400 ಕೆಪಿಎಸ್ ಶಾಲೆ ಪ್ರಾರಂಭಿಸುವ ನಿರ್ಧಾರಕ್ಕೆ ಖಂಡನೆ

| Published : Mar 14 2025, 12:33 AM IST

ಸಾರಾಂಶ

ರಾಯಚೂರು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ನೇತೃತ್ವದಲ್ಲಿ ಧರಣಿ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರುಸರ್ಕಾರದ ಪ್ರಸಕ್ತ ಬಜೆಟ್‌ನಲ್ಲಿ ರಾಜ್ಯದಲ್ಲಿ 400 ಪಬ್ಲಿಕ್ (ಕೆಪಿಎಸ್) ಶಾಲೆಗಳ ಪ್ರಾರಂಭಿಸಲು ನಿರ್ಧಾರಿಸಿರುವ ಕ್ರಮವನ್ನು ಖಂಡಿಸಿ ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ನೇತೃತ್ವದಲ್ಲಿ ಗುರುವಾರ ಧರಣಿ ನಡೆಸಲಾಯಿತು.ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತದಲ್ಲಿ ಸೇರಿದ ಸಮಿತಿ ಹಾಗೂ ಕರವೇ ಪದಾಧಿಕಾರಿಗಳು, ಸದಸ್ಯರು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ತಹಸೀಲ್ದಾರ್‌ ಕಚೇರಿ ಅಧಿಕಾರಿ ಮುಖಾಂತರ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಕಳೆದ ಮಾ.7ರಂದು ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿಗಳ ರಾಜ್ಯದಲ್ಲಿ ನಾಲ್ಕುನೂರು ಪಬ್ಲಿಕ್ ಶಾಲೆಗಳನ್ನು ಆರಂಭಿಸುವಾದಾಗಿ ವಿಧಾನಸಭಾ ಅಧಿವೇಶನದಲ್ಲಿ ಘೋಷಿಸಿರುವುದು ಅಘಾತಕಾರಿ ಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಕನ್ನಡ ಭಾಷೆಗೆ, ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಇದು ಭಾರೀ ದೊಡ್ಡ ಹೊಡೆತ ನೀಡುವ ವಿಷಯವಾಗಿದೆ. ಈಗಾಗಲೇ ಪಬ್ಲಿಕ್ ಸ್ಕೂಲ್ ಹೆಸರಲ್ಲಿ ಸರಕಾರಿ ಆಂಗ್ಲ ಮಾಧ್ಯಮ ಪ್ರಾಥಮಿಕ, ಪ್ರೌಢಶಾಲೆಗಳು ಆರಂಭಗೊಂಡು ಕನ್ನಡ ಮಾಧ್ಯಮ ಶಿಕ್ಷಣ ಪಡೆಯುವ ಮಕ್ಕಳಲ್ಲಿ ಕೀಳರಿಮೆ ಮೂಡಿಸಿದೆ. ಹಾಗೆ ಇಂಗ್ಲಿಷ್ ಮಾಧ್ಯಮದ ಸೆಳೆತ ಮೂಡಿಸಿ, ಕನ್ನಡ ಮಾಧ್ಯಮಕ್ಕೆ ಕೊಡಲಿಪೆಟ್ಟು ಬೀಳುತ್ತಿದೆ. ಹೀಗಾದರೆ ಮುಂದಿನ ಐದಾರು ವರ್ಷಗಳಲ್ಲಿ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಮುಚ್ಚಿಹೋಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.ಇಂಥ ಸಮಸ್ಯೆಯನ್ನು ಸರ್ಕಾರವೇ ಸೃಷ್ಟಿಸುತ್ತಿರುವುದು ಬಹಳ ನೋವಿನ ಸಂಗತಿ. ಈ ಹಿಂದೆ ತಮ್ಮ ಬೆಂಬಲ ಪಡೆದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ ಕುಮಾರಸ್ವಾಮಿಯಿಂದ ಈ ದುಷ್ಟ ಕಾರ್ಯ (ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ) ಪ್ರತಿ ವರ್ಷ ಮುನ್ನಡೆದಿದ್ದು, ಈಗ ಮತ್ತೆ 400 ಶಾಲೆ ಆರಂಭಿ ಸುವ ನೀತಿಯೊಂದಿಗೆ ತಾರಕಕ್ಕೇರಿಬಿಟ್ಟಿದೆ ಎಂದು ಆರೋಪಿಸಿದರು.ಎಲ್‌ಕೆಜಿಯಿಂದಲೇ ಸರ್ಕಾರ ಇಂಗ್ಲಿಷ್ ಮಾಧ್ಯಮ ಆರಂಭಿಸಿರುವುದು ಖಂಡನೀಯ ಇದಕ್ಕಾಗಿ ಇಂಗ್ಲಿಷ್ ಮಾಧ್ಯಮ ಅತಿಥಿ ಶಿಕ್ಷಕರ ನೇಮಕಾತಿ ಎಲ್ಲೆಡೆ ಆಗಿರುವುದು ಗುಟ್ಟಾಗಿ ಉಳಿದಿಲ್ಲ ಎಂದು ದೂರಿದರು.ಎಲ್‌ಕೆಜಿ, ಯುಕೆಜಿಯಿಂದ ಹತ್ತನೇ ತರಗತಿಯವರೆಗೆ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಮಾತ್ರ ನಡೆಸಬೇಕು, ಉಳಿದ ಶಿಕ್ಷಣ ಮಾಧ್ಯಮ ರದ್ದು ಪಡಿಸಬೇಕು. ಸರ್ಕಾರದ ನೀತಿಯಂತೆ ರಾಯಚೂರು ನಗರದಲ್ಲಿ ಶೇ 60ರಷ್ಟು ಕನ್ನಡ ನಾಮಫಲಕಗಳನ್ನು ಅಳವಡಿಸುವಂತೆ ರಾಯಚೂರು ಮಹಾನಗರ ಪಾಲಿಕೆಗೆ ಕೂಡಲೇ ಸೂಚನೆ ನೀಡಬೇಕು, ಎಂಬುವುದು ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.ಧರಣಿಯಲ್ಲಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ನಡುಮನಿ, ಪ್ರಧಾನ ಕಾರ್ಯದರ್ಶಿ ಹನುಮಂತ ಆಲೂರು, ಕರವೇ ಜಿಲ್ಲಾಧ್ಯಕ್ಷ ಅಶೋಕ ಕುಮಾರ ಸಿ.ಕೆ ಜೈನ್, ಪದಾಧಿಕಾರಿಗಳಾದ ಸಿದ್ಧರಾಮಪ್ಪ ಮಾಲಿಪಾಟೀಲ್, ರಾಮಣ್ಣ ಮ್ಯಾದಾರ್, ರಾಮಲಿಂಗಪ್ಪ ಕುಣ್ಸಿ, ಬಷೀರ ಅಹಮ್ಮದ್ ಹೊಸಮನಿ, ರುದ್ರಯ್ಯ ಗುಣಾರಿ, ವೆಂಕಟರೆಡ್ಡಿ ದಿನ್ನಿ, ಹನುಮಂತಪ್ಪ, ರಫಿಕ್ ಅಹಮ್ಮದ್ ಸೇರಿದಂತೆ ಅನೇಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.