ಕನ್ನಡಪ್ರಭ ವಾರ್ತೆ ಮದ್ದೂರು
ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ ಶಾಸಕ ಕೆ.ಎಂ.ಉದಯ್ ಸಮ್ಮುಖದಲ್ಲಿ ನಗರಸಭೆಗೆ ಗ್ರಾಮ ಪಂಚಾಯ್ತಿ ಸೇರ್ಪಡೆ ವಿರೋಧಿಸಿ ಧರಣಿ ನಿರತರು ಹಾಗೂ ಶಾಸಕರ ಬೆಂಬಲಿಗರ ನಡುವೆ ಪರ ವಿರೋಧ ಘೋಷಣೆಗಳನ್ನು ಕೂಗಿ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾದ ಘಟನೆ ತಾಲೂಕಿನ ಗೊರವನಹಳ್ಳಿಯಲ್ಲಿ ಶನಿವಾರ ನಡೆಯಿತು.ಗ್ರಾಮದ ನಿವಾಸಿಗಳು ನಗರಸಭೆಗೆ ಸೇರ್ಪಡೆ ವಿರೋಧಿಸಿ ಕಳೆದ 86 ದಿನಗಳಿಂದಲೂ ನಿರಂತರ ಧರಣಿ ಕೈಗೊಂಡು ಕೂಡಲೇ ಗ್ರಾಮವನ್ನು ನಗರಸಭೆಯಿಂದ ಕೈಬಿಡುವಂತೆ ಒತ್ತಾಯಿಸಿ ಗ್ರಾಮಕ್ಕೆ ಆಗಮಿಸಿದ ಶಾಸಕ ಕೆ.ಎಂ.ಉದಯ್ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಸ್ಥಳದಲ್ಲಿದ್ದ ಶಾಸಕರ ಬೆಂಬಲಿಗರು ಶಾಸಕರ ಪರ ಘೋಷಣೆ ಕೂಗಿದಾಗ ಕೆಲ ನಿಮಿಷಗಳ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು.
ಪ್ರತಿಭಟನಾಕಾರರ ಘೋಷಣೆಗಳಿಗೆ ಸೊಪ್ಪು ಹಾಕದ ಶಾಸಕ ಕೆ.ಎಂ.ಉದಯ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಬಳಿಕ ವೇದಿಕೆ ಕಾರ್ಯಕ್ರಮದತ್ತ ತೆರಳಿದರು.ಮುಂಜಾಗೃತ ಕ್ರಮವಾಗಿ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ವೃತ್ತ ನಿರೀಕ್ಷಕಪಾಗ ನವೀನ್, ನಾರಾಯಣ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
ಗ್ರಾಮದಲ್ಲಿ ಕಳೆದ 86 ದಿನಗಳಿಂದಲೂ ನಿರಂತರ ಧರಣಿ ಕೈಗೊಳ್ಳಲಾಗಿದೆ. ಗ್ರಾಮಕ್ಕೆ ಭೇಟಿ ನೀಡಿದ ಶಾಸಕರು ಸೌಜನ್ಯಕ್ಕಾದರೂ ಪ್ರತಿಭಟನಾನಿರತರೊಂದಿಗೆ ಚರ್ಚಿಸದೆ ತೆರಳಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಪ್ರಸನ್ನ ಮಾತನಾಡಿ, ಶಾಸಕ ಅಭಿವೃದ್ಧಿ ಕಾರ್ಯಗಳಿಗೆ ತಮ್ಮ ವಿರೋಧವಿಲ್ಲ. ಗ್ರಾಮವನ್ನು ನಗರಸಭೆಗೆ ಸೇರ್ಪಡೆಗೆ ವಿರೋಧವಿದೆ. ಶಾಸಕರು ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಪಂಚಾಯಿತಿಯಾಗಿ ಉಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂತೋಷ್, ಉಮೇಶ್, ಶ್ರೀಕಂಠ, ಪ್ರಮೋದ, ನವೀನ, ಅವಿನಾಶ್, ಶಿವಣ್ಣ, ಪುಟ್ಟಸ್ವಾಮಿ, ಗೌರಮ್ಮ, ಪೂರ್ಣಿಮಾ, ಕಲಾವತಿ, ಕಾಳಯ್ಯ, ಲಿಂಗಯ್ಯ, ಸಿದ್ಧರಾಜು ಇತರರಿದ್ದರು.