ಎಲ್ಲರಂತೆ ವಿಶೇಷಚೇತನರೂ ಅವಕಾಶಗಳಿಂದ ವಂಚನೆಗೆ ಒಳಗಾಗಬಾರದು. ಅವರಿಗೂ ಸಾಮಾನ್ಯರಂತೆ ಬದುಕುವ ಹಕ್ಕಿದೆ.

ಮರಿಯಮ್ಮನಹಳ್ಳಿ: ಪ್ರಸ್ತುತ ಸ್ಪರ್ಧಾತ್ಮಕ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕಂಪ್ಯೂಟರ್ ಶಿಕ್ಷಣ ಅನಿವಾರ್ಯವಾಗಿದೆ ಎಂದು ಜಿ.ನಾಗಲಾಪುರ ಗ್ರಾಪಂ ಸದಸ್ಯ ರವಿಕುಮಾರ್ ನಾಯ್ಕ್ ಹೇಳಿದರು.

ಸಮೀಪದ ಜಿ.ನಾಗಲಾಪುರ ಗ್ರಾಮದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ವಿಜಯನಗರ ಮತ್ತು ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯುಕೇಷನಲ್ ಟ್ರಸ್ಟ್ ಸಹಯೋಗದಲ್ಲಿ ಉಚಿತ ಕಂಪ್ಯೂಟರ್ ತರಬೇತಿ ಪಡೆದ ವಿಶೇಷಚೇತನ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಿ ಮಾತನಾಡಿದರು.ಎಲ್ಲರಂತೆ ವಿಶೇಷಚೇತನರೂ ಅವಕಾಶಗಳಿಂದ ವಂಚನೆಗೆ ಒಳಗಾಗಬಾರದು. ಅವರಿಗೂ ಸಾಮಾನ್ಯರಂತೆ ಬದುಕುವ ಹಕ್ಕಿದೆ. ನಾವು ಅವರಿಗೆ ಅನುಕಂಪ ನೀಡುವುದಕ್ಕಿಂತ ಅವಕಾಶಗಳನ್ನ ಕಲ್ಪಿಸಿ ಕೊಡಬೇಕು. ಈ ನಿಟ್ಟಿನಲ್ಲಿ ಜಿ.ನಾಗಲಾಪುರ ಗ್ರಾಮ ಪಂಚಾಯಿತಿಂದ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯುಕೇಷನಲ್ ಟ್ರಸ್ಟ್ ಮುಖಾಂತರ ಕಂಪ್ಯೂಟರ್ ತರಬೇತಿ ನೀಡಲಾಗಿದೆ. ಯುವಕ ಮತ್ತು ಯುವತಿಯರು ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗಿ ಕಂಪ್ಯೂಟರ್ ಜ್ಞಾನ ಇಲ್ಲದೇ ಉದ್ಯೋಗ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಅವರು ಹೇಳಿದರು. ನಾವು ಎಷ್ಟೇ ಶಿಕ್ಷಣ ಪಡೆದರೂ ಕಂಪ್ಯೂಟರ್ ಜ್ಞಾನ ಇಲ್ಲದಿದ್ದರೇ ಅನಕ್ಷರಸ್ಥರಿದ್ದ ಹಾಗೆ. ಉನ್ನತ ವಿದ್ಯಾಭ್ಯಾಸದ ಜತೆಗೆ ಕಂಪ್ಯೂಟರ್ ಜ್ಞಾನ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ. ಕಂಪ್ಯೂಟರ್ ಜ್ಞಾನ ಇದ್ದರೆ ಸರ್ಕಾರಿ ಕಚೇರಿಗಳಲ್ಲಿ, ಖಾಸಗಿ ಕಚೇರಿ, ಜೆರಾಕ್ಸ್ ಶಾಪ್ ಮತ್ತು ಮೊಬೈಲ್ ಶಾಪ್ ಗಳಲ್ಲಿ ಸ್ವಯಂ ಉದ್ಯೋಗ ಕಂಡಕೊಳ್ಳಬಹುದು. ಕಂಪ್ಯೂಟರ್ ಜ್ಞಾನ ಇದ್ದರೆ ಮಾತ್ರ ಉದ್ಯೋಗವಕಾಶಗಳು ಲಭ್ಯವಾಗುತ್ತವೆ. ಇಲ್ಲವಾದರೆ ಉದ್ಯೋಗದಿಂದ ನಾವು ವಂಚಿತರಾಗಬೇಕಾಗುತ್ತದೆ ಎಂದು ಹೇಳಿದರು.

ಕಂಪ್ಯೂಟರ್ ತರಬೇತಿ ಪಡೆದ ವಿದ್ಯಾರ್ಥಿ ಕೆ‌.ಎಂ. ವೀರೇಂದ್ರಕುಮಾರ ಮಾತನಾಡಿದರು. ಗ್ರಾಪಂ ಸದಸ್ಯ ಎಂ.ಅಂಜಿನಪ್ಪ, ಗ್ರಾಪಂ ಸಿಬ್ಬಂದಿ ಎಚ್.ಕೆ. ಪ್ರದೀಪಕುಮಾರ್, ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಜೆ.ನಾಗರಾಜ, ಸ್ಥಳೀಯ ಮುಖಂಡರಾದ ನಾರಾಯಣ ನಾಯ್ಕ್, ರತ್ನ ನಾಯ್ಕ್, ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯುಕೇಷನಲ್ ಟ್ರಸ್ಟ್ ಸಂಸ್ಥೆಯ ಅಧ್ಯಕ್ಷ ಭೀಮರಾಜ, ಸಿಬ್ಬಂದಿ ಭಾಗ್ಯ ಯು., ತರಬೇತಿ ಪಡೆದ ವಿದ್ಯಾರ್ಥಿಗಳು ಸಭೆಯಲ್ಲಿ ಭಾಗವಹಿಸಿದ್ದರು.