ಸಾರಾಂಶ
ಮಾಂಸಹಾರ ಸೇವಿಸುವ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಎನ್.ಮಹೇಶ್ ಜೋಷಿಯವರ ಲಘು ಹೇಳಿಕೆಗೆ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಜಿಲ್ಲಾಧ್ಯಕ್ಷ ಸಿ.ಶಿವಲಿಂಗಯ್ಯ ಖಂಡನೆ ವ್ಯಕ್ತಪಡಿಸಿದರು.
ಭಾರತೀನಗರ : ಮಾಂಸಹಾರ ಸೇವಿಸುವ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಎನ್.ಮಹೇಶ್ ಜೋಷಿಯವರ ಲಘು ಹೇಳಿಕೆಗೆ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಜಿಲ್ಲಾಧ್ಯಕ್ಷ ಸಿ.ಶಿವಲಿಂಗಯ್ಯ ಖಂಡನೆ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ ಅವರು ಮಾಂಸಹಾರವನ್ನು ಮಧ್ಯೆ ಸೇವನೆಗೆ ಹೋಲಿಸಿರುವುದು ಸರಿಯಲ್ಲ. ಪರಿಷತ್‌ಗೆ ಪುರೋಹಿತ ಶಾಹಿಗಳು ಸೇರಿಕೊಂಡು ಮಾಂಸಹಾರ ಅನಿಷ್ಠವೆಂದು ಸಸ್ಯಹಾರ ಶ್ರೇಷ್ಠವೆಂದು ಬಿಂಬಿಸುತ್ತ ಶೂದ್ರಾತಿ ಶೂದ್ರರ ಬಾಡೂಟವೇ ಅನಿಷ್ಠವೆಂದು ಅವಮಾನ ಮಾಡುವುದಕ್ಕೆ ಹೊರಟಿದ್ದಾರೆ. ಇಂತಹ ಮನುವಾದಿಗಳ ಕುತಂತ್ರಕ್ಕೆ ಶೂದ್ರರಾದ ನಮ್ಮ ವಿರೋಧವಿದೆ ಎಂಬುವುದನ್ನು ಮರೆಯಬಾರದು ಎಂದರು.
ಮಾಂಸಹಾರ ಅಸ್ಪೃಶ್ಯತೆಯ ಅಜ್ಞಾನ ತೊಲಗಲಿ, ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಹಾರದ ಜೊತೆಗೆ ಬಾಡೂಟವೂ ಇರಲಿ ಎಂಬುದು ನಮ್ಮ ಬೇಡಿಕೆಯಾಗಿದೆ. ಭಾರತ ದೇಶದ ಮೂಲ ನಿವಾಸಿಗಳು ಬಹುಸಂಖ್ಯಾತರು, ವರ್ಣ ವ್ಯವಸ್ಥೆಯ ಶ್ರೇಣಿಕೃತ ಜಾತಿ ಪದ್ಧತಿಯಲ್ಲಿ ಮನುವಾದಿ ಪುರೋಹಿತ ಶಾಹಿಗಳು, ಶೂದ್ರರು ಮತ್ತು ಪಂಚಮರೆಂದು ವಿಂಗಡಿಸಿ ಅನಿಷ್ಠರು ಕೀಳು ಜಾತಿಗಳೆಂದು ಬಿಂಬಿಸುತ್ತ ಶತ ಶತಮಾನಗಳಿಂದ ದೇವರು, ಧರ್ಮದ ಹೆಸರಿನಲ್ಲಿ ಶೋಷಣೆ ಮಾಡುತ್ತಿದ್ದಾರೆ. ಜೊತೆಗೆ ಮಾಂಸ ಆಹಾರವನ್ನು ಕೂಡ ಅವಮಾನಿಸುತ್ತಾ ಬಂದಿದ್ದಾರೆಂದು ಕಿಡಿಕಾರಿದರು.
ಮಾಂಸಾಹಾರ ನಿಕೃಷ್ಠ/ನಿಷಿದ್ಧ ಎನ್ನುವ ಯಾವುದೇ ಕಾನೂನು ನಮ್ಮ ಭಾರತದ ದೇಶದ ಸಂವಿಧಾನದಲ್ಲಿ ಇಲ್ಲ. ಹೀಗಾಗಿ ಸಾಹಿತ್ಯ ಸಮ್ಮೇಳನದಲ್ಲಿ ಹಲವು ಬಗೆಯ ಸಸ್ಯಹಾರದಲ್ಲಿ ಎರಡು ಮೂರು ಬಗೆಯ ತಿಂಡಿಗಳನ್ನು ಕಡಿತಗೊಳಿಸಿ ಇದರ ಜೊತೆಗೆ ಒಂದು ದಿನ ಮೊಟ್ಟೆ, ಮಾರನೇ ದಿನ ಒಂದು ಪೀಸ್ ಮೀನು, ಮೂರನೇ ದಿನ ಎರಡು ಪೀಸ್ ಬಾಡು ಕೊಡಬೇಕೆಂದು ಸರ್ಕಾರಕ್ಕೆ ನಮ್ಮ ವೈಜ್ಞಾನಿಕ ಸಂಶೋಧನಾ ಪರಿಷತ್‌ನಿಂದ ಒತ್ತಾಯ ಮಾಡುತ್ತೇವೆ ಎಂದರು.
ಇದೇ ವೇಳೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಜಿಲ್ಲಾ ಉಪಾಧ್ಯಕ್ಷೆ ವಸಂತಮ್ಮ, ತಾಲೂಕು ಘಟಕದ ಅಧ್ಯಕ್ಷ ಡಿ.ಸಿ.ಮಹೇಂದ್ರ, ನಿರ್ದೇಶಕ ಮುಡೀನಹಳ್ಳಿ ತಿಮ್ಮಯ್ಯ ಇದ್ದರು.