, ಹೊರಗುತ್ತಿಗೆ ನೌಕರರ ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿ ಕಾರ್ಮಿಕ ಇಲಾಖೆಯು ಮೇ ೨೨, ೨೦೨೬ರಂದು ಅಧಿಸೂಚನೆ ಹೊರಡಿಸಿ ಕನಿಷ್ಠ ವೇತನವನ್ನು ಪರಿಷ್ಕರಿಸಿತ್ತು. ಅದರಂತೆ ಕೆಲವು ಜಿಲ್ಲೆಗಳಲ್ಲಿ ಇಲಾಖೆಯ ಮುಖ್ಯಸ್ಥರಿಂದ ಪರಿಷ್ಕೃತ ವೇತನದ ಅನುಬಂಧ ಪಡೆದು, ಏಜೆನ್ಸಿಗಳ ಮೂಲಕ ನೌಕರರಿಗೆ ಎರಡು ತಿಂಗಳ ಪರಿಷ್ಕೃತ ವೇತನವನ್ನೂ ಪಾವತಿಸಲಾಗಿದೆ ಎಂದರು. ಆದರೆ ಜುಲೈ ೧೫ರಂದು ಆರ್ಥಿಕ ಇಲಾಖೆ ಹೊರಡಿಸಿರುವ ಅಧಿಕೃತ ಜ್ಞಾಪನದಲ್ಲಿ ಪರಿಷ್ಕೃತ ಕನಿಷ್ಠ ವೇತನವನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿರುವುದು ಸಾವಿರಾರು ಹೊರಗುತ್ತಿಗೆ ನೌಕರರ ಬದುಕಿಗೆ ಮತ್ತೊಂದು ಹೊಡೆತ ನೀಡಿದಂತಾಗಿದೆ.
ಕನ್ನಡಪ್ರಭ ವಾರ್ತೆ ಹಾಸನ
ಆರೋಗ್ಯ, ವೈದ್ಯಕೀಯ ಶಿಕ್ಷಣ ಹಾಗೂ ಆಯುಷ್ ಇಲಾಖೆಗಳ ವಿವಿಧ ವೃಂದಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಪರಿಷ್ಕರಿಸಲಾಗಿದ್ದ ಕನಿಷ್ಠ ವೇತನವನ್ನು ಸರ್ಕಾರ ಹಿಂಪಡೆಯಲು ಮುಂದಾಗಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ವಿವಿಧ ವೃಂದದ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.ನಗರದ ಮಹಾವೀರ ವೃತ್ತದ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಹೇಮಾವತಿ ಪ್ರತಿಮೆ ಬಳಿ ಮಾನವ ಸರಪಳಿ ನಿರ್ಮಿಸಿ ನಂತರ ಎನ್. ಆರ್. ವೃತ್ತದಲ್ಲಿ ರಸ್ತೆ ತಡೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದರು. ಸಂಘದ ರಾಜ್ಯಾಧ್ಯಕ್ಷ ಅಕ್ಷಯ್ ಡಿ.ಎಂ. ಗೌಡ ಮಾಧ್ಯಮದೊಂದಿಗೆ ಮಾತನಾಡಿ, ಹೊರಗುತ್ತಿಗೆ ನೌಕರರ ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿ ಕಾರ್ಮಿಕ ಇಲಾಖೆಯು ಮೇ ೨೨, ೨೦೨೬ರಂದು ಅಧಿಸೂಚನೆ ಹೊರಡಿಸಿ ಕನಿಷ್ಠ ವೇತನವನ್ನು ಪರಿಷ್ಕರಿಸಿತ್ತು. ಅದರಂತೆ ಕೆಲವು ಜಿಲ್ಲೆಗಳಲ್ಲಿ ಇಲಾಖೆಯ ಮುಖ್ಯಸ್ಥರಿಂದ ಪರಿಷ್ಕೃತ ವೇತನದ ಅನುಬಂಧ ಪಡೆದು, ಏಜೆನ್ಸಿಗಳ ಮೂಲಕ ನೌಕರರಿಗೆ ಎರಡು ತಿಂಗಳ ಪರಿಷ್ಕೃತ ವೇತನವನ್ನೂ ಪಾವತಿಸಲಾಗಿದೆ ಎಂದರು. ಆದರೆ ಜುಲೈ ೧೫ರಂದು ಆರ್ಥಿಕ ಇಲಾಖೆ ಹೊರಡಿಸಿರುವ ಅಧಿಕೃತ ಜ್ಞಾಪನದಲ್ಲಿ ಪರಿಷ್ಕೃತ ಕನಿಷ್ಠ ವೇತನವನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿರುವುದು ಸಾವಿರಾರು ಹೊರಗುತ್ತಿಗೆ ನೌಕರರ ಬದುಕಿಗೆ ಮತ್ತೊಂದು ಹೊಡೆತ ನೀಡಿದಂತಾಗಿದೆ.
ಒಂದು ಕಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಮತ್ತೊಂದೆಡೆ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಇರುವ ಸಂದರ್ಭದಲ್ಲಿ ಸರ್ಕಾರದ ಈ ಕ್ರಮ ಒಪ್ಪುವಂತದ್ದಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ವೇತನ ಪರಿಷ್ಕರಣೆ ಜಾರಿಯಾಗಲಿ. ಈಗಾಗಲೇ ಪರಿಷ್ಕೃತ ವೇತನವನ್ನು ಕೆಲವು ಕಡೆ ಪಾವತಿಸಿರುವಾಗ ಅದನ್ನು ಏಕಾಏಕಿ ಹಿಂಪಡೆಯುವ ಮೂಲಕ ನೌಕರರನ್ನು ಗೊಂದಲಕ್ಕೆ ಸಿಲುಕಿಸಲಾಗಿದೆ. ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ಮರುಪರಿಶೀಲಿಸಿ ಪರಿಷ್ಕೃತ ಕನಿಷ್ಠ ವೇತನವನ್ನು ರಾಜ್ಯಾದ್ಯಂತ ಸಮರ್ಪಕವಾಗಿ ಜಾರಿಗೊಳಿಸಬೇಕು. ನೌಕರರ ಶ್ರಮಕ್ಕೆ ತಕ್ಕ ವೇತನ ದೊರೆಯುವಂತಾಗಬೇಕು ಎಂದು ಆಗ್ರಹಿಸಿದರು. ಈ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ರಾಜ್ಯದ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು ಹಾಗೂ ಸಾವಿರಾರು ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿ ಹೋರಾಟ ನಡೆಸಲಾಗಿದೆ ಎಂದು ಹೇಳಿದರು.ಹೊರಗುತ್ತಿಗೆ ನೌಕರರ ವೇತನ ಪರಿಷ್ಕರಣೆ ವಿಚಾರದಲ್ಲಿ ಸರ್ಕಾರ ಸ್ಪಷ್ಟ ನಿಲುವು ಪ್ರಕಟಿಸಿ, ಈಗಾಗಲೇ ಪರಿಷ್ಕರಿಸಿರುವ ಕನಿಷ್ಠ ವೇತನವನ್ನು ಯಾವುದೇ ಕಾರಣಕ್ಕೂ ಹಿಂಪಡೆಯಬಾರದು. ನ್ಯಾಯಯುತ ವೇತನಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ವಿವಿಧ ವೃಂದದ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜೂಳಾ, ನಿರ್ದೇಶಕ ಹಾಗೂ ಹಾಸನ ಜಿಲ್ಲಾ ಕಾರ್ಯದರ್ಶಿ ರಾಜಯ್ಯ ಆರ್.ಎಸ್., ಜಿಲ್ಲಾಧ್ಯಕ್ಷ ಮಂಜುನಾಥ್ ಹೆಚ್.ಆರ್., ಮನು ಮಲ್ಲೇಶ್, ಕುಮಾರ್, ಲೋಕೇಶ್ ಇತರರು ಉಪಸ್ಥಿತರಿದ್ದರು.--===
ಫೋಟೋ..ವಿವಿಧ ವೃಂದದ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ನಗರದ ಮಹಾವೀರ ವೃತ್ತದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು.