ಸೋಲಿನ ಆತಂಕದಲ್ಲಿ ಕಾಂಗ್ರೆಸ್ಸಿಗರಿಂದ ಎಚ್ಡಿಕೆ ಬಗ್ಗೆ ಲಘು ಮಾತು: ಶಾಸಕ ಎಚ್ .ಟಿ.ಮಂಜು

| Published : Mar 30 2024, 12:45 AM IST

ಸೋಲಿನ ಆತಂಕದಲ್ಲಿ ಕಾಂಗ್ರೆಸ್ಸಿಗರಿಂದ ಎಚ್ಡಿಕೆ ಬಗ್ಗೆ ಲಘು ಮಾತು: ಶಾಸಕ ಎಚ್ .ಟಿ.ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರಾಜ್ಯದ ನಾಯಕರು. ಯಾವುದೇ ಭಾಗದಲ್ಲಾದರೂ ಸ್ಪರ್ಧಿಸಬಹುದು. ಎಚ್ಡಿಕೆ ಮಂಡ್ಯದಲ್ಲಿ ಸ್ಪರ್ಧಿಸುವುದನ್ನು ಪ್ರಶ್ನಿಸುವ ಕಾಂಗ್ರೆಸ್ಸಿಗರೇ ಸಿಎಂ ಸಿದ್ದರಾಮಯ್ಯ ಅವರು ಈ ಹಿಂದೆ ಬಾದಾಮಿಯಲ್ಲಿ, ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಸ್ವಕ್ಷೇತ್ರ ಅಮೇಥಿ ಬಿಟ್ಟು ಕೇರಳದ ವೈನಾಡಿಗೆ ವಲಸೆ ಹೋಗಿ ಸ್ಪರ್ಧಿಸಿದ್ದು ಏಕೆ ಎಂದು ಪ್ರಶ್ನೆ ಮಾಡಿದರು.

ಕನ್ನಡಪ್ರಭ ವಾರ್ತೆ ಕೆ.ಆರ್. ಪೇಟೆ

ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೆಸರು ಅಂತಿಮವಾದ ನಂತರ ಸೋಲಿನ ಆತಂಕದಲ್ಲಿ ಸಚಿವರು, ಶಾಸಕರು ಎಚ್ಡಿಕೆ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ ಎಂದು ಶಾಸಕ ಎಚ್.ಟಿ.ಮಂಜು ಕಿಡಿಕಾರಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶಾಸಕ ಎಚ್.ಟಿ.ಮಂಜು ನೇತೃತ್ವದಲ್ಲಿ ನಡೆದ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು, ಮುಖಂಡರ ಸಮ್ಮಿಲನ ಸಭೆಯಲ್ಲಿ ಮಾತನಾಡಿ, ಮಂಡ್ಯ ಜಿಲ್ಲೆಗೆ ಕುಮಾರಣ್ಣ ಹೊರಗಿನವರಲ್ಲ. ಕುಮಾರಣ್ಣನ ಸ್ಪರ್ಧೆಯಿಂದ ಕಾಂಗ್ರೆಸ್ಸಿಗರು ಈಗಾಗಲೇ ಸೋಲೋಪ್ಪಿಕೊಂಡಿರುವುದು ಅವರ ಮಾತುಗಳಿಂದ ಗೊತ್ತಾಗಿದೆ ಎಂದು ಟೀಕಿಸಿದರು.

ಕುಮಾರಸ್ವಾಮಿ ರಾಜ್ಯದ ನಾಯಕರು. ಯಾವುದೇ ಭಾಗದಲ್ಲಾದರೂ ಸ್ಪರ್ಧಿಸಬಹುದು. ಎಚ್ಡಿಕೆ ಮಂಡ್ಯದಲ್ಲಿ ಸ್ಪರ್ಧಿಸುವುದನ್ನು ಪ್ರಶ್ನಿಸುವ ಕಾಂಗ್ರೆಸ್ಸಿಗರೇ ಸಿಎಂ ಸಿದ್ದರಾಮಯ್ಯ ಅವರು ಈ ಹಿಂದೆ ಬಾದಾಮಿಯಲ್ಲಿ, ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಸ್ವಕ್ಷೇತ್ರ ಅಮೇಥಿ ಬಿಟ್ಟು ಕೇರಳದ ವೈನಾಡಿಗೆ ವಲಸೆ ಹೋಗಿ ಸ್ಪರ್ಧಿಸಿದ್ದು ಏಕೆ ಎಂದು ಪ್ರಶ್ನೆ ಮಾಡಿದರು.

ದೇವೇಗೌಡರ ಕುಟುಂಬದ ರಾಜಕಾರಣದ ಬಗ್ಗೆ ಮಾತನಾಡುವ ನೀವು ನಿಮ್ಮ ಪಕ್ಷದ ಕುಟುಂಬ ರಾಜಕಾರಣವನ್ನು ತಿರುಗಿ ನೋಡಿ. ರಾಜ್ಯದ ಹಲವೆಡೆ ತಮ್ಮ ನಾಯಕ ಮಕ್ಕಳು ಮತ್ತು ಅಳಿಯಂದಿರಿಗೆ ಟಿಕೆಟ್ ನೀಡಿದ್ದಾರೆ. ಡಿಸಿಎಂ ಸಹೋದರ ಸಂಸದರಾಗಿದ್ದಾರೆ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭಾ ಸದಸ್ಯರಾಗಿದ್ದು, ಅವರ ಪುತ್ರ ಪ್ರಿಯಾಂಕ ಖರ್ಗೆ ರಾಜ್ಯದ ಸಚಿವರಾಗಿದ್ದಾರೆ. ಈಗ ಅಳಿಯನಿಗೆ ಲೋಕಸಭಾ ಟಿಕೆಟ್ ಕೊಡಿಸಿದ್ದಾರೆ. ದೇವೇಗೌಡರ ಕುಟುಂಬ ಜನರ ಪ್ರೀತಿ ಮೇರೆಗೆ ರಾಜಕಾರಣ ಮಾಡುತ್ತಿದೆಯೇ ಹೊರತು ಜನಾಭಿಪ್ರಾಯಕ್ಕೆ ವಿರುದ್ಧವಾಗಿ ಅಲ್ಲ ಎಂದು ತಿರುಗೇಟು ನೀಡಿದರು.

ಕೇಂದ್ರದ ನಾಯಕರ ಅಣತಿಯಂತೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ರಾಜ್ಯದ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಉದ್ದೇಶದಿಂದ ಮೈತ್ರಿ ಮಾಡಿಕೊಂಡಿವೆ. ಕುಮಾರಣ್ಣ ಕೇಂದ್ರದಲ್ಲಿ ಮಂತ್ರಿಯಾಗುವುದು ಖಚಿತ. ಬಿಜೆಪಿ- ಜೆಡಿಎಸ್ ಕಾರ್ಯಕರ್ತರು ವಿಶ್ವಾಸಕ್ಕೆ ತೆಗೆದುಕೊಂಡು, ಕ್ಷೇತ್ರದ ಅಭಿವೃದ್ಧಿಗಾಗಿ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು.

ಇದಕ್ಕೂ ಮುನ್ನ ಬಿಜೆಪಿ ಕಚೇರಿಗೆ ಶಾಸಕ ಹೆಚ್.ಟಿ.ಮಂಜು ಅವರನ್ನು ಬರಮಾಡಿಕೊಂಡ ಪಕ್ಷ ಕಾರ್ಯಕರ್ತರು ಪರಸ್ಪರ ಶಾಲು ಮತ್ತು ಬಾವುಟಗಳನ್ನು ಬದಲಾಯಿಸಿಕೊಂಡು ಮೈತ್ರಿ ಸಂದೇಶದ ಬದ್ದತೆ ಸಾರಿದರು.

ಇಂದು ಪಟ್ಟಣದಲ್ಲಿ ನಿಖಿಲ್ ಸಭೆ:

ಎಚ್ಡಿಕೆ ನಾಮಪತ್ರ ಸಲ್ಲಿಕೆ ವೇಳೆ ಎರಡು ಪಕ್ಷದ ಅಭಿಮಾನಿಗಳು ಮತ್ತು ಕಾರ್ಯಕರ್ತರ, ಮುಖಂಡರನ್ನು ಆಹ್ವಾನಿಸಲು ಪೂರ್ವಭಾವಿಯಾಗಿ ಪಟ್ಟಣದಲ್ಲಿ ಮಾ.30 ರಂದು ರಾಜ್ಯ ಯುವ ಜನತಾದಳದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗಮಿಸುತ್ತಿದ್ದಾರೆ. ಸಭೆಗೆ ತಾಲೂಕಿನ ಎರಡು ಪಕ್ಷಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗರಾಜು ಮಾತನಾಡಿ, ಪಕ್ಷ ಹೈಕಮಾಂಡ್ ಅಣತಿಯಂತೆ ಮೈತ್ರಿ ಅಭ್ಯರ್ಥಿಯ ಪರ ಕೆಲಸ ಮಾಡಲು ಸಿದ್ಧರಿದ್ದು, ಶನಿವಾರದಿಂದಲೇ ತಾಲೂಕಿನಾದ್ಯಂತ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡಲಾಗುವುದು ಎಂದರು.

ಈ ವೇಳೆ ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್. ಜಾನಕೀರಾಂ, ತಾಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಶೀಳನೆರೆ ಭರತ್, ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಪರಮೇಶ್, ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.