ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ವಿದ್ಯೆಯು ಸಾಧಕರ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಭ್ಯಾಸ ಮಾಡಿ ಸಾಧಕರಾಗಿ ಹೊರಹೊಮ್ಮಬೇಕೆಂದು ನಿವೃತ್ತ ಪ್ರಾಂಶುಪಾಲ ಗುಬ್ಬಿ ಜಿ.ಬಿ.ಮಲ್ಲಪ್ಪ ತಿಳಿಸಿದರು.ಪಟ್ಟಣದ ಕೃಷ್ಣರಾಜ ಪದವಿ ಪೂರ್ವ ಕಾಲೇಜಿನ 2025-26ನೇ ಸಾಲಿನ ವಿದ್ಯಾರ್ಥಿ ಸಂಘದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ಕ್ಷೇತ್ರವೂ ಆಧುನಿಕತೆಯ ಸ್ಪರ್ಶಕ್ಕೆ ಒಳಗಾಗಿದೆ. ಸಾಂಪ್ರದಾಯಿಕ ಶಿಕ್ಷಣ ಪದ್ಧತಿ ನೀಡುತ್ತಿರುವ ಶಿಕ್ಷಣ ಸಂಸ್ಥೆಗಳೂ ಹೈಟೆಕ್ ಸ್ಪರ್ಶಕ್ಕೆ ಒಳಗಾಗಿವೆ. ಶಿಕ್ಷಣ ಕ್ಷೇತ್ರ ಖಾಸಗೀಕರಣವಾಗುತ್ತಿದ್ದು ಖಾಸಗಿ ಶಿಕ್ಷಣ ಸಂಸ್ಥೆಗಳೂ ಪರಸ್ಪರ ಗುಣಮಟ್ಟದ ಶಿಕ್ಷಣಕ್ಕೆ ಪರಸ್ಪರ ಪೈಪೋಟಿ ನಡೆಸುತ್ತಿವೆ. ಪೋಷಕರು ಮತ್ತು ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ನೀಡುವ ಶಾಲಾ ಕಾಲೇಜುಗಳತ್ತ ಆಕರ್ಷಿತರಾಗಿದ್ದು ಅದಕ್ಕೆ ತಕ್ಕಂತೆ ಶಿಕ್ಷಕರ ಭೋಧನಾ ಸಾಮರ್ಥ್ಯವೂ ವೃದ್ದಿಸಬೇಕಾಗಿದೆ ಎಂದರು.ವಿದ್ಯಾರ್ಥಿಗಳು ಕಲಿಕಾ ಶ್ರದ್ಧೆಯನ್ನು ರೂಢಿಸಿಕೊಳ್ಳಬೇಕು. ಮೊಬೈಲ್ ಫೋನ್, ಫೇಸ್‌ಬುಕ್, ವ್ಯಾಟ್ಸಾಪ್ ಸಂಸ್ಕೃತಿಯಿಂದ ಹೊರಬಂದು ತಮ್ಮ ಪರಿಪೂರ್ಣ ಸಮಯವನ್ನು ಕಲಿಕಾ ಸಾಮರ್ಥ್ಯದ ಹೆಚ್ಚಳಕ್ಕೆ ಮೀಸಲಿಡಬೇಕು. ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಪುಸ್ತಕಗಳನ್ನು ಓದಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಿ ಸರ್ವ ಶ್ರೇಷ್ಠ ಸಾಧನೆ ಮಾಡಬೇಕು ಎಂದರು.
ವಿದ್ಯಾರ್ಥಿಗಳ ಗಮನ ಏಕಾಗ್ರತೆಯ ಕಲಿಕೆಯತ್ತ ಇರಬೇಕು. ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ವಿದ್ಯಾರ್ಥಿಗಳು ಇಂದಿನಿಂದಲೇ ದಿನಕ್ಕೆ ಕನಿಷ್ಠ ಮೂರ್ನಾಲ್ಕು ಗಂಟೆ ಅಭ್ಯಾಸ ಮಾಡಿದರೆ ಸಾಕು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಲು ಅವಕಾಶವಿದೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ತಂದೆ ತಾಯಿಗಳು ಹಾಗೂ ಗುರು-ಹಿರಿಯರಿಗೆ ಕೀರ್ತಿಯನ್ನು ತರುವ ವಿದ್ಯಾರ್ಥಿಗಳಾಗಿ ಹೊರಹೊಮ್ಮುವ ಮೂಲಕ ಸಾಧನೆ ಮಾಡಬೇಕು ಎಂದರು.
ವಕೀಲ ಗಂಜಿಗೆರೆ ಲೋಕೇಶ್ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾನು ಕಷ್ಟಪಟ್ಟು ವ್ಯಾಸಂಗ ಮಾಡಿದ್ದರಿಂದ ಸಮಾಜದಲ್ಲಿ ಒಳ್ಳೆಯ ಹೆಸರು ಸಂಪಾದಿಸುವ ಜೊತೆಗೆ ವಕೀಲನಾಗಿ ನಾಲ್ಕಾರು ಜನರಿಗೆ ಸಹಾಯ ಮಾಡುವ ಶಕ್ತಿ ಬಂದಿದೆ. ನಾನು ಈ ಸಾಧನೆ ಮಾಡಲು ನನ್ನ ತಂದೆ ತಾಯಿಗಳು ಹಾಗೂ ನನಗೆ ಶಿಕ್ಷಣ ನೀಡಿದ ಗುರುಗಳು ಕಾರಣರಾಗಿದ್ದಾರೆ ಎಂದು ಹೇಳಿ ಕಲಿಸಿದ ಗುರುವೃಂದವನ್ನು ಸ್ಮರಿಸಿದರು.
ಬಂಡಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಮಯ್ಯ ಉಂಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶ್ರಾಂತ ದೈಹಿಕ ಶಿಕ್ಷಣಾಧಿಕಾರಿಗಳು ಹಾಗೂ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ತರಬೇತುದಾರರಾದ ಟಿ.ಸಿ.ಬಸವಯ್ಯ, ಪುರಸಭಾ ಮಾಜಿ ಸದಸ್ಯ ನಂದೀಶ್, ಹೊಸಹೊಳಲು ಬಸವೇಗೌಡ, ಕೃಷ್ಣರಾಜ ಪದವಿ ಪೂರ್ವ ಕಾಲೇಜಿನ ಆಡಳಿತ ಅಧಿಕಾರಿ ಎಸ್.ಬಿ.ಲೋಕೇಶ್, ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ಪ ಮಾತನಾಡಿದರು.ಹಿರಿಯ ಪತ್ರಕರ್ತ ಕೆ.ಆರ್.ನೀಲಕಂಠ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸರ್ವ ಶ್ರೇಷ್ಠ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.