ಕಡ್ಡಾಯವಾಗಿ ಮತದಾನ ಮಾಡಿ: ಎಡಿ ಚವ್ಹಾಣ

| Published : Mar 23 2024, 01:03 AM IST

ಸಾರಾಂಶ

ಬಸವಕಲ್ಯಾಣ ತಾಲೂಕಿನ ಯರಬಾಗ ಗ್ರಾ.ಪಂ. ವ್ಯಾಪ್ತಿಯ ಸದಲಾಪೂರ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಸ್ಥಳದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಜರುಗಿತು.

ಬಸವಕಲ್ಯಾಣ: ಲೋಕಸಭೆ ಚುನಾವಣೆ ನಿಮಿತ್ತ ಮೇ 7ರಂದು ಎಲ್ಲರೂ ಕಡ್ಡಾಯವಾಗಿ ಮತದಾನದ ಹಕ್ಕು ಚಲಾಯಿಸಬೇಕು ಮತ್ತು ಬೇಸಿಗೆ ಮುಗಿಯುವವರೆಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸಂತೋಷ ಚವ್ಹಾಣ ಹೇಳಿದರು.

ತಾಲೂಕಿನ ಯರಬಾಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸದಲಾಪೂರ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡ ಮತದಾನ ಜಾಗೃತಿ ಹಾಗೂ "ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ/ಉದ್ಯೋಗ ಖಾತ್ರಿ ದುಡಿಮೆ ಖಾತ್ರಿ " ಅಭಿಯಾನದಲ್ಲಿ ಮಾತನಾಡಿದರು.

ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಒಂದೊಂದು ಮತದಾನ ಬಹಳ ಮುಖ್ಯವಾಗಿವೆ. ಹೀಗಾಗಿ ಯಾವುದೇ ಆಮೀಷಗಳಿಗೆ ಒಳಗಾಗದೆ ನಿಮ್ಮ ಸಮಸ್ಯೆಗೆ ಸ್ಪಂದಿಸುವ ಮತ್ತು ಅಭಿವೃದ್ಧಿ ಮಾಡುವ ಹಾಗೂ ನಿಮಗೆ ಸೂಕ್ತ ಎನಿಸಿದ ಅಭ್ಯರ್ಥಿಗೆ ಧೈರ್ಯದಿಂದ ಮತದಾನ ಮಾಡುವ ಮೂಲಕ ಸುಭದ್ರವಾದ ಸರ್ಕಾರ ರಚಿಸಲು ಸಹಕಾರ ಮಾಡಬೇಕು ಎಂದು ಸೂಚಿಸಿದರು.

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಜನರಿಗೆ ನಿರಂತರ ಕೆಲಸ ಕೂಲಿ, ಆಧಾರಿತ ಕಾಮಗಾರಿ ಸೃಜಿಸಿ ಹೆಚ್ಚಿನ ಜನರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸುವುದು. ವಿಶೇಷ ಚೇತನರು, ಹಿರಿಯ ನಾಗರಿಕರು, ಮಂಗಳ ಲಿಂಗತ್ವ, ಅಲ್ಪ ಸಂಖ್ಯಾತ ವರ್ಗಗಳಿಗೆ ಆದ್ಯತೆ ಮೇರೆಗೆ ಉದ್ಯೋಗ ಚೀಟಿ ಮತ್ತು ಕೆಲಸ ಒದಗಿಸುವುದು. ಗ್ರಾಮೀಣ ಭಾಗದಲ್ಲಿ ವಲಸೆ ಹೋಗದಂತೆ ತಡೆಯುವುದೇ ಅಭಿಯಾನ ಮೂಲ ಉದ್ದೇಶವಾಗಿದೆ. ಹೀಗಾಗಿ ಪ್ರತಿಯೊಬ್ಬರು ಇದರ ಲಾಭ ಪಡೆದುಕೊಳ್ಳಬೇಕೆಂದರು.

ನಂತರ ಐಇಸಿ ಸಂಯೋಜಕ ವೀರಾರೆಡ್ಡಿ, ತಾಂತ್ರಿಕ ಸಂಹಾಯಕ ಮಾಣಿಕ ಮೋರೆ ಅಭಿಯಾನದ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿ ಹಾಗೂ 300ಕ್ಕೂ ಹೆಚ್ಚು ನರೇಗಾ ಕೂಲಿ ಕಾರ್ಮಿಕರು ಇದ್ದರು.