ಭೂ ಸ್ವಾಧೀನ ವಿರೋಧಿ ಹೋರಾಟಗಾರರ ಬಂಧನಕ್ಕೆ ಖಂಡನೆ

| Published : Jun 27 2025, 12:48 AM IST

ಸಾರಾಂಶ

ರೈತರ ಒಪ್ಪಿಗೆ ಇಲ್ಲದೆ ಭೂಮಿ ಪಡೆಯುವಂತೆ ಇಲ್ಲ ಎನ್ನುವ ಕಾನೂನಿದ್ದರೂ ಸಹ ಒಂದು ಕಡೆ ದೌರ್ಜನ್ಯದಿಂದ, ಇನ್ನೊಂದು ಕಡೆ ಭೂಮಿಯ ಕಾನೂನುಗಳನ್ನು ತಮಗೆ ಬೇಕಾದ ರೀತಿಯಲ್ಲಿ ಬದಲಿಸಿ ಸ್ವಾಧೀನ ಪಡಿಸಿಕೊಳ್ಳಲು ಯತ್ನಿಸುತ್ತಿರುವ ರಾಜ್ಯ ಸರ್ಕಾರವು ರಾಜ್ಯದ ರೈತರಿಗೆ ಮಾಡಿರುವ ಮಹಾ ದ್ರೋಹ ಇದಾಗಿದೆ.

ಧಾರವಾಡ: ಬಲವಂತದ ಭೂ ಸ್ವಾಧೀನ ವಿರೋಧಿಸಿ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಬುಧವಾರ ದೇವನಹಳ್ಳಿಯಲ್ಲಿ ಶಾಂತಿಯುತವಾಗಿ ನಡೆಯುತ್ತಿರುವ ಹೋರಾಟದಲ್ಲಿ ಹೋರಾಟಗಾರರನ್ನು ಪೊಲೀಸರು ದೌರ್ಜನ್ಯದಿಂದ ಬಂಧಿಸಿರುವ ಕ್ರಮ ಖಂಡಿಸಿ ಗುರುವಾರ ವಿವೇಕಾನಂದ ವೃತ್ತದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಮಿತಿಯಿಂದ ಪ್ರತಿಭಟಿಸಲಾಯಿತು.

ಕಳೆದ ೧,೧೮೦ ದಿನಗಳಿಂದಲೂ ೧೩ ಹಳ್ಳಿಗಳ ರೈತರು ತಮ್ಮ ೧,೭೭೦ ಎಕರೆ ಫಲವತ್ತಾದ ಭೂಮಿಯನ್ನು ರಾಜ್ಯ ಸರ್ಕಾರವು ಕೈಗಾರಿಕಾ ಅಭಿವೃದ್ಧಿಯ ಹೆಸರಿನಲ್ಲಿ ಸ್ವಾಧೀನ ಪಡಿಸಿಕೊಳ್ಳಲು ಯತ್ನಿಸುತ್ತಿರುವದರ ವಿರುದ್ಧ ಈ ಭಾಗದ ರೈತರು ಹೋರಾಡುತ್ತಿದ್ದಾರೆ. ಈ ಭೂಮಿಯ ಮೇಲೆ ಅವಲಂಬಿತರಾಗಿ ಯಥೇಚ್ಛವಾದ ಹಾಲು ಉತ್ಪಾದನೆ ಹೈನುಗಾರಿಕೆ ಹಾಗೂ ಹಣ್ಣು ಮತ್ತು ತರಕಾರಿ ಬೆಳೆಯುತ್ತಿದ್ದಾರೆ. ಸಮೃದ್ಧವಾಗಿರುವ ಈ ಭೂಮಿಯ ಮೇಲೆ ಈಗ ಭೂಮಿಗಳ್ಳರ ಕರಿನೆರಲು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಅವರ ಮನಸ್ಸನ್ನು ಒಲಿಸಲು ರಾಜ್ಯ ಸರ್ಕಾರವು ಕೈಗಾರಿಕಾ ಅಭಿವೃದ್ಧಿ ಹೆಸರಿನಲ್ಲಿ ರೈತರೊಂದಿಗೆ ಮೂರು ಸುತ್ತಿನ ಸಭೆ ನಡೆಸಿ ಬುಧವಾರ ಅಂತಿಮವಾಗಿ ತನ್ನ ನಿರ್ಧಾರ ಪ್ರಕಟಿಸಿದೆ. ರೈತರ ಜೀವನದೊಂದಿಗೆ ಚೆಲ್ಲಾಟವಾಡುವ ಈ ನಿರ್ಧಾರವು ಸಂಪೂರ್ಣವಾಗಿ ರೈತ ವಿರೋಧಿಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಒಪ್ಪಿಗೆ ಇಲ್ಲದೆ ಭೂಮಿ ಪಡೆಯುವಂತೆ ಇಲ್ಲ ಎನ್ನುವ ಕಾನೂನಿದ್ದರೂ ಸಹ ಒಂದು ಕಡೆ ದೌರ್ಜನ್ಯದಿಂದ, ಇನ್ನೊಂದು ಕಡೆ ಭೂಮಿಯ ಕಾನೂನುಗಳನ್ನು ತಮಗೆ ಬೇಕಾದ ರೀತಿಯಲ್ಲಿ ಬದಲಿಸಿ ಸ್ವಾಧೀನ ಪಡಿಸಿಕೊಳ್ಳಲು ಯತ್ನಿಸುತ್ತಿರುವ ರಾಜ್ಯ ಸರ್ಕಾರವು ರಾಜ್ಯದ ರೈತರಿಗೆ ಮಾಡಿರುವ ಮಹಾ ದ್ರೋಹ ಇದಾಗಿದೆ.

ರೈತರನ್ನು ಬೀದಿಗೆ ತಳ್ಳಲಿರುವ ಈ ಸ್ವಾಧೀನ ನಿರ್ಧಾರವು ರದ್ದಾಗಿ ರೈತರ ಭೂಮಿ ರೈತರಿಗೆ ಬರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ರೈತರ ಹೋರಾಟದೊಂದಿಗೆ ನಿಲ್ಲುತ್ತದೆ ಎಂದು ಹೇಳುತ್ತಾ ಭೂಮಿಗಾಗಿ, ಜೀವನಕ್ಕಾಗಿ ಹೋರಾಡುತ್ತಿರುವ ರೈತರ ಜನತಾಂತ್ರಿಕ ಹಕ್ಕನ್ನು ಪೊಲೀಸ್ ದೌರ್ಜನ್ಯದ ಮೂಲಕ ದಮನ ಮಾಡುವ ಹೀನ ಯತ್ನವನ್ನು ಕೈಬಿಟ್ಟು, ಬಂದಿಸಿರುವ ಎಲ್ಲ ನಾಯಕರನ್ನು ಬೇಷರತ್ತಾಗಿ ಕೂಡಲೇ ಬಿಡುಗಡೆಗೊಳಿಸಬೇಕು ಹಾಗೂ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಟ್ಟು ಕೂಡಲೇ ರೈತರ ಭೂಮಿಯನ್ನು ರೈತರಿಗೆ ನೀಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ದೀಪಾ ಧಾರವಾಡ, ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮಿತಿ ಮುಖಂಡ ಲಕ್ಷ್ಮಣ ಬಕ್ಕಾಯಿ, ಎಐಯುಟಿಯುಸಿನ ಗಂಗಾಧರ ಬಡಿಗೇರ, ಶರಣು ಗೋನವಾರ, ಬಸಪ್ಪ ನೇಕಾರ, ಬಸಪ್ಪ ಬಡಾರಿ ಸೇರಿದಂತೆ ಹಲವರಿದ್ದರು.

Related Stories
Top Stories