ಸಾರಾಂಶ
ಚಂಡಿಕಾ ಹವನ ಮಾಡಿದ ಮೂಲ್ಕಿ ವೆಂಕರಮಣ ದೇವಸ್ಥಾನದ ಅರ್ಚಕ ವೆ. ಮೂ. ರಮಾನಾಥ ಭಟ್ ರನ್ನು ಹಾಗೂ ಕೊಡೆತ್ತೂರು ಶ್ರೀನಿವಾಸ ಭಜನಾ ಮಂಡಳಿ ಸಂಘಟಕ ಕಿಶೋರ್ ಶೆಟ್ಟಿ ದಂಪತಿಗಳನ್ನು ಗೌರವಿಸಲಾಯಿತು.
ಕನ್ನಡಪ್ರಭವಾರ್ತೆ ಮೂಲ್ಕಿ
ಕಿನ್ನಿಗೋಳಿ ಸಮೀಪದ ಉಳೆಪಾಡಿ ಶ್ರೀ ದುರ್ಗಾಪರಮೇಶ್ವರಿ ಮಹಮ್ಮಾಯಿ ಕ್ಷೇತ್ರದಲ್ಲಿ ನಡೆಯುತ್ತಿರುವ ದುರ್ಗಾರಾಧನೆಯು ಕ್ಷಿಪ್ರ ಫಲದಾಯಕ, ಜನ್ಮಜನ್ಮಾಂತರದ ಪಾಪ ಶೇಷಗಳಿಂದ ಮುಕ್ತಿಕಾಣಲು ಚಂಡಿಕಾಯಾಗ ಶ್ರೇಷ್ಠ ಮಾತೃಕಾರಾಧನೆ ಎಂದು ಮೂಲ್ಕಿ ಸೀಮೆ ಅರಸರಾದ ದುಗ್ಗಣ ಸಾಮಂತರು ಹೇಳಿದರು.ಉಳೆಪಾಡಿ ಶ್ರೀ ದುರ್ಗಾಪರಮೇಶ್ವರಿ ಮಹಮ್ಮಾಯಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಒಂಬತ್ತು ದಿನಗಳ ಕಾಲ ನಿರಂತರವಾಗಿ ನೆರವೇರಿದ ಶ್ರೀ ಚಂಡಿಕಾಯಾಗದ ಸಮಾಪನೋತ್ಸವ ಹಾಗೂ ಸಾಂಪ್ರದಾಯಿಕ ಕುಣಿತ ಭಜನಾ ಸರ್ಧೆಯ ಸಮಾರೋಪ ಬಹುಮಾನ ವಿತರಣೆಯ ಸಂಧರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ, ಕಳೆದ ಹಲವಾರು ವರ್ಷದಿಂದ ಉಳೆಪಾಡಿ ಕ್ಷೇತ್ರದಲ್ಲಿ 300 ಕ್ಕೂ ಮಿಕ್ಕಿ ಸಾಮೂಹಿಕ ಮದುವೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಿರಂತರ ನಡೆಯಿತ್ತಿದೆ ಎಂದು ಹೇಳಿದರು.ಮೂಲ್ಕಿ ವೆಂಕಟರಮಣ ದೇವಸ್ಥಾನದ ಅರ್ಚಕ ವೇ. ಮೂ. ರಮಾನಾಥ ಭಟ್ , ಮೂಲ್ಕಿ ಠಾಣೆಯ ಆರಕ್ಷಕ ಉಪನಿರೀಕ್ಷಕಿ ಅನಿತಾ ಬಿ. ಎಚ್, ಕಿನ್ನಿಗೋಳಿಯ ಯುಗಪುರುಷದ ಭುವನಾಭಿರಾಮ ಉಡುಪ, ಮೂರುಕಾವೇರಿ ಸರ್ವ ಧರ್ಮ ಸಂಗಮದ ನಿರ್ದೇಶಕ ಹೇಮಾಚಾರ್ಯ, ಮೆಸ್ಕಾಂ ಸುಧಾಕರ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಚಂಡಿಕಾ ಹವನ ಮಾಡಿದ ಮೂಲ್ಕಿ ವೆಂಕರಮಣ ದೇವಸ್ಥಾನದ ಅರ್ಚಕ ವೆ. ಮೂ. ರಮಾನಾಥ ಭಟ್ ರನ್ನು ಹಾಗೂ ಕೊಡೆತ್ತೂರು ಶ್ರೀನಿವಾಸ ಭಜನಾ ಮಂಡಳಿ ಸಂಘಟಕ ಕಿಶೋರ್ ಶೆಟ್ಟಿ ದಂಪತಿಗಳನ್ನು ಗೌರವಿಸಲಾಯಿತು. ದೇವಸ್ಥಾನದ ಧರ್ಮದರ್ಶಿ ಮೋಹನದಾಸ್ ಸುರತ್ಕಲ್ ಸ್ವಾಗತಿಸಿದರು. ಭಜನಾ ಸ್ಪರ್ಧೆಯ ವಿಜೇತರು: ಪ್ರಥಮ - ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂಡಳಿ ಸಸಿಹಿತ್ಲು , ದ್ವಿತೀಯ - ಶ್ರೀ ಜಾರಂದಾಯ ಬಂಟ ಭಜನಾ ಮಂಡಳಿ ಏಳಿಂಜೆ, ತೃತೀಯ - ಶ್ರೀ ಜಾರಾಂದಾಯ ಮಹಿಳಾ ಭಜನಾ ಮಂಡಳಿ ಪಟ್ಟೆ, ಉತ್ತಮ ಹಾರ್ಮೋನಿಯಂ ಪಟ್ಟೆ ಭಜನಾ ಮಂಡಳಿ, ಉತ್ತಮ ತಬಲಾ ಹಾಗೂ ಹಾಡುಗಾರ ಬಹುಮಾನ ಸಸಿಹಿತ್ಲು ತಂಡ ಪಡೆದುಕೊಂಡಿತು.