ಸಾರಾಂಶ
ಹಾನಗಲ್ಲ ತಾಲೂಕಿನ ಬಾಳಂಬೀಡ ಗ್ರಾಮದ ಭಗವಾನ ೧೦೦೮ ಶಂಭವನಾಥ ಬಸದಿಯಲ್ಲಿ ದಿಗಂಬರ ಜೈನ ಸಮಾಜ ಆಯೋಜಿಸಿದ್ದ ೭ನೇ ವರ್ಷದ ದಶಲಕ್ಷಣ ಮಹಾಪರ್ವ ಜೈನ ಜಾಗೃತಿ ಸಭೆಯಲ್ಲಿ ಶಾಸಕ ಶ್ರೀನಿವಾಸ ಮಾನೆ ಭಾಗವಹಿಸಿದ್ದರು.
ಹಾನಗಲ್ಲ: ತಾಲೂಕಿನ ಜೈನ ಮಂದಿರಗಳ ಜೀರ್ಣೋದ್ಧಾರಕ್ಕೆ ಕಾಳಜಿ ವಹಿಸುವುದಾಗಿ ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ಬಾಳಂಬೀಡ ಗ್ರಾಮದ ಭಗವಾನ ೧೦೦೮ ಶಂಭವನಾಥ ಬಸದಿಯಲ್ಲಿ ದಿಗಂಬರ ಜೈನ ಸಮಾಜ ಆಯೋಜಿಸಿದ್ದ ೭ನೇ ವರ್ಷದ ದಶಲಕ್ಷಣ ಮಹಾಪರ್ವ ಜೈನ ಜಾಗೃತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜೈನ ಮುನಿಗಳು ತಮ್ಮ ಇಡೀ ಜೀವನ ಸಮಾಜದ ಒಳಿತಿಗೆ ಅರ್ಪಿಸಿದವರು. ಕಠಿಣ ವ್ರತಾಚರಣೆಯ ಮೂಲಕ ಸಂಪ್ರದಾಯ ಉಳಿಸುವಲ್ಲಿ ನಿರತ ಮುನಿಗಳ ಜೀವನ ಸಂದೇಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕಿದೆ. ಉಪವಾಸ, ತಪ, ಧ್ಯಾನ, ಸತ್ ಚಿಂತನೆಗಳ ಮೂಲಕ ದಶಲಕ್ಷಣ ಮಹಾಪರ್ವ ಭಕ್ತಿ, ಶ್ರದ್ಧೆಗಳಿಂದ ಆಚರಿಸಲ್ಪಡುತ್ತಿದೆ. ಮನಃಶುದ್ಧಿ ಹಾಗೂ ರಾಗ, ದ್ವೇಷಗಳನ್ನು ದೂರ ಮಾಡುವುದು ಇದರ ಮೂಲ ಉದ್ದೇಶವಾಗಿದೆ ಎಂದು ಹೇಳಿದ ಅವರು, ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ, ಉತ್ತಮ ಗೌರವ ಲಭಿಸಲಿದೆ. ಈಗಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಭವಿಷ್ಯ ನಿರ್ಮಿಸುವ ಅಗತ್ಯವಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ಹೋತನಹಳ್ಳಿಯ ಸಿದ್ಧಾರೂಢ ಮಠದ ಸದ್ಗುರು ಶಂಕರಾನಂದ ಸ್ವಾಮೀಜಿ ಮಾತನಾಡಿ, ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠ. ಪರ್ವಗಳ ರಾಜ ದಶಲಕ್ಷಣ ಪರ್ವದ ಹತ್ತು ಲಕ್ಷಣಗಳನ್ನು ಯಾವ ವ್ಯಕ್ತಿ ಅನುಸರಿಸುತ್ತಾನೋ ಅವನು ಮಾತ್ರ ಪರಿಪೂರ್ಣನಾಗುತ್ತಾನೆ. ಯಾವುದು ಕೂಡ ಭಗವಂತನ ಇಚ್ಛೆಯಿಲ್ಲದೇ ನಡೆಯದು. ಮನಸ್ಸಿನಲ್ಲಿ ಒಳ್ಳೆಯ ಭಾವನೆ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದರು.
ಜೈನ ಸಮಾಜದ ಅಧ್ಯಕ್ಷ ಶಂಕ್ರಪ್ಪ ದುಂಡಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ದಿಗಂಬರ ಜೈನ ಸಮಾಜದ ಅಧ್ಯಕ್ಷ ಮಂಜಣ್ಣ ತಡಸದ, ಹಾನಗಲ್ಲ ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ, ಕಿರಣ ಹೂಗಾರ, ಭರತರಾಜ ಹಜಾರಿ, ವಿಜಯ ಸಾತಗೊಂಡ, ಸುನೀಲ ಆರೆಗೊಪ್ಪ, ಶಿವರಾಯಪ್ಪ ಅಪ್ಪಣ್ಣನವರ, ಸುಧೀರ ಛಬ್ಬಿ, ಶ್ರೀಮಂದಿರ ವಡವಿ, ಸುಧೀರ ದೊಡ್ಡಚಿಕ್ಕಣ್ಣನವರ, ವೀರೇಂದ್ರ ಬಳಿಗಾರ, ಚಂದ್ರಪ್ಪ ಮುಗಳಿ, ಮಂಜುನಾಥ ಕಡೂರ, ನಿಂಗಪ್ಪ ದುಂಡಣ್ಣನವರ, ಸಂತೋಷ ದುಂಡಣ್ಣನವರ ಈ ಸಂದರ್ಭದಲ್ಲಿದ್ದರು.