ಎನ್‌ಇಪಿ ಹಿಂಪಡೆಯಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಖಂಡನೆ

| Published : May 15 2024, 01:34 AM IST

ಎನ್‌ಇಪಿ ಹಿಂಪಡೆಯಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ನ್ನು ಹಿಂಪಡೆದುಕೊಳ್ಳಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಹಾವೇರಿ ನಗರ ಘಟಕದ ವತಿಯಿಂದ ಮಂಗಳವಾರ ನಗರದ ವಾಲ್ಮೀಕಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಹಾವೇರಿ: ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ನ್ನು ಹಿಂಪಡೆದುಕೊಳ್ಳಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಹಾವೇರಿ ನಗರ ಘಟಕದ ವತಿಯಿಂದ ಮಂಗಳವಾರ ನಗರದ ವಾಲ್ಮೀಕಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭದಲ್ಲಿ ಎಬಿವಿಪಿಯ ಜಿಲ್ಲಾ ಸಂಚಾಲಕ ಅಭಿಷೇಕ ದೊಡ್ಡಮನಿ ಮಾತನಾಡಿ, ದೇಶದಲ್ಲಿ ಭಾರತೀಯ ಶಿಕ್ಷಣ ನೀತಿ ಜಾರಿಗೆ ಬರಬೇಕು. ಅದು ಮುಂದಿನ ಹತ್ತಾರು ವರ್ಷಗಳ ನಂತರ ದೇಶದಲ್ಲಿ ಕೌಶಲ್ಯಯುತ ಯುವಶಕ್ತಿ ಹೊರಗಡೆ ಬರಲು ಸಹಾಯಕಾರಿಯಾಗಬೇಕು. ಬ್ರಿಟಿಷ್ ಶಿಕ್ಷಣ ನೀತಿಯಿಂದ ಮುಕ್ತರಾಗಿ ಭಾರತೀಯ ಶಿಕ್ಷಣವನ್ನು ಪಡೆಯಬೇಕು ಎಂಬ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ಅನ್ನು ಭಾರತ ಸರ್ಕಾರ ಜಾರಿಗೆ ತಂದಿದ್ದು, ಅದನ್ನು ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ರಾಜ್ಯ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಇಂದಿನ ರಾಜ್ಯ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಿಂಪಡೆಯುತ್ತೇವೆ ಎಂದು ಹೇಳಿದ ಕಾರಣಕ್ಕಾಗಿ ಒಂದು ಶಿಕ್ಷಣ ನೀತಿಯನ್ನು ಬದಲಾವಣೆ ಮಾಡಲು ಹೊರಟಿರುವ ಸರ್ಕಾರದ ನಡೆಯನ್ನು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ ಎಂದರು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಒಂದೇ ರೀತಿಯ ಶಿಕ್ಷಣ ಪದ್ಧತಿ ಇರಬೇಕು. ಆ ಶಿಕ್ಷಣ ಪದ್ಧತಿ, ಭಾರತೀಯ ವಿದ್ಯಾರ್ಥಿಗಳಿಗೆ ಯೋಗ ಹಾಗೂ ಇನ್ನಿತರ ಕೌಶಲ್ಯವನ್ನು ನೀಡುವ ಉದ್ದೇಶ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶವಾಗಿದೆ. ಮುಂದಿನ ೨೦-೨೫ ವರ್ಷಗಳಲ್ಲಿ ಆಗಬಹುದಾದ ಬದಲಾವಣೆಯನ್ನು ಮುಂದಿಟ್ಟುಕೊಂಡು ಈ ನೀತಿಯನ್ನು ಹಲವಾರು ಶಿಕ್ಷಣ ತಜ್ಞರು ತಯಾರಿ ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರ ರಾಷ್ಟ್ರೀಯತೆಯನ್ನು ತುಂಡು ಮಾಡಿ ಪ್ರತ್ಯೇಕತೆಯ ಹೆಜ್ಜೆಯನ್ನು ಇಡುತ್ತಿರುವುದು ಕರ್ನಾಟಕವನ್ನು ಹಿಮ್ಮುಖ ಚಲನೆಗೆ ತೆಗೆದುಕೊಂಡು ಹೋದಂತಾಗುತ್ತದೆ. ಭಾರತೀಯತೆಯ ವಿರೋಧಿ ನೀತಿ, ಭಾರತೀಯ ಜೀವನ ಪದ್ಧತಿಯನ್ನು ವಿರೋಧಿಸುವ ನೀತಿ, ಇಂಗ್ಲಿಷ್ ಶಿಕ್ಷಣ ಪದ್ಧತಿಯ ನಿಲುವನ್ನು ಒಪ್ಪಿಕೊಳ್ಳುವ ನೀತಿ, ಲಿಬರಲ್ ಎಜುಕೇಶನ್‌ನಿಂದ ಹಿನ್ನಡೆಗೆ ತೆಗೆದುಕೊಂಡು ಹೋಗುವ ನೀತಿ, ಯುಜಿಸಿ ನಿಯಮಾವಳಿಗಳನ್ನು ಕಡೆಗಣಿಸುವ ನೀತಿಯನ್ನ ರಾಜ್ಯ ಸರ್ಕಾರ ತೆಗೆದುಕೊಳ್ಳುವುದರಿಂದ ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ಅನ್ಯಾಯ ಎಸಗಿದಂತಾಗುತ್ತದೆ. ಯುಪಿಎಸ್‌ಸಿ ಹಾಗೂ ಇನ್ನಿತರ ಸ್ಪರ್ಧಾತ್ಮಕ ಕೋರ್ಸ್‌ಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯದ ಶಿಕ್ಷಣ ಪದ್ಧತಿಯನ್ನು ಬದಲಾವಣೆ ಮಾಡುವುದರಿಂದ ಅನ್ಯಾಯ ಮಾಡಿದಂತಾಗುತ್ತದೆ ಎಂದು ದೂರಿದರು. ಎಬಿವಿಪಿಯ ತಾಲೂಕು ಸಂಚಾಲಕ ನವೀನ್ ಜಿ.ಕೆ. ಮಾತನಾಡಿ, ಕೇವಲ ರಾಜಕೀಯ ಕಾರಣಕ್ಕಾಗಿ ಒಂದು ಉತ್ತಮ ಪ್ರಯೋಗ ಶೀಲ ಶಿಕ್ಷಣ ಪದ್ಧತಿಯನ್ನು ಬದಲಾವಣೆ ಮಾಡಿ ಲಕ್ಷಾಂತರ ವಿದ್ಯಾರ್ಥಿಗಳ ಜೀವನದಲ್ಲಿ ಆಟವಾಡಲು ಹೊರಟಿರುವ ಸರ್ಕಾರದ ನಡೆ ನಿಜಕ್ಕೂ ಮುಂದಿನ ದಿನಗಳಲ್ಲಿ ಮಾರಕವಾಗಲಿದೆ. ಎನ್‌ಇಪಿ ಜಾರಿ ಮಾಡಿದ ಕಾರಣಕ್ಕಾಗಿ ನೂರಾರು ಕೋಟಿ ರುಪಾಯಿ ಅನುದಾನವನ್ನು ಪಿಎಂ ಉಷಾ ಯೋಜನೆಯಡಿಯಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳಿಗೆ ಕೇಂದ್ರ ಸರ್ಕಾರ ನೀಡಿದೆ. ಒಂದು ವೇಳೆ ಎನ್‌ಇಪಿಯನ್ನು ರದ್ದು ಪಡಿಸಿದ್ದೆ ಆದಲ್ಲಿ ವಿಶ್ವವಿದ್ಯಾಲಯ ನೀಡಿದ ಅನುದಾನವನ್ನು ಕರ್ನಾಟಕ ರಾಜ್ಯ ಸರ್ಕಾರ ಕಳೆದುಕೊಳ್ಳಬೇಕಾಗುತ್ತದೆ. ರಾಜ್ಯದ ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ ಸಚಿವರು ಈ ಎಲ್ಲ ವಿಷಯವನ್ನು ಗಮನದಲ್ಲಿಟ್ಟುಕೊಂಡು ತರಾತುರಿಯಲ್ಲಿ ಮಧ್ಯಂತರ ವರದಿಯ ಪ್ರಕಾರ ಹಿಂದಿನ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರುತ್ತೇವೆ ಎಂಬ ಆದೇಶವನ್ನು ನೀಡಿರುವುದು ಎಬಿವಿಪಿ ಖಂಡಿಸುತ್ತದೆ. ಕೂಡಲೇ ರಾಜ್ಯ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿದು ಎನ್‌ಇಪಿಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿ ರಾಜ್ಯದಲ್ಲಿ ಸಮರ್ಪಕವಾದ ಎನ್‌ಇಪಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಪಡಿಸಿದ್ದೆ ಆದಲ್ಲಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಎಬಿವಿಪಿ ಮುಖಂಡರಾದ ನಾಗರಾಜ ಪುರವಂತಿಗೌಡ್ರ, ಯಲ್ಲಪ್ಪಗೌಡ ಪಾಟೀಲ, ಯುವರಾಜ ವಾಲಿಕಾರ, ಕಿರಣ ಬೊಮ್ಮನಹಳ್ಳಿ, ಶಿವು ನೆಲೋಗಲ್ಲ, ಸಿದ್ದು ಹಿರೇಮಠ, ಶಂಭು ಕಬ್ಬೂರ ಸೇರಿದಂತೆ ನೂರಾರು ಕಾಲೇಜು ವಿದ್ಯಾರ್ಥಿಗಳು ಇದ್ದರು.