ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಪಾಲಿಗೆ ಮರಣ ಶಾಸನದಂತಿರುವ ನೂತನ ಜಾಹೀರಾತು ನೀತಿ ೨೦೨೬ರ ಜಾರಿಯನ್ನು ತಕ್ಷಣ ಸ್ಥಗಿತಗೊಳಿಸಿ, ಮರು ಪರಿಶೀಲಿಸುವಂತೆ ಆಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸೊರಬ ಶಾಖೆ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಕೆ. ಪುರಂದರ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಸೊರಬ
ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಪಾಲಿಗೆ ಮರಣ ಶಾಸನದಂತಿರುವ ನೂತನ ಜಾಹೀರಾತು ನೀತಿ ೨೦೨೬ರ ಜಾರಿಯನ್ನು ತಕ್ಷಣ ಸ್ಥಗಿತಗೊಳಿಸಿ, ಮರು ಪರಿಶೀಲಿಸುವಂತೆ ಆಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸೊರಬ ಶಾಖೆ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಕೆ. ಪುರಂದರ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸೊರಬ ಶಾಖೆ ಅಧ್ಯಕ್ಷ ಜಿ.ಎಂ. ತೋಟಪ್ಪ (ಸಂತೋಷ್) ಮಾತನಾಡಿ, ರಾಜ್ಯ ಸರ್ಕಾರವು ಇತ್ತೀಚೆಗೆ ಸಂಪುಟ ಸಭೆಯಲ್ಲಿ ಅನುಮೋದಿಸಿರುವ ನೂತನ ಜಾಹೀರಾತು ನೀತಿ ೨೦೨೬ ಸಣ್ಣ ಪತ್ರಿಕೆಗಳ ಪಾಲಿಗೆ ಮರಣ ಶಾಸನವಾಗಿದೆ. ಇದು ಯಥಾವತ್ತಾಗಿ ಜಾರಿಗೆ ಬಂದಲ್ಲಿ ಸ್ಥಳೀಯ ಪತ್ರಿಕೆಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಗಂಭೀರ ಅಪಾಯವನ್ನು ಎದುರಿಸುವಂತಾಗಿದೆ. ಈ ನೀತಿಯ ಕೆಲವು ಅಂಶಗಳ ಬಗೆಗೆ ಸ್ಪಷ್ಟತೆ ಇಲ್ಲದೆ ಇರುವುದರಿಂದ ಹಾಗೂ ವಾಸ್ತವತೆಗೆ ಹೊಂದಿಕೆಯಾಗದೆ ಇರುವುದರಿಂದ ಈ ನೀತಿಯು ಪತ್ರಕರ್ತರಿಗೆ ಹೊರಲಾರದ ಆರ್ಥಿಕ ಹೊರೆಯಾಗಲಿದೆ ಎಂದರು.ನೂತನ ಜಾಹೀರಾತು ನೀತಿಯನ್ನು ತತ್ಕಾಲಕ್ಕೆ ಜಾರಿಗೆ ತರದೆ ವ್ಯಾಪಕ ಚರ್ಚೆ ಹಾಗೂ ಕಾರ್ಯ ಸಾಧ್ಯವಾದ ನೀತಿಯ ಮೂಲಕ ಮರುನಿರೂಪಣೆಯ ನಂತರ ಜಾರಿಗೊಳಿಸಬೇಕೆಂದು ಎಂದು ಒತ್ತಾಯ ಮಾಡಿದರು.
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಭಾಪಟ್, ಪತ್ರಕರ್ತರಾದ ಶಿವಪ್ಪ ಹಿತ್ಲರ್, ಜೆ.ಎಸ್. ನಾಗರಾಜ್ ಜೈನ್, ದತ್ತಾ ಸೊರಬ, ವಿಜಯ ಗೌಳಿ, ಚಂದ್ರಪ್ಪ ತವನಂದಿ, ಯು.ಎಲ್. ಸಂದೀಪ್, ರವಿ ಕಲ್ಲಂಬಿ ಸೇರಿದಂತೆ ಇತರರಿದ್ದರು.