ಹುಬ್ಬಳ್ಳಿ:

ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಹಿಜಾಬ್‌ ಬಳಕೆಗೆ ರಾಜ್ಯ ಸರ್ಕಾರ ಅನುಮತಿ ನೀಡಿರುವುದನ್ನು ಖಂಡಿಸಿ ಶ್ರೀರಾಮಸೇನೆ ಜೂ.1ರಿಂದ ರಾಜ್ಯಾದ್ಯಂತ ಶಾಲೆ- ಕಾಲೇಜುಗಳಲ್ಲಿ ಕೇಸರಿ ಶಾಲು ವಿತರಿಸಲಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ತಿಳಿಸಿದರು.

ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಜಾಬ್‌ ಬಳಕೆ ಬೇಕೋ ಬೇಡವೋ ಎಂಬ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವಿದೆ. ಆದರೂ ಸರ್ಕಾರ ಹಿಜಾಬ್‌ ನಿಷೇಧ ಹಿಂಪಡೆದಿದೆ. ಜೂ. 1ರಿಂದ ಎಲ್ಲ ಶಾಲೆ-ಕಾಲೇಜ್‌ನ ಹಿಂದೂ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸುತ್ತೇವೆ ಎಂದರು.

ಬಾಂಗ್ಲಾ ನುಸುಳುಕೋರರು:

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಅಲ್ಲಿನ ಬಾಂಗ್ಲಾ ಅಕ್ರಮ ನಿವಾಸಿಗಳು ದೇಶದ ವಿವಿಧ ರಾಜ್ಯಗಳಿಗೆ ನುಸುಳುತ್ತಿದ್ದಾರೆ. ಅದರಲ್ಲೂ ಕಾಂಗ್ರೆಸ್‌ ಅಧಿಕಾರವಿರುವ ಕರ್ನಾಟಕ, ಕೇರಳಕ್ಕೆ ನುಸುಳುವಿಕೆ ಹೆಚ್ಚಾಗುತ್ತಿದೆ ಎಂದ ಮುತಾಲಿಕ್‌, ರೈಲ್ವೆ ಮೂಲಕವೇ ಈ ರಾಜ್ಯಗಳಿಗೆ ಬರುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.


ಏಜೆಂಟರ್‌ ಮೂಲಕ ಆಗಮಿಸುತ್ತಿರುವ ಇವರನ್ನು ರೈಲ್ವೆ ಪೊಲೀಸರು, ಆರ್‌ಪಿಎಫ್‌, ಸ್ಥಳೀಯ ಪೊಲೀಸರು ಸರಿಯಾಗಿ ತಪಾಸಣೆ ಮಾಡುತ್ತಿಲ್ಲ. ಬರೀ ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ ನೋಡಿ ಬಿಟ್ಟು ಕಳುಹಿಸುತ್ತಿದ್ದಾರೆ. ಪಶ್ಚಿಮ ಬಂಗಾಳದಿಂದ ಯಾರೇ ಬಂದರೂ ಅವರನ್ನು ವಿಚಾರಣೆಗೊಳಪಡಿಸುವುದಷ್ಟೇ ಅಲ್ಲ. ಪಶ್ಚಿಮ ಬಂಗಾಳಕ್ಕೂ ಮಾಹಿತಿ ನೀಡಿ ಪರಿಶೀಲಿಸಬೇಕು. ಮತದಾರರ ಗುರುತಿನ ಚೀಟಿ, ಆಧಾರ್‌ ಕಾರ್ಡ್‌ ನಕಲಿ ಮಾಡಲು ಸಾಕಷ್ಟು ಅವಕಾಶವಿದೆ. ಆದಕಾರಣ ಕಾಟಾಚಾರದ ತಪಾಸಣೆ ಮಾಡಬಾರದು ಎಂದು ಆಗ್ರಹಿಸಿದರು.

ಅಕ್ರಮ ಪ್ರವೇಶ ಮಾಡಿಲ್ಲ:

ಹುಬ್ಬಳ್ಳಿಯ ಕೋರ್ಟ್‌ ಸರ್ಕಲ್‌ನಲ್ಲಿರುವ ಸಾಯಿ ಮಂದಿರಕ್ಕೆ ತಾವು ಅಕ್ರಮ ಪ್ರವೇಶ ಮಾಡಿದ್ದೇವೆ ಎಂದು ನಮ್ಮ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ಆದರೆ ನಾವು ಮೊದಲೇ ಪೊಲೀಸರಿಗೆ ತಿಳಿಸಿಯೇ ಅಲ್ಲಿಗೆ ಹೋಗಿದ್ದೇವೆ ಎಂದು ಮುತಾಲಿಕ್‌ ಸ್ಪಷ್ಟಪಡಿಸಿದರು.