ಸಾರಾಂಶ
ಸಾಗರ: ಬೆಂಗಳೂರಿನ ಚಾಮರಾಜಪೇಟೆ ಮತ್ತು ಮೈಸೂರಿನ ನಂಜನಗೂಡಿನಲ್ಲಿ ಗೋವಿನ ಮೇಲೆ ನಡೆದ ಪೈಶಾಚಿಕ ಕೃತ್ಯ ಖಂಡಿಸಿ ಶುಕ್ರವಾರ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಚ್.ಹಾಲಪ್ಪ ಮಾತನಾಡಿ, ಭಾರತೀಯರು ದೇವರೆಂದು ಪೂಜಿಸುವ ಗೋಮಾತೆಯ ಮೇಲೆ ಬೆಂಗಳೂರಿನ ಚಾಮರಾಜಪೇಟೆ ಮತ್ತು ಮೈಸೂರಿನ ನಂಜನಗೂಡಿನಲ್ಲಿ ದುಷ್ಟರು ಕ್ರೌರ್ಯ ಮರೆದಿರುವುದು ಅತ್ಯಂತ ಖಂಡನೀಯ. ರಾಜ್ಯ ಸರ್ಕಾರ ಗೋವಿಗೆ ಚಿತ್ರಹಿಂಸೆ ನೀಡಿದವರನ್ನು ವಶಕ್ಕೆ ಪಡೆಯದೆ ಇರುವುದು ಸರ್ಕಾರದ ಗೋವಿರೋಧಿ ನೀತಿಗೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಹಿಂದೂ ವಿರೋಧಿ ಪುಂಡರ ಗುಂಪು ಈ ದುಷ್ಕೃತ್ಯ ನಡೆಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಪ್ರಕರಣಗಳ ಹಿಂದೆ ವ್ಯವಸ್ಥಿತ ಜಾಲವಿದೆ. ಸರ್ಕಾರ ಯಾರನ್ನೋ ಹಿಡಿದು ತಂದು ಬಂಧಿಸಿದ್ದೇವೆ ಎನ್ನುವ ಕಣ್ಣೊರೆಸುವ ತಂತ್ರವನ್ನು ಕೈಬಿಟ್ಟು ನಿಜವಾದ ಅಪರಾಧಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಹಿಂದೂ ವಿರೋಧಿ ಸರ್ಕಾರ. ರಾಜ್ಯದಲ್ಲಿ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತರುವುದು, ಪರಸ್ಪರ ಒಡಕಿನ ಭಾವನೆ ಮೂಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ರಾಜ್ಯ ಸರ್ಕಾರ ಮಾಡುತ್ತಿದೆ. ಶಾಂತಿ ಸಹಬಾಳ್ವೆಗೆ ಧಕ್ಕೆ ತರುತ್ತಿರುವ, ಗೋವುಗಳ ಮೇಲೆ ದೌರ್ಜನ್ಯ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರವನ್ನು ತಕ್ಷಣ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.ಪರಿವಾರದ ಪ್ರಮುಖರಾದ ಅ.ಪು.ನಾರಾಯಣಪ್ಪ ಮಾತನಾಡಿ, ಗೋವಿನ ಮೇಲಿನ ಹಿಂಸೆಯನ್ನು ಪ್ರತಿಯೊಬ್ಬ ನಾಗರಿಕರೂ ಖಂಡಿಸಬೇಕು. ಚಾಮರಾಜಪೇಟೆ ಮತ್ತು ನಂಜನಗೂಡಿನಲ್ಲಿ ಗೋವಿಗೆ ಅತ್ಯಂತ ಚಿತ್ರಹಿಂಸೆ ನೀಡಲಾಗಿದೆ. ಇಂತಹ ಕೃತ್ಯದಲ್ಲಿ ಭಾಗಿಯಾದವರಿಗೆ ಉಗ್ರಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.ಪ್ರತಿಮಾ ಜೋಗಿ, ಸಂತೋಷ್ ಶಿವಾಜಿ, ಅರಗ ಚಂದ್ರಶೇಖರ್, ಕೆ.ಎಚ್.ಸುಧೀಂದ್ರ, ಕೋಮಲ್ ರಾಘವೇಂದ್ರ, ವಿ.ಮಹೇಶ್, ಮಧುರಾ ಶಿವಾನಂದ್, ಮೈತ್ರಿ ಪಾಟೀಲ್, ಸವಿತಾ ವಾಸು, ಪ್ರೇಮ ಸಿಂಗ್, ಕೆ.ಜಿ.ಪ್ರಶಾಂತ, ಬಿ.ಎಚ್.ಲಿಂಗರಾಜ್, ಪ್ರಸನ್ನ ಕೆರೆಕೈ, ಗಣೇಶ್ ಪ್ರಸಾದ್, ಪರಶುರಾಮ್ ಇನ್ನಿತರರು ಹಾಜರಿದ್ದರು.