ಸಾರಾಂಶ
ಖಾಸಗಿ ಸಂಸ್ಥೆಗೆ ಜಮೀನು ಮಂಜೂರು ಮಾಡಲು ಮೈಸೂರು ನಗರದ ಸುಮಾರು 10 ಕಿ.ಮೀ ವ್ಯಾಪ್ತಿಯೊಳಗೆ ಮಂಜೂರು ಮಾಡಲು ಅವಕಾಶವಿಲ್ಲ
ಕನ್ನಡಪ್ರಭ ವಾರ್ತೆ ಮೈಸೂರು
ಶ್ರೀ ಮಹರ್ಷಿ ವಾಲ್ಮೀಕಿ ಭವನಕ್ಕೆ ಮೀಸಲಿಟ್ಟ ಭೂಮಿಯನ್ನು ಖಾಸಗಿ ಸಂಸ್ಥೆಗೆ ಕಾನೂನು ಬಾಹಿರವಾಗಿ ಮಂಜೂರಾತಿಗೆ ಶಿಫಾರಸು ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ವೀರ ಕೇಸರಿ ಪಡೆಯವರು ನಗರದ ಗಾಂಧಿ ಚೌಕದಲ್ಲಿ ಶನಿವಾರ ಅರೆಬೆತ್ತಲೆಯಾಗಿ ಪ್ರತಿಭಟಿಸಿದರು.ವಾಲ್ಮೀಕಿ ಸಮುದಾಯದ ಮುಖಂಡರು ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಗೆ ಮೈಸೂರು ತಾಲೂಕು ಕಸಬಾ ಹೋಬಳಿ ಸರ್ವೆ ನಂ.92ರಲ್ಲಿ ಸರ್ಕಾರಿ ಜಮೀನು ಖಾಲಿ ಇದ್ದು, ಆರ್.ಟಿ.ಸಿ. ಸಮೇತ ಮನವಿ ಮಾಡಲಾಗಿತ್ತು. ಅದರಂತೆ ತಹಸೀಲ್ದಾರ್ ಅವರು ಖಾಲಿ ಇರುವ ಜಮೀನನ್ನು ವಾಲ್ಮೀಕಿ ಭವನ ನಿರ್ಮಾಣಕ್ಕೆ ಕಾಯ್ದಿರಿಸಲು ಪತ್ರ ಮುಖೇನ ತಿಳಿಸಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಸ್ಕೆಚ್ ಸಿದ್ಧಪಡಿಸಿ ತಾಲೂಕು ಕಚೇರಿ ನೀಡಿದರು ಎಂದು ಅವರು ತಿಳಿಸಿದರು. ವಾಲ್ಮೀಕಿ ಭವನಕ್ಕೆ ಸಂಬಂಧಿಸಿದಂತೆ ಕಡತವನ್ನು ರವಾನಿಸುವಾಗ ಜಿಲ್ಲಾಧಿಕಾರಿಗೆ ಖಾಸಗಿ ಸಂಸ್ಥೆಯೂ ತಮ್ಮಗೆ ಮಂಜೂರು ಮಾಡುವಂತೆ ಸಲ್ಲಿಸಿರುವ ಕಾರಣ ವಾಲ್ಮೀಕಿ ಭವನಕ್ಕೆ ಮೀಸಲಿಟ್ಟಿದ್ದ ಜಮೀನನ್ನು ಖಾಸಗಿ ಸಂಸ್ಥೆಗೆ ಕಾನೂನು ಬಾಹಿರವಾಗಿ ಮಂಜೂರು ಮಾಡಲು ಪ್ರಾದೇಶಿಕ ಆಯುಕ್ತ ಮೂಲಕ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಶಿಫಾರಸು ಮಾಡಿದ್ದಾರೆ. ಖಾಸಗಿ ಸಂಸ್ಥೆಗೆ ಜಮೀನು ಮಂಜೂರು ಮಾಡಲು ಮೈಸೂರು ನಗರದ ಸುಮಾರು 10 ಕಿ.ಮೀ ವ್ಯಾಪ್ತಿಯೊಳಗೆ ಮಂಜೂರು ಮಾಡಲು ಅವಕಾಶವಿಲ್ಲ ಎಂದು ಅವರು ಆರೋಪಿಸಿದರು.ಕರ್ನಾಟಕ ವೀರ ಕೇಸರಿ ಪಡೆಯ ಅಧ್ಯಕ್ಷ ಮಧುವನ ಚಂದ್ರು, ಮುಖಂಡರಾದ ಎಂ. ಕುಮಾರ, ಎಸ್. ಮಹದೇವು, ಬಸವರಾಜು, ಮರಿಸ್ವಾಮಿ, ಸಿದ್ದರಾಜು, ರಾಮನಾಯಕ, ನಾಗತಿ ಓಬವ್ವ, ರಾಜೇಶ್ವರಿ ಮೊದಲಾದವರು ಇದ್ದರು.