ಕಳಪೆ ಮಟ್ಟದ ಆಹಾರ ಪೂರೈಕೆಗೆ ಖಂಡನೆ

| Published : Oct 25 2024, 12:57 AM IST

ಸಾರಾಂಶ

Condemnation of poor food supply

- ಕರವೇ ನೇತೃತ್ವದಲ್ಲಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಂದ ಪ್ರತಿಭಟನೆ

----

ಕನ್ನಡಪ್ರಭ ವಾರ್ತೆ ಸುರಪುರ

ಹಿಂದುಳಿದ ವರ್ಗಗಳ ವಿಸ್ತೀರ್ಣ ಇಲಾಖೆಯಡಿ ಕಾರ್ಯನಿರ್ವಹಿಸುವ ಪಾಲಿಟೆಕ್ನಿಕ್ ಕಾಲೇಜು ವಸತಿ ನಿಲಯದಲ್ಲಿ ಕಳಪೆ ಮಟ್ಟದ ಆಹಾರ ಪೂರೈಸುವುದನ್ನು ಖಂಡಿಸಿ ನಗರದ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ಬೆಳಿಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿ ಎಚ್.ಎ. ಸರಕಾವಸ್ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಭೈರಿಮಡ್ಡಿ, ಬಿಸಿಎಂ ಇಲಾಖೆಯಡಿಯ ವ್ಯಾಪ್ತಿಯಲ್ಲಿ ಬರುವ ವಸತಿ ನಿಲಯಗಳು ಅವ್ಯವಸ್ಥೆಯ ಆಗರವಾಗಿದೆ. ಕೊಳೆತ ತರಕಾರಿಯನ್ನೇ ಬಳಸುತ್ತಾರೆ. ಗುಣಮಟ್ಟವಲ್ಲದ ಅಕ್ಕಿಯಲ್ಲೇ ಅನ್ನ ಮಾಡಿ ಬಡಿಸುತ್ತಾರೆ. ಮಕ್ಕಳಿಂದ ತಿನ್ನಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳು ಅನಿವಾರ್ಯವಾಗಿ ಸೇವಿಸಬೇಕಿದೆ. ಅಡುಗೆ ಮಾಡಿದ ತ್ಯಾಜ್ಯವನ್ನು ಅಲ್ಲಿಯೇ ಹರಿಬಿಡುತ್ತಾರೆ. ಇದರಿಂದ ದುರ್ವಾಸನೆ ಬೀರುತ್ತಿದೆ. ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಈ ಕುರಿತು ವಾರ್ಡ್‌ನ್‌ ಕೇಳಿದರೆ ಕುಂಟು ನೆಪ ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವೇನೂ ವೃಥಾ ಆರೋಪ ಮಾಡುತ್ತಿಲ್ಲ. ನೈಜತೆ ಅರಿಯಲು ಆಕಸ್ಮಿಕ ಭೇಟಿ ನೀಡಿದರೆ ನಿಜಾಂಶ ತಿಳಿಯಲಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡದಿದ್ದರೆ ಪ್ರತಿಭಟನೆ ಮುಂದುವರಿಲಿದೆ ಎಂದು ಎಚ್ಚರಿಸಿದರು. ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ತಹಸೀಲ್ದಾರರು ತಕ್ಷಣವೇ ಬಿಸಿಎಂ ಇಲಾಖೆ ಅಧಿಕಾರಿಯನ್ನು ಸಂಪರ್ಕಿಸಿ ಸಮಸ್ಯೆ ಇತ್ಯರ್ಥ ಪಡಿಸುವಂತೆ ಸೂಚಿಸಿ ವರದಿ ನೀಡುವಂತೆ ತಿಳಿಸಿದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.

ಕರವೇ ಮುಖಂಡರಾದ ಭೀಮು ನಾಯಕ ಮಲ್ಲಿಭಾವಿ, ಶಿವುಮೋನಯ್ಯ ಎಲ್.ಡಿ. ನಾಯಕ, ನಿಂಗಪ್ಪ ನಾಯಕ ಬಿಜಾಸ್ಪುರ, ಹಣಮಗೌಡ ಶಖಾಪುರ ಸೇರಿದಂತೆ ವಸತಿ ನಿಲಯದ ವಿದ್ಯಾರ್ಥಿಗಳಿದ್ದರು.

-----

24ವೈಡಿಆರ್3: ಸುರಪುರ ನಗರದ ವಸತಿ ನಿಲಯದ ಅವ್ಯವಸ್ಥೆ ಕುರಿತು ಕರವೇ ಮುಖಂಡರು ಹಾಗೂ ವಸತಿ ನಿಲಯದ ಅನೇಕ ವಿದ್ಯಾರ್ಥಿಗಳು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.