತಿತ್ವ ಐಕ್ಯತೆ, ಕನ್ನಡದ ಉಳಿವಿಗಾಗಿ ಮತ್ತು ಸರೋಜಿನಿ ಮಹಿಷಿ ವರದಿ ಕಡ್ಡಾಯವಾಗಿ ಜಾರಿಯಾಗಬೇಕು ಎಂಬ ಹಕ್ಕೊತ್ತಾಯದೊಂದಿಗೆ ಕಾರ್ಯಕ್ರಮ ನಡೆಯುತ್ತಿರುವುದಾಗಿ ತಿಳಿಸಿದರು.
ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಅಗ್ನಿ ವೆಂಕಟೇಶ್ ಮಾತನಾಡಿ, ಮುಂದಿನ ದಿನಗಳಲ್ಲಿ ಕನ್ನಡ ಜಾಗೃತಿ ವೇದಿಕೆ ನೇತೃತ್ವದಲ್ಲಿ ದೊಡ್ಡಬಳ್ಳಾಪುರದ ಮೂಲಸೌಕರ್ಯ, ಮೆಟ್ರೋ ರೈಲು, ಸ್ಯಾಟಲೈಟ್ ಟೌನ್, ಎತ್ತಿನಹೊಳೆ ಯೋಜನೆಗಳ ವಿಚಾರದಲ್ಲಿ ರಚನಾತ್ಮಕ ಹೋರಾಟ ರೂಪಿಸಲಾಗುವುದು ಎಂದರು.ವೇದಿಕೆಯ ತಾಲೂಕು ಅಧ್ಯಕ್ಷ ಶಶಿಧರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧಾಕರ್, ಕಾರ್ಮಿಕ ಘಟಕದ ಅಧ್ಯಕ್ಷ ಗುರುಪ್ರಸಾದ್, ಪ್ರಧಾನ ಕಾರ್ಯದರ್ಶಿ ಹೇಮಂತ್, ಜಗದೀಶ್, ತಾಲೂಕು ಸಂಚಾಲಕರಾದ ಮಹದೇವ್, ಶಿವಕುಮಾರ್, ರವಿಕುಮಾರ್, ಶಂಕರ್ ಶೆಟ್ಟಿ, ರಾಜಶೇಖರ್, ಸಂಘಟನಾ ಕಾರ್ಯದರ್ಶಿಗಳಾದ ಶಂಕರ್, ವಿಶ್ವನಾಥ್, ವೆಂಕಟೇಶ್ ಮತ್ತಿತರರು ಪಾಲ್ಗೊಂಡಿದ್ದರು.
ಫೋಟೋ-24ಕೆಡಿಬಿಪಿ1- ದೊಡ್ಡಬಳ್ಳಾಪುರದಲ್ಲಿ ಕನ್ನಡ ಜಾಗೃತಿ ವೇದಿಕೆಯ ನೇತೃತ್ವದಲ್ಲಿ ಬೈಕ್ ಜಾಥಾ ಕಾರ್ಯಕ್ರಮ ನಡೆಯಿತು.