ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯ ಸರ್ಕಾರ ನಿಮ್ಮ ಪರವಾಗಿ ನಿಂತುಕೊಂಡಿದೆ, ಮುಂದೆಯೂ ನಿಂತುಕೊಳ್ಳಲಿದೆ ಎಂದು ಸುನ್ನಿ ಯುವಜನ ಸಂಘದ ಮಹಾಸಮ್ಮೇಳನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.ನಗರದ ಹೊರವಲಯದ ಅಡ್ಯಾರ್ ಕಣ್ಣೂರಿನ ಮೈದಾನದಲ್ಲಿ ಬುಧವಾರ ನಡೆದ ಸುನ್ನಿ ಯುವಜನ ಸಂಘಟನೆ (ಎಸ್.ವೈ.ಎಸ್)ಯ 30ನೇ ವರ್ಷದ ಮಹಾಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ನಮ್ಮದು ಎಲ್ಲ ಜಾತಿ, ಧರ್ಮ, ವರ್ಗಗಳ ರಕ್ಷಣೆಗಾಗಿ ಇರುವ ಸರ್ಕಾರ. ಸಮಾಜದಲ್ಲಿ ಸೋದರತ್ವದ ಭಾವನೆ ಮುಂದುವರಿಯಬೇಕಾಗಿದೆ. ಕಳೆದ 10-12 ವರ್ಷಗಳಿಂದ ದೇಶವಾಳುತ್ತಿರುವ ಸರ್ಕಾರ ಜನರ ಭಾವನೆ ಮೇಲೆ ರಾಜಕಾರಣ ಮಾಡಿದರೆ, ನಾವು ಜನರ ಹೊಟ್ಟೆ ತುಂಬಿಸುವ ಕೆಲಸ ಮಾಡಲಿದ್ದೇವೆ. ಮಾನವೀಯತೆ ಎತ್ತಿ ತೋರಿಸವ ಕೆಲಸ ಮಾಡಿಕೊಂಡು ಬಂದಿದ್ದೇವೆ, ಮುಂದೆಯೂ ಮಾಡಲಿದ್ದೇವೆ. ಈ ದೇಶ ಸರ್ವ ಜನರ ಆಸ್ತಿ. ನಮ್ಮ ನಮ್ಮ ಧರ್ಮ, ಆಚಾರ ವಿಚಾರದಲ್ಲಿ ಯಾರೂ ಬಾಯಿ ಹಾಕಬಾರದು ಎಂದರು.ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬಹುಮತದ ಅಧಿಕಾರ ನೀಡಿದ್ದೀರಿ. ಅದರಂತೆ ಎಲ್ಲ ವರ್ಗದ ಜನರಿಗೆ ನ್ಯಾಯ ನೀಡುವ ಕೆಲಸವನ್ನು ಸರ್ಕಾರ ಮಾಡಿಕೊಂಡು ಬಂದಿದೆ ಎಂದ ಡಿ.ಕೆ. ಶಿವಕುಮಾರ್, ರಾಜ್ಯದಲ್ಲೀಗ ನಿಮ್ಮ ಪರವಾಗಿ ನಿಂತುಕೊಂಡು ನಿಮಗೆ ರಕ್ಷಣೆ ನೀಡುವ ಸರ್ಕಾರ ಇದೆ. ಹಿಂದೊಮ್ಮೆ ನಾನು ‘ಮುಸ್ಲಿಂ ಬಾಂಧವರು ಸೋದರರು’ ಎಂದಿದ್ದಕ್ಕೆ ಟೀಕೆ ಮಾಡಿದರು, ಅದಕ್ಕೆಲ್ಲ ಕನಕಪುರ ಬಂಡೆ ಹೆದರಲ್ಲ ಎಂದು ಹೇಳಿದರು.
ಚುನಾವಣೆ ಇದೆ, ದೇಶ ರಕ್ಷಿಸಿ: ಅತಿ ಶೀಘ್ರದಲ್ಲಿ ಚುನಾವಣೆ ಬರಲಿದೆ. ಇಲ್ಲಿ ಅದರ ಬಗ್ಗೆ ಮಾತನಾಡಲ್ಲ. ಆದರೆ, ದೇಶ ರಕ್ಷಣೆಯ ಕೆಲಸವನ್ನು ಎಲ್ಲರೂ ಮಾಡಬೇಕಿದೆ. ನಿಮ್ಮ ಆಶೀರ್ವಾದ ನಮ್ಮ ಸರ್ಕಾರದ ಮೇಲೆ ಇರಲಿ, ನಾವು ನಿಮ್ಮೊಂದಿಗೆ ಇದ್ದೇವೆ ಎಂದರು.ಅನುದಾನ ಭರವಸೆ: ಅಲ್ಪಸಂಖ್ಯಾತರಿಗೆ ಅನುದಾನ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಲಿದ್ದೇನೆ ಎಂದು ಈ ಸಂದರ್ಭ ಡಿಕೆಶಿ ಭರವಸೆ ನೀಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಮಾತನಾಡಿ, ಅಲ್ಪಸಂಖ್ಯಾತರ ರಕ್ಷಣೆ ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.ಸುಲ್ತಾನ್ ಉಲಮಾ ಇಂಡಿಯನ್ ಗ್ರಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ (ಎ.ಪಿ.ಉಸ್ತಾದ್), ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್, ಹಜ್ ಸಚಿವ ರಹೀಂ ಖಾನ್, ಎಂಎಲ್ಸಿ ಬಿಎಂ ಫಾರೂಕ್, ಕೇರಳ ಶಾಸಕ ರೋಜಿ ಜಾನ್, ಪ್ರಮುಖರಾದ ಇನಾಯತ್ ಅಲಿ, ಐವನ್ ಡಿಸೋಜ, ಮಿಥುನ್ ರೈ, ರಕ್ಷಿತ್ ಶಿವರಾಮ್, ಯೆನೆಪೋಯ ವಿವಿ ಚಾನ್ಸಲರ್ ಅಬ್ದುಲ್ಲಾ ಕುಂಞ, ಜಿಎ ಬಾವಾ, ಮಾಜಿ ಶಾಸಕ ಮೊಯ್ದೀನ್ ಬಾವಾ, ಕಣಚೂರು ಮೋನು, ಮಂಜುನಾಥ ಭಂಡಾರಿ, ಯು.ಟಿ. ಇಫ್ತೀಕರ್ ಅಲಿ, ಜಿಲ್ಲಾ ಖಾಜಿ ಮಾಣಿ ಉಸ್ತಾದ್, ಕೆ.ಎಸ್. ಮೊಹಮ್ಮದ್ ಮಸೂದ್, ರಶೀದ್ ಹಾಜಿ, ಶಾಹುಲ್ ಹಮೀದ್, ಎಸ್‌ವೈಎಸ್ ಸಂಘಟನೆಯ ರಾಜ್ಯಾಧ್ಯಕ್ಷರು, ಪದಾಧಿಕಾರಿಗಳು ಇದ್ದರು.
ಹಿಜಾಬ್ ವಸ್ತ್ರ ಸಂಹಿತೆ ವಾಪಸ್‌ಗೆ ಸರ್ಕಾರಕ್ಕೆ ಆಗ್ರಹ: ತರಗತಿಯಲ್ಲಿ ಮುಸ್ಲಿಂ ಹೆಣ್ಮಕ್ಕಳಿಗೆ ಕಳೆದ ಬಿಜೆಪಿ ಸರ್ಕಾರ ಮಾಡಿರುವ ವಸ್ತ್ರ ಸಂಹಿತೆ ಆದೇಶವನ್ನು ವಾಪಸ್ ಪಡೆಯುವುದು, ಮಂಗಳೂರು ಗೋಲಿಬಾರ್‌ನಲ್ಲಿ ಮೃತರಾದ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡಬೇಕು ಮಾತ್ರವಲ್ಲದೆ, ಹಲವರ ಮೇಲೆ ಹಾಕಿರುವ ಸುಳ್ಳು ಕೇಸ್‌ಗಳನ್ನು ವಾಪಸ್ ಪಡೆಯಬೇಕು. ಬೆಂಗಳೂರಿನ ಡಿಜೆ ಹಳ್ಳಿ ಕೆಜೆ ಹಳ್ಳಿ ಗಲಭೆಯಲ್ಲಿ ಎಲ್ಲ ಜಾತಿಗಳ ಅಮಾಯಕರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸುವ ಮನವಿಯನ್ನು ಸಮ್ಮೇಳನದಲ್ಲಿ ರಾಜ್ಯ ಸರ್ಕಾರದ ಮುಂದಿಡಲಾಯಿತು. ಮನವಿ ಪತ್ರವನ್ನು ಎ.ಪಿ. ಉಸ್ತಾದರು ಡಿಕೆ ಶಿವಕುಮಾರ್ ಅವರಿಗೆ ನೀಡಿದರು.ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಸುಳ್ಳು: ಡಿಕೆಶಿ
ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿಗೆ ಪುನಃ ಕರೆತರಲು ತೆರೆಮರೆಯ ಕಸರತ್ತು ನಡೆಯುತ್ತಿರುವ ವಿಚಾರವನ್ನು ತಳ್ಳಿಹಾಕಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಆಗೋದು ಸುಳ್ಳು ಎಂದಿದ್ದಾರೆ.ಮಂಗಳೂರಿನಲ್ಲಿ ಬುಧವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಬಿಜೆಪಿಯಲ್ಲೇ ಶೇಕ್ ಆಗ್ತಿದೆ. ಅವರಲ್ಲೇ ಆಂತರಿಕ ಸಮಸ್ಯೆಗಳು ಬಹಳಷ್ಟಿವೆ. ಶೆಟ್ಟರ್ ಅವರನ್ನು ಸುಮ್ಮನೆ ಕರೆಯುತ್ತಿದ್ದಾರೆ. ಕೆಲವರು ಹೋಗಿ ಕರೆಯೋದು ಮಾಡುತ್ತಿದ್ದಾರೆ. ಆದರೆ ಜಗದೀಶ್ ಶೆಟ್ಟರ್ ಏನು ದಡ್ಡರಾ ಎಂದು ಪ್ರಶ್ನಿಸಿದರು.
ಶೆಟ್ಟರ್ ಅವರಿಗೆ ಆಗಿದ್ದ ಅವಮಾನ, ನೋವು ಎಲ್ಲ ಯೋಚನೆ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ಬಂದು ನಮಗೆ ದೊಡ್ಡ ಸಹಾಯ ಕೂಡ ಮಾಡಿದ್ದಾರೆ. ಚುನಾವಣೆಯಲ್ಲಿ ಶೆಟ್ಟರ್ ಸೋತಿರಬಹುದು, ತಕ್ಷಣ ಕಾಂಗ್ರೆಸ್ ಪಕ್ಷ ಗುರುತಿಸಿ ವಿಧಾನ ಪರಿಷತ್ ಗೆ ಅವಕಾಶ ಮಾಡಿ ಕೊಟ್ಟಿದೆ ಎಂದರು.ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರ ಮೇಲೆ ಅನುಮಾನ ಬರಬೇಕು ಎಂಬ ದೊಡ್ಡ ಸಂಚನ್ನು ಬಿಜೆಪಿಯವರು ಮಾಡಿದ್ದಾರೆ. ಆದರೆ ಬಿಜೆಪಿಯ ಸಂಚು ಫಲಿಸೋದಿಲ್ಲ ಎಂದು ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ ಉಪವಾಸದ ಬಗ್ಗೆ ವೀರಪ್ಪ ಮೊಯಿಲಿ ಅನುಮಾನ ವಿಚಾರದ ಕುರಿತು ಪ್ರತಿಕ್ರಿಯಿಸಿ, ಅದರ ಬಗ್ಗೆ ನನಗೆ ಗೊತ್ತಿಲ್ಲ, ಅವರು ಹಿರಿಯರಿದ್ದಾರೆ,ಅವರ ಹತ್ತಿರಾನೆ ಮಾತನಾಡಬೇಕು ಎಂದರು.ತರಗತಿಯಲ್ಲಿ ಹಿಜಾಬ್ ನಿಷೇಧ ವಾಪಸ್ ಬಗ್ಗೆ ಮುಸ್ಲಿಂ ಮುಖಂಡರ ಹಕ್ಕೊತ್ತಾಯ ವಿಚಾರ ನ್ಯಾಯಲಯದಲ್ಲಿದೆ, ಅದರ ಬಗ್ಗೆ ಮಾತನಾಡಲ್ಲ. ಒಟ್ಟಾರೆ ನಾವು ಸಂವಿಧಾನ ಬದ್ಧವಾಗಿ ಎಲ್ಲ ಧರ್ಮಗಳನ್ನು ರಕ್ಷಣೆ ಮಾಡಬೇಕು. ಕಾನೂನಿನ ಚೌಕಟ್ಟಿನಲ್ಲಿ ಎಲ್ಲ ಧರ್ಮವನ್ನೂ ರಕ್ಷಣೆ ಮಾಡುತ್ತೇವೆ ಎಂದು ಹೇಳಿದರು.
ಮುಂದಿನ ತಿಂಗಳು ರಾಜ್ಯ ಮಟ್ಟದ ಕಾಂಗ್ರೆಸ್ ಸಮಾವೇಶ ಮಂಗಳೂರಿನಲ್ಲಿ ಆಯೋಜಿಸಲಾಗುವುದು. ಈ ಕುರಿತು ಪೂರ್ವಭಾವಿ ಸಭೆ ಮತ್ತು ತಯಾರಿಗಾಗಿ ಮಂಗಳೂರಿಗೆ ಬಂದಿದ್ದೇನೆ. ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಲಿದ್ದಾರೆ. ದೆಹಲಿಯ ನಾಯಕರೂ ಆಗಮಿಸಲಿದ್ದಾರೆ. ದಕ್ಷಿಣ ಕನ್ನಡ ಉಡುಪಿಯ ಕಾಂಗ್ರೆಸ್ ಸಮಿತಿಯವರು ನಾವೇ ಕಾರ್ಯಕ್ರಮ ಮಾಡುತ್ತೇವೆ ಎಂದು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಾಳೆ ಸಮಾವೇಶದ ದಿನಾಂಕ ನಿಗದಿಪಡಿಸುತ್ತೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.