ಸಾರಾಂಶ
ನಗರದಲ್ಲಿ ವಿಜಯಂಗಮ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ, ಪರೀಕ್ಷಾ ಸಿದ್ಧತೆ ಕಾರ್ಯಾಗಾರ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಏಕಾಗ್ರತೆ, ಜ್ಞಾಪಕಶಕ್ತಿ ಹಾಗು ಆತ್ಮವಿಶ್ವಾಸದಿಂದ ಕೂಡಿದ್ದರೆ ಮಾತ್ರ ನಿಗದಿತ ಅಂಕಗಳಿಸುವ ಮೂಲಕ ತೇರ್ಗಡೆ ಹೊಂದಬಹುದು ಎಂದು ಎಐಟಿ ಕಾಲೇಜು ಪ್ರಾಂಶುಪಾಲ ಡಾ. ಸಿ.ಟಿ.ಜಯದೇವ್ ಹೇಳಿದರು. ಭಾನುವಾರ ನಗರದ ಎಐಟಿ ಕಾಲೇಜಿನ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ವಿಜಯಂಗಮ ಕಾರ್ಯಕ್ರಮ ಪ್ರಯುಕ್ತ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ ಗಳಿಗೆ ಮಾನಸಿಕ ಆರೋಗ್ಯ ಮತ್ತು ಪರೀಕ್ಷಾ ಸಿದ್ಧತೆ ಕಾರ್ಯಾಗಾರದ ಅಧ್ಯ ಕ್ಷತೆ ವಹಿಸಿ ಮಾತನಾಡಿದರು. ಅಂತಿಮ ಪರೀಕ್ಷೆಗಳಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ ಆತಂಕ, ಭಯ ಎನ್ನುವುದು ಸಹಜ. ಕಲಿತ ವಿದ್ಯೆ ಹಾಗೂ ತುಂಬು ಮನಸ್ಸಿನಿಂದ ಪರೀಕ್ಷೆ ಎದುರಿಸಿದರೆ ಪ್ರಶ್ನೆಗಳಿಗೆ ಸಲೀಸಾಗಿ ಉತ್ತರ ಬರೆಯಬಹುದು. ಹೀಗಾಗಿ ಪರೀಕ್ಷಾ ಕೊಠಡಿಗಳಲ್ಲಿ ಎಲ್ಲಾ ಭಯ ಬಿಟ್ಟು ಮುಕ್ತವಾಗಿರಬೇಕು ಎಂದು ತಿಳಿಸಿದರು.ಅಧಿಕ ಅಂಕ ಗಳಿಸಲು ಕೆಲವರು ದಿನವಿಡೀ ಓದುವ ಹವ್ಯಾಸ ರೂಢಿಸಿಕೊಳ್ಳುತ್ತಾರೆ. ಆದರೆ ಪರೀಕ್ಷೆ ವೇಳೆಯಲ್ಲಿ ಜ್ಞಾಪಕಶಕ್ತಿ ಕುಂದಲಿವೆ. ಹೀಗಾಗಿ ಕನಿಷ್ಠ ಐದಾರು ಗಂಟೆಗಳ ಕಾಲ ಪಠ್ಯವನ್ನು ಅಭ್ಯಾಸಿಸುವ ಮೂಲಕ ಮನದಟ್ಟು ಮಾಡಿಕೊಳ್ಳಬೇಕು. ಇದರಿಂದ ಪರೀಕ್ಷೆ ಎದುರಿಸುವ ಆತ್ಮ ವಿಶ್ವಾಸ ತಾನಾಗಿಯೇ ಬರಲಿದೆ ಎಂದು ಹೇಳಿದರು. ಪರೀಕ್ಷಾ ಸಮಯದಲ್ಲಿ ಓದಿನ ಜೊತೆಗೆ ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು. ಸಮಯಕ್ಕೆ ಸರಿಯಾಗಿ ನಿದ್ರೆ, ಊಟ ಸೇವಿಸಬೇಕು. ಮಲಗುವ ಮುನ್ನ ಅಭ್ಯಾಸ ಮಾಡಿದ ಪಠ್ಯವನ್ನು ನೆನಪಿಸಿಕೊಳ್ಳಬೇಕು. ಪ್ರಶ್ನೆಗಳು ಪುಸ್ತಕ ಹೊರತಾಗಿ ಇರುವ ಕಾರಣ ಅರ್ಥೈಸಿಕೊಂಡು ಸಕಾರಾತ್ಮಕ ಮನೋಭಾವದಿಂದ ಎದುರಿಸಿದರೆ ಉನ್ನತ ಸ್ಥಾನದಲ್ಲಿ ಹೊರ ಹೊಮ್ಮಲು ಸಾಧ್ಯ ಎಂದರು.ಇಟಾಲಿಕ್ ಕೈಬರಹ ತಜ್ಞ ದುಗ್ಗಪ್ಪಗೌಡ ಮಾತನಾಡಿ, ಅಂತಿಮ ಪರೀಕ್ಷೆಗಳಲ್ಲಿ ಮಕ್ಕಳು ಶಕ್ತಿವಂತರಾಗಬೇಕು. ಪರೀಕ್ಷೆಗೂ ಎರಡು ಮೂರು ತಿಂಗಳ ಮುನ್ನವೇ ಕಲಿಕೆಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು. ಶರೀರಿದ ನರ, ನಾಡಿ ಹಾಗೂ ಮಸ್ತಕದಲ್ಲಿ ಪರೀಕ್ಷೆ ಎದುರಿಸುವ ಸಾಮಥ್ರ್ಯ ಬೆಳೆಸಿಕೊಂಡರೆ ಸುಲಭವಾಗಿ ಮುಂದಿನ ತರಗತಿಗೆ ತೇರ್ಗಡೆಯಾಗಲು ಸಾಧ್ಯ ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಹಯೋಗ ಮತ್ತು ಪ್ರಚಾರ ವ್ಯವಸ್ಥಾಪಕಿ ಎಸ್.ಡಿ. ಚಂದ್ರಕುಮಾರಿ ಪರೀಕ್ಷಾ ಕೊಠಡಿಗಳಲ್ಲಿ ಪ್ರಶ್ನೆ ಪತ್ರಿಕೆ ಕೈಗೆ ದೊರೆತಾಗ ಶಾಂತಿಯಿಂದ ಆಲಿಸಬೇಕು. ಗಾಬರಿಗೊಳ್ಳದೆ ಪ್ರಶ್ನೆಗಳನ್ನು ಅರ್ಥೈಸಿಕೊಂಡು ಮುನ್ನಡೆದರೆ ಉತ್ತರಗಳು ಲಭಿಸಲು ಸಾಧ್ಯ. ಹೀಗಾಗಿ ವಿದ್ಯಾರ್ಥಿಗಳು ಹೆಚ್ಚು ಗಾಬರಿಯಾಗದೇ ಸೂಕ್ಷ್ಮವಾಗಿ ಎದುರಿಸಬೇಕು ಎಂದು ತಿಳಿಸಿದರು.ಆದಿಚುಂಚನಗಿರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜಿ.ಆರ್. ಚಂದ್ರಶೇಖರ್ ಮಾತನಾಡಿ, ಕಡೂರು, ಚಿಕ್ಕಮಗಳೂರು ಹಾಗೂ ಜಾವಳಿ ಭಾಗದ ಸಂಸ್ಥೆ ವಿದ್ಯಾರ್ಥಿಗಳನ್ನು ಇಂದು ಒಂದೆಡೆ ಸೇರಿಸಿ ಮಾನಸಿಕ ಆರೋಗ್ಯ ಮತ್ತು ಪರೀಕ್ಷಾ ಸಿದ್ಧತೆ ಕಾರ್ಯಾಗಾರ ಹಮ್ಮಿಕೊಂಡು ಆತ್ಮವಿಶ್ವಾಸ ಮೂಡಿಸುತ್ತಿದೆ ಎಂದರು. ಬಿಜಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲ ಜೆ.ಜಿ.ಸುರೇಂದ್ರ, ಪಾಲಿಟೆಕ್ನಿಕ್ ಪ್ರಾಂಶುಪಾಲ ಕೆ.ಎಂ.ಸಚ್ಚಿನ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
2ಸಿಕೆಎಂ1. ಚಿಕ್ಕಮಗಳೂರು ನಗರದ ಎಐಟಿ ಕಾಲೇಜಿನ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ವಿಜಯಂಗಮ ಕಾರ್ಯಕ್ರಮ ಪ್ರಯುಕ್ತ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಮತ್ತು ಪರೀಕ್ಷಾ ಸಿದ್ಧತೆ ಕಾರ್ಯಾಗಾರ ನಡೆಯಿತು..