ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕೊಲ್ಕತ್ತದಲ್ಲಿ ಯುವ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಖಂಡನೀಯ. ಹೆಣ್ಣುಮಕ್ಕಳು ಇಂತಹ ಹಿಂಸೆಗೆ ನಿರಂತರವಾಗಿ ಬಲಿಯಾಗುತ್ತಿರುವುದು ಅದು ಸಮಾಜದ ಅನಾರೋಗ್ಯಕರ ಮನಸ್ಥಿತಿಗೆ ಕನ್ನಡಿ ಹಿಡಿದಂತಿದೆ ಎಂದು ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ ಹೇಳಿದರು.ಇತ್ತೀಚೆಗೆ ಕೊಲ್ಕತ್ತದಲ್ಲಿ ನಡೆದ ಪ್ರಕರಣವನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಸ್ಥೆ ಎಸ್.ಎನ್.ಎಮ್.ಸಿ ನವನಗರ ಶಾಖೆ ಮತ್ತು ಭಾರತೀಯ ವೈದ್ಯಕೀಯ ಸಂಸ್ಥೆ ಬಾಗಲಕೋಟೆ ಶಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ''''''''ದೀಪ ಮೆರವಣಿಗೆ''''''''ಯಲ್ಲಿ ಮಾತನಾಡಿದ ಅವರು ಸಮಾಜದ ಸುಶಿಕ್ಷಿತರ ಮೇಲೆ ಈ ರೀತಿಯ ದೌರ್ಜನ್ಯ ನಡೆಯುತ್ತಿರುವಾಗ ಇನ್ನು ಗ್ರಾಮೀಣ ಪ್ರದೇಶಗಳಲ್ಲಿನ ಅನಕ್ಷರಸ್ಥ ಹೆಣ್ಣುಮಕ್ಕಳ ಸ್ಥಿತಿಯನ್ನು ಕಲ್ಪಿಸಿಕೊಳ್ಳುವುದಕ್ಕೂ ಕಷ್ಟವಾಗುತ್ತಿದೆ. ಸಮಾಜದಲ್ಲಿನ ನಾಗರಿಕರು ಈ ರೀತಿಯ ದೌರ್ಜನ್ಯವನ್ನು ಖಂಡಿಸಬೇಕು. ಭಯದ ವಾತಾವರಣದಲ್ಲಿ ಮಹಿಳಾ ವೈದ್ಯರು ಕಾರ್ಯನಿರ್ವಹಿಸಬೇಕಾಗಿದೆ. ಕಾನೂನು ಮತ್ತು ಪೊಲೀಸ್ ವ್ಯವಸ್ಥೆ ಮಹಿಳಾ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಕುಮಾರೇಶ್ವರ ಆಸ್ಪತ್ರೆಯ ಓ.ಪಿ.ಡಿ ವಿಭಾಗದಿಂದ ಸಂಜೆ 6.30 ಗಂಟೆಗೆ ಆರಂಭಗೊಂಡ ಮೆರವಣಿಗೆ ಎ.ಪಿ.ಎಮ್.ಸಿ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯನ್ನು ಹಾಯ್ದು ಕುಮಾರೇಶ್ವರ ಆಸ್ಪತ್ರೆ ಎದುರು ಕೊನೆಗೊಂಡಿತು. ಪ್ರತಿಭಟನೆಯಲ್ಲಿ ಸುಮಾರು 500 ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಆಯ್.ಎಮ್.ಎ ಎಸ್.ಎನ್.ಎಮ್.ಸಿ ನವನಗರ ಶಾಖೆಯ ಅಧ್ಯಕ್ಷ ಡಾ.ಅನುಷ್ಕಾ ದೇವಣಿಕರ್, ಆಯ್.ಎಮ್.ಎ ಬಾಗಲಕೋಟೆ ಶಾಖೆಯ ಅಧ್ಯಕ್ಷರಾದ ಡಾ.ಅರುಣ ಮಿಸ್ಕಿನ, ಕಾರ್ಯದರ್ಶಿ ಡಾ.ಪ್ರಮೋದ ಮಿರ್ಜಿ ಮತ್ತು ವಿದ್ಯಾರ್ಥಿಗಳು ಪ್ರಕರಣವನ್ನು ಖಂಡಿಸಿ ಮಾತನಾಡಿದರು.