ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಶಿಕ್ಷಣ ಇಲಾಖೆಯು ದಿನಕ್ಕೊಂದು ಆದೇಶ ಹೊರಡಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನವಶ್ಯಕ ತೊಂದರೆ ಕೊಡುತ್ತಿರುವುದನ್ನು ಖಂಡಿಸಿ, ಅಗಸ್ಟ್ ೧೫ ರಂದು ಸ್ವಾತಂತ್ರ್ಯ ದಿನಾಚರಣೆಯಂದು ಕೈಗೆ ಕಪ್ಪು ಪಟ್ಟಿ ಧರಿಸಿ ‘ಕರಾಳ ಸ್ವಾತಂತ್ರ್ಯ ದಿನಾಚರಣೆ’ ಯನ್ನಾಗಿ ಆಚರಿಸಲಾಗುವುದು ಎಂದು ಜಿಲ್ಲಾ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಬಿ.ಈ. ಶಿವರಾಮೇಗೌಡ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಕಳೆದ ೫ ವರ್ಷಗಳಿಂದ ಶಿಕ್ಷಣ ಇಲಾಖೆಯು ದಿನಕ್ಕೊಂದು ಆದೇಶ ಹೊರಡಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನಾವಶ್ಯಕವಾಗಿ ತೊಂದರೆ ಕೊಡುತ್ತಾ ಬಂದಿದೆ. ಉಚ್ಛನ್ಯಾಯಾಲಯದ ದಾವೆ ಹಾಗೂ ಕರ್ನಾಟಕ ರಾಜ್ಯ ಪತ್ರ ಅಧಿಕೃತವಾಗಿ ದಿನಾಂಕ ಪ್ರಕಟಿಸಲಾದ ಪ್ರಕಟಣೆಗಳ / ತೀರ್ಪುಗಳನ್ನು ಕಡೆಗಣಿಸಿ ಹೊಸ ಶಿಕ್ಷಣ ಸಂಸ್ಥೆಗಳಿಗೆ ಯಾವ ನಿಯಮ ಪಾಲಿಸಬೇಕೋ, ಅದೇ ನಿಯಮವನ್ನು ಯಥಾವತ್ತಾಗಿ ಹಳೆ ಶಿಕ್ಷಣ ಸಂಸ್ಥೆಗಳಿಗೂ ಅನ್ವಯಿಸುವ ಮೂಲಕ ಕಿರುಕುಳ ನೀಡುತ್ತಿರುವುದು ದುರಂತ ಎಂದರು. ಶಿಕ್ಷಣ ಸಂಸ್ಥೆಗಳ ಪರ ನ್ಯಾಯಾಲಯದ ಆದೇಶವಿದ್ದರೂ ಹೊಸ ನಿಯಮದ ಹೆಸರಿನಲ್ಲಿ ವಿಳಂಬ ಧೋರಣೆ ಮಾಡುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹಿಂಸೆ ನೀಡಲಾಗುತ್ತಿದೆ. ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿರುವ ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳು ಹಾಗೂ ಮಾನ್ಯ ಶಾಸಕರು ಇದರ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರೂ ನಮ್ಮ ಸಂಸ್ಥೆಗಳ ಹಿತ ಕಾಪಾಡುವಲ್ಲಿ ಸರ್ಕಾರ ಮುಂದಾಗುತ್ತಿಲ್ಲ ಎಂದು ದೂರಿದರು.
ಒಂದೆಡೆ ಮಕ್ಕಳ ಭವಿಷ್ಯ, ಇನ್ನೊಂದೆಡೆ ಶಿಕ್ಷಣ ಸಂಸ್ಥೆಗಳ ಅಳಿವು- ಉಳಿವು ನೋಡಿಕೊಳ್ಳಬೇಕಿದೆ. ಈ ನಿಯಮದಿಂದಾಗಿ ಶಿಕ್ಷಣ ಇಲಾಖೆ ಹಾಗೂ ಇತರ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಾಗಿರುತ್ತದೆ, ಇದನ್ನು ಸಂಘವು ಖಂಡಿಸುತ್ತದೆ. ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳನ್ನು ಮಲತಾಯಿ ಮಕ್ಕಳಂತೆ ನೋಡಿಕೊಳ್ಳುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ವಾತಂತ್ರ್ಯ ಹರಣ ಮಾಡುವ ಜೊತೆಗೆ ಅವೈಜ್ಞಾನಿಕ ನಿಯಮಗಳು ಜಾರಿಯಾಗಿದ್ದನ್ನು ಖಂಡಿಸಲಾಗಿದೆ, ಸರ್ಕಾರಿ ಶಾಲೆಯ ಮಕ್ಕಳ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವತ್ತರಾಗದೇ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಹಿತ ಕಡೆಗಣಿಸುತ್ತಿದೆ. ಈ ನಿಟ್ಟಿನಲ್ಲಿ ಸಂಘದಿಂದ ಈ ವರ್ಷ ಸ್ವಾತಂತ್ರ್ಯ ದಿನವನ್ನು ಕೈಗೆ ಕಪ್ಪು ಬಟ್ಟೆ ಧರಿಸುವ ಮೂಲಕ ‘ಕರಾಳ ಸ್ವಾತಂತ್ರ್ಯ ದಿನಾಚರಣೆ’ ಯನ್ನಾಗಿ ಆಚರಿಸಬೇಕೆಂದು ಕೆಂದ್ರ ಸಂಘ ಸೂಚನೆ ಕೊಟ್ಟಿರುವುದರಿಂದ ಹಾಸನ ಜಿಲ್ಲಾ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟವೂ ಸಹ ಬೆಂಬಲ ನೀಡುತ್ತಿದೆ. ರಾಜ್ಯ ಸರ್ಕಾರವು ಮಾನ್ಯತೆ ನವೀಕರಣ, ಭೂ ಪರಿವರ್ತನೆ, ಶಾಲಾ ಕಟ್ಟಡ ತೆರಿಗೆ, ಆರ್.ಟಿ.ಇ ಪಾವತಿ ವಿಳಂಬ, ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವ ತನಕ ರಾಜ್ಯ ಸಂಘಟನೆಗೆ ಹಾಸನ ಜಿಲ್ಲಾ ಆಡಳಿತ ಮಂಡಳಿಗಳ ಒಕ್ಕೂಟದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.ರಾಜ್ಯ ಸರ್ಕಾರವು ಮಾನ್ಯತೆ ನವೀಕರಣ, ಭೂ ಪರಿವರ್ತನೆ, ಶಾಲಾ ಕಟ್ಟಡ ತೆರಿಗೆ, ಆರ್.ಟಿ.ಇ ಪಾವತಿ ವಿಳಂಬ, ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವವರೆಗೂ ರಾಜ್ಯ ಸಂಘಟನೆಗೆ ಹಾಸನ ಜಿಲ್ಲಾ ಆಡಳಿತ ಮಂಡಳಿಗಳ ಒಕ್ಕೂಟದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಈ ನಿಟ್ಟಿನಲ್ಲಿ ಸರ್ಕಾರ ನಿಯಮಗಳಲ್ಲಿ ಸಡಿಲಿಕೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಕಾರ್ಯದರ್ಶಿ ಬಿ.ಕೆ. ಗಂಗಾಧರ್, ಪದಾಧಿಕಾರಿಗಳಾದ ವೆಂಕಟ್ ರಾಮು, ಕುಮಾರ್, ಗಂಗಾಧರ್, ಹೇಮಂತ್ ಇತರರು ಉಪಸ್ಥಿತರಿದ್ದರು.