ಸಚಿವ ಸತೀಶ್ ಜಾರಕಿಹೊಳಿರವರ ಮೇಲಿನ ಇಡಿ ಧಾಳಿ ಖಂಡಿಸಿ ಜಿಲ್ಲಾ ಕಾಂಗ್ರೆಸ್‍ನಿಂದ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸಚಿವ ಸತೀಶ್‍ ಜಾರಕಿಹೊಳಿರವರ ಮೇಲೆ ಇಡಿ ಧಾಳಿ ನಡೆಸಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‍ನಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಅಂಬೇಡ್ಕರ್ ಪ್ರತಿಮೆ ಮುಂಭಾಗ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಬಿ.ಮಂಜುನಾಥ್, ಕಾಂಗ್ರೆಸ್‍ಗೆ ಶಕ್ತಿಯಾಗಿರುವ ಸತೀಶ್‍ ಜಾರಕಿಹೊಳಿ ಹಾಗೂ ಅವರ ಪುತ್ರಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮತ್ತು ಸಂಬಂಧಿಕರ ನಿವಾಸಗಳ ಮೇಲೆ ಇಡಿ ಧಾಳಿ ನಡೆಸಿ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕುತಂತ್ರ ನಡೆಸುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರ ಮೊದಲು ತನ್ನ ಪಕ್ಷದಲ್ಲಿರುವ ಲೂಟಿಕೋರರ ಮೇಲೆ ಇಡಿ ಛೂ ಬಿಡಲಿ ಅದನ್ನು ಬಿಟ್ಟು ಕಾಂಗ್ರೆಸ್ ನಾಯರುಗಳನ್ನು ಗುರಿಯಾಗಿಸಿಕೊಂಡಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಗಡಿಪಾರಾಗಿದ್ದ ಅಮಿತ್‍ ಶಾರವರನ್ನು ಕೇಂದ್ರ ಗೃಹ ಸಚಿವರನ್ನಾಗಿ ಮಾಡಿಕೊಂಡಿರುವ ಪ್ರಧಾನಿ ಮೋದಿರವರು ಬಿಜೆಪಿಯಲ್ಲಿನ ಭ್ರಷ್ಟರ ಮೇಲೆ ಇಡಿ ಧಾಳಿ ನಡೆಸಲಿ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಿ.ಟಿ.ರವಿ ಇವರ ಹಗರಣವನ್ನು ಏಕೆ ಬಯಲಿಗೆಳೆಯುವುದಿಲ್ಲ. ಇಡಿ ಮತ್ತು ಸಿಬಿಐ ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ. ಸತೀಶ್‍ ಜಾರಕಿಹೊಳಿರವರ ಮೇಲೆ ಧಾಳಿ ನಡೆಸುತ್ತಿರುವುದನ್ನು ನೋಡಿಕೊಂಡು ಸುಮ್ಮನಿರುವುದಿಲ್ಲ. ಉಗ್ರ ಹೋರಾಟ ನಡೆಸಬೇಕಾಗುತ್ತದೆಂದು ಎಚ್ಚರಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ, ಸಚಿವ ಸತೀಶ್ ಜಾರಕಿಹೊಳಿರವರು ರಾಜಕೀಯದ ಜೊತೆಗೆ ಉದ್ಯಮದಲ್ಲಿ ತೊಡಗಿ ಶ್ರೀಮಂತರಾಗಿದ್ದಾರೆನ್ನುವುದನ್ನು ಮೊದಲು ಬಿಜೆಪಿ ಅರ್ಥಮಾಡಿಕೊಳ್ಳಲಿ. ಪ್ರಧಾನಿ ಮೋದಿ ಕೇರ್ ಫಂಡ್‍ನಲ್ಲಿ ಎಷ್ಟು ಹಗರಣವಾಗಿದೆ. ಅದರ ಬಗ್ಗೆ ಏಕೆ ತನಿಖೆ ನಡೆಸುತ್ತಿಲ್ಲ. ಇಡಿ, ಸಿಬಿಐ, ಮೌನ ವಹಿಸಿದೆ. ರಾಜ್ಯಾದ್ಯಂತ ಕಾಂಗ್ರೆಸ್ ವಿರುದ್ಧ ಪಾದಯಾತ್ರೆ ಕೈಗೊಂಡಿರುವುದಕ್ಕೆ ಹಣ ಎಲ್ಲಿಂದ ಬರುತ್ತದೆನ್ನುವುದಕ್ಕೆ ಬಿಜೆಪಿ ಉತ್ತರಿಸಲಿ ಎಂದು ಸವಾಲು ಹಾಕಿದರು.

ಸತೀಶ್ ಜಾರಕಿಹೊಳಿ ಹಾಗೂ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಮತ್ತಿತರರ ಮೇಲೆ ಇಡಿ ಧಾಳಿ ನಡೆಸುವ ಬದಲು ಬಿಜೆಪಿಯಲ್ಲಿರುವ ಭ್ರಷ್ಟರನ್ನು ಮಟ್ಟ ಹಾಕಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಇಂತಹ ಕ್ಯಾತೆಯಲ್ಲಿಯೇ ತೊಡಗಿರುವುದನ್ನು ಬಿಟ್ಟರೆ ಅಭಿವೃದ್ದಿ ಮಾತ್ರ ಶೂನ್ಯ ಎಂದರು.

ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ ಮಾತನಾಡಿ ರಾಜಕೀಯದಲ್ಲಿ ಎತ್ತರಕ್ಕೆ ಬೆಳೆಯುತ್ತಿರುವ ಸತೀಶ್ ಜಾರಕಿಹೊಳಿರವರ ಮೇಲೆ ಇಡಿ ಧಾಳಿ ನಡೆಸಿ ಕುಗ್ಗಿಸಲು ಹೊರಟಿರುವ ಬಿಜೆಪಿ ತಮ್ಮ ಪಕ್ಷದಲ್ಲಿರುವ ಭ್ರಷ್ಟರನ್ನು ರಕ್ಷಣೆ ಮಾಡಿಕೊಳ್ಳುತ್ತಿದೆ. ಒಂದು ಕಾಲದಲ್ಲಿ ಗಡಿಪಾರಿಗೆ ಗುರಿಯಾಗಿದ್ದ ಅಮಿತ್‍ಷಾ ಈಗ ಕೇಂದ್ರ ಗೃಹ ಸಚಿವರಾಗಿದ್ದಾರೆ. ಬಿ.ಎಸ್.ಯಡಿಯೂರಪ್ಪನವರು ಜೈಲಿಗೆ ಹೋಗಿ ಬಂದಿದ್ದನ್ನು ಪ್ರಧಾನಿ ಮೋದಿ ಮರೆತಂತಿದೆ. ಕಾಂಗ್ರೆಸ್ ನಾಯಕರುಗಳ ಮೇಲೆ ಪದೆ ಪದೆ ಧಾಳಿ ನಡೆಸಿದರೆ ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನ ತಕ್ಕ ಪಾಠ ಕಲಿಸಲಿದ್ದಾರೆಂದು ಎಚ್ಚರಿಸಿದರು.

ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್,

ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಜಿ.ವಿ.ಮಧುಗೌಡ, ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್, ಕಾರ್ಮಿಕ ವಿಭಾಗದ ಅಧ್ಯಕ್ಷ ಸೈಯದ್ ಮೊಹಿದ್ದೀನ್ ಚೋಟು, ಬಸವರಾಜ್ ಬಚ್ಚಬೋರನಹಟ್ಟಿ, ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಧುಪಾಲೆಗೌಡ, ಅಬ್ದುಲ್ಲಾ, ಪೈಲೆಟ್ ನಾಗರಾಜ್, ಶಶಿಕಿರಣ್, ಚಾಂದ್‍ಪೀರ್, ಭರಮಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್, ಚಿತ್ರದುರ್ಗ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ತಿಪ್ಪೇಸ್ವಾಮಿ, ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ನೇತ್ರಾವತಿ, ಇಂದಿರಾ, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನಿರಾ ಎ.ಮಕಾಂದಾರ್, ಮರುಳಾರಾಧ್ಯ ಸೇರಿದಂತೆ ವಿವಿಧ ವಿಭಾಗಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.