ಯಕ್ಷಗಾನ ಪ್ರಸಂಗ ಕರ್ತ, ಹಿರಿಯ ವಿದ್ವಾಂಸ ಅಮೃತ ಸೋಮೇಶ್ವರ ಇನ್ನಿಲ್ಲ

| Published : Jan 07 2024, 01:30 AM IST

ಯಕ್ಷಗಾನ ಪ್ರಸಂಗ ಕರ್ತ, ಹಿರಿಯ ವಿದ್ವಾಂಸ ಅಮೃತ ಸೋಮೇಶ್ವರ ಇನ್ನಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯ ವಿದ್ವಾಂಸ, ಹಲವಾರು ಯಕ್ಷಗಾನ ಪ್ರಸಂಗಗಳ ಕರ್ತೃ ಅಮೃತ ಸೋಮೇಶ್ವರ ಅವರು ವಯೋಸಜಹ ಅನಾರೋಗ್ಯದಿಂದ ಶನಿವಾರ ನಿಧನ ಹೊಂದಿದರು.

ಕನ್ನಡಪ್ರಭ ವಾರ್ತೆ ಮಂಗಳೂರು/ ಉಳ್ಳಾಲ

ಯಕ್ಷಗಾನ ಪ್ರಸಂಗಕರ್ತರಾಗಿ ಜನಪ್ರಿಯರಾಗಿರುವ ಹಿರಿಯ ವಿದ್ವಾಂಸ, ಅನುವಾದಕ, ವಿಮರ್ಶಕ, ಜಾನಪದ ತಜ್ಞ, ಕವಿ, ಕತೆಗಾರ ಹಾಗೂ ನಿವೃತ್ತ ಪ್ರಾಧ್ಯಾಪಕ ಅಮೃತ ಸೋಮೇಶ್ವರ(89) ಶನಿವಾರ ಕೋಟೆಕಾರು ಶಿವಶಕ್ತಿ ನಗರದ ಸ್ವಗೃಹ ‘ಒಲುಮೆ’ಯಲ್ಲಿ ಇಹಲೋಕ ತ್ಯಜಿಸಿದರು. ಇದರೊಂದಿಗೆ ಕರಾವಳಿಯ ಜಾನಪದ, ಯಕ್ಷಗಾನ ರಂಗದ ಕೊಂಡಿಯೊಂದು ಕಳಚಿದಂತಾಗಿದೆ.

ಅಲ್ಪಕಾಲ ಅನಾರೋಗ್ಯದಿಂದ ಬಳಸುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಬೆಳಗ್ಗೆ ಕೋಟೆಕಾರಿನ ಅಡ್ಕ ಸಮೀಪದ ಸ್ವಗೃಹದಲ್ಲಿ ನಿಧನರಾದರು. ಅಮೃತರು ಪತ್ನಿ ನರ್ಮದಾ, ಮಕ್ಕಳಾದ ಚೇತನ್‌ ಸೋಮೇಶ್ವರ, ಜೀವನ್‌ ಸೋಮೇಶ್ವರ ಸೇರಿದಂತೆ ಕುಟುಂಬಿಕರು, ಬಂಧು, ಬಳಗವನ್ನು ಅಗಲಿದ್ದಾರೆ.

ಕನ್ನಡ ಮತ್ತು ತುಳು ಭಾಷೆಯ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ ಮೇರು ಸಾಹಿತಿ, ಹಿರಿಯ ವಿಮರ್ಶಕರಾದ ಅಮೃತರು ಕರಾವಳಿ ಕರ್ನಾಟಕದ ಯಕ್ಷಗಾನ, ಭೂತಾರಾಧನೆ ಹಾಗೂ ಜಾನಪದ ಕ್ಷೇತ್ರಗಳಲ್ಲಿ ಸಾಕಷ್ಟು ಸಂಶೋಧನೆ ನಡೆಸಿದ್ದಾರೆ. ಅನೇಕ ಕೃತಿಗಳನ್ನೂ ಹೊರತಂದಿದ್ದಾರೆ. ಇವರ ಕೃತಿಗಳು ಯಕ್ಷಗಾನ ಪ್ರಸಂಗಗಳಾಗಿ ಮೇಳಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ.

ಮಾತೃ ಭಾಷೆ ಮಲೆಯಾಳ ಆದರೂ ಕನ್ನಡ ಪ್ರೇಮ:

ಅಮೃತ ಸೋಮೇಶ್ವರ ಅವರು 1935ರ ಸೆಪ್ಟಂಬರ್ 27ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕೋಟೆಕಾರು ಸಮೀಪದ ಅಡ್ಯ ಎಂಬಲ್ಲಿ ಜನಿಸಿದರು. ತಂದೆ ಚಿರಿಯಂಡ ಮತ್ತು ತಾಯಿ ಅಮುಣಿ. ಮಾತೃಭಾಷೆ ಮಲಯಾಳಂ ಆದರೂ ತುಳು ಹಾಗೂ ಕನ್ನಡದಲ್ಲಿ ಬರೆದರು.

ತನ್ನ ಬಾಲ್ಯವನ್ನು ಮುಂಬೈನಲ್ಲಿ ಕಳೆದ ಅಮೃತರು ಐದು ವರ್ಷವಾಗುವಾಗ ಹೆತ್ತವರು ಊರಿಗೆ ಮರಳಿದ್ದರು. ಆಗ ಕೋಟೆಕಾರಿನ ಸ್ಟೆಲ್ಲಾ ಮೇರಿ ಕಾನ್ವೆಂಟ್‌ನಲ್ಲಿ ಐದನೇ ತರಗತಿ ವರೆಗೆ ಕಲಿತರು. ನಂತರ ಪ್ರೌಢಶಿಕ್ಷಣ ಆನಂದಾಶ್ರಮದಲ್ಲಿ. 1954ರಲ್ಲಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದರು. ಮಂಗಳೂರಿನ ಸೇಂಟ್‌ ಅಲೋಷಿಯಸ್‌ ಕಾಲೇಜಿನಲ್ಲಿ ಪದವಿ ಪೂರೈಸಿದರು.

ಮದರಾಸು ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದ ಅಮೃತೇಶ್ವರರು ತಾವು ಓದಿದ ಅಲೋಷಿಯಸ್‌ ಕಾಲೇಜಿನಲ್ಲಿಯೇ ಅಧ್ಯಾಪಕರಾಗಿ ಸೇರಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದ ನಂತರ ಪುತ್ತೂರಿನ ಸೇಂಟ್‌ ಫಿಲೋಮಿನ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಂತರ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡು 1993ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಮಾಹಿತಿ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿದರು.

ಯಕ್ಷಗಾನ ಪ್ರಸಂಗಗಳಿಗೆ ಹೊಸ ಆಯಾಮ:

ಯಕ್ಷಗಾನದಲ್ಲಿ ಪ್ರಸಂಗ ಕರ್ತೃವಿಗೆ ಸ್ವಾತಂತ್ರ್ಯ ಕಡಿಮೆ ಆದರೂ ಕಲೆಯ ಮೂಲಕ ವೈಚಾರಿಕತೆಯನ್ನೂ ಪ್ರತಿಪಾದಿಸಿ ಯಕ್ಷಗಾನ ಪ್ರಸಂಗಗಳಿಗೆ ಹೊಸ ಆಯಾಮ ನೀಡಿದರು. ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದ ಬಗ್ಗೆ ಒಲವು ಬೆಳೆದಿದ್ದು ಕಥೆ , ಕವನಗಳ ರಚನೆಗೆ ತೊಡಗಿಕೊಂಡು ಯಕ್ಷಗಾನ ಪ್ರಸಂಗವೊಂದನ್ನೂ ರಚಿಸಿದ್ದರು. ಅಮರ ಶಿಲ್ಪಿ ವೀರ ಕಲ್ಕುಡ, ಘೋರ ಮಾರಕ, ಸಹಸ್ರ ಕವಚ ಮೋಕ್ಷ, ಕಾಯಕಲ್ಪ, ಅಮರ ವಾಹಿನಿ, ತ್ರಿಪುರ ಮಥನ, ಆದಿಕವಿ ವಾಲ್ಮೀಕಿ, ಚಾಲುಕ್ಯ ಚಕ್ರೇಶ್ವರ ಮುಂತಾದ ಮೂವತ್ತಕ್ಕೂ ಹೆಚ್ಚು ಕೃತಿ ರಚಿಸಿದ್ದು, ಪಾತ್ರಗಳ ರಚನೆಯಲ್ಲಿ ಹೊಸತನ ತುಂಬಿದ್ದರಿಂದ ಪ್ರಸಿದ್ಧ ಮೇಳಗಳಿಂದ ಯಕ್ಷಗಾನ ಕೃತಿಗಳಿಗೆ ನಿರಂತರ ಬೇಡಿಕೆ ಬಂತು. ಇವರ ಯಕ್ಷಗಾನ ಪ್ರಸಂಗಗಳು ಹೆಚ್ಚಾಗಿ ಶ್ರೀಧರ್ಮಸ್ಥಳ ಮೇಳ ಪ್ರದರ್ಶಿಸಿ ಸೈ ಎನಿಸಿದೆ. ‘ಯಕ್ಷಗಾನ ಕೃತಿ ಸಂಪುಟ’ ಇವರ ಜಾನಪದ ಯಕ್ಷಗಾನ ಸಂಶೋಧನೆಯ ಫಲವಾಗಿ ಮೂಡಿಬಂದ ಬಹು ಮೌಲಿಕ ಕೃತಿ.

70ಕ್ಕೂ ಹೆಚ್ಚು ಕೃತಿ:

ಯಾವುದೇ ಪಂಥಕ್ಕೂ ಸಿಲುಕದ ಅಮೃತ ಸೋಮೇಶ್ವರರು 70ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಇವರು ಹೊರತಂದ ಕಥಾಸಂಕಲನ ‘ಎಲೆಗಿಳಿ’ (1957). ನಂತರ ಬಂದ ಕಥಾ ಸಂಕಲನಗಳು ಕೆಂಪು ನೆನಪು, ರುದ್ರಶಿಲೆ ಸಾಕ್ಷಿ, ಮಾನವತೆ ಗೆದ್ದಾಗ ಮುಂತಾದವುಗಳು. ವನಮಾಲೆ, ಭ್ರಮಣ, ಉಪ್ಪುಗಳ್ಳಿ, ಜ್ಯೋತಿದರ್ಶನವಾಯಿತು ಮುಂತಾದವು ಕವನ ಸಂಕಲನಗಳು. ತೀರದ ತೆರೆ (ಕಾದಂಬರಿ), ಕೋಟಿಚನ್ನಯ್ಯ, ವಿಶ್ವರೂಪ (ನಾಟಕ),ನಂದಳಿಕೆ ನಂದಾದೀಪ ಹಾಗೂ ರಾಜರತ್ನಂ ಕವಿತೆಗಳು (ವಿಮರ್ಶಾಕೃತಿಗಳು).

ಅಮೃತ ಸೋಮೇಶ್ವರರು ತುಳುವಿನಲ್ಲಿಯೂ ಕೃತಿ ರಚಿಸಿದ್ದು ತಂಬಿಲ, ರಂಗೀತ (ತುಳು ಕವನ ಸಂಕಲನಗಳು); ತುಳು ಪಾಡ್ದನ ಕತೆಗಳು, ಅವಿಲು (ತುಳು ಜಾನಪದ ಕತೆಗಳು), ಅಪಾರ್ಥಿನಿ ಎಂಬ ಕುಚೋದ್ಯದ ಶಬ್ದಕೋಶವಲ್ಲದೆ ಫಿನ್ಲೆಂಡಿನ ಜಾನಪದ ಮಹಾಕಾವ್ಯವಾದ ‘ಕಾಲೇವಾಲ’ ವನ್ನೂ ತುಳುಭಾಷೆಗೆ ಅನುವಾದಿಸಿದ್ದಾರೆ.

ಇವಲ್ಲದೆ ತುಳು ಭಾಷೆಯಲ್ಲಿ ಹಲವಾರು ರೇಡಿಯೋ ನಾಟಕಗಳು, ನೃತ್ಯ ರೂಪಕಗಳು, ಗಾದೆಗಳನ್ನೂ ರಚಿಸಿದ್ದಾರೆ. ಚಂದ್ರಶೇಖರ ಕಂಬಾರರ ಜೋಕುಮಾರ ಸ್ವಾಮಿ ನಾಟಕವನ್ನೂ ತುಳು ಭಾಷೆಗೆ ಅನುವಾದಿಸಿದ್ದು ಅದು ರಂಗದ ಮೇಲೂ ಪ್ರದರ್ಶನಗೊಂಡಿದೆ. ಸುಮಾರು 50ಕ್ಕೂ ಹೆಚ್ಚು ಭಕ್ತಿಗೀತೆ, ಭಾವಗೀತೆಗಳ ಧ್ವನಿಸುರುಳಿಗಳನ್ನೂ ತುಳು ಹಾಗೂ ಕನ್ನಡ ಭಾಷೆಗಳಲ್ಲಿ ತಂದಿದ್ದಾರೆ. ಯಕ್ಷಗಾನ ಕಲಾ ತಂಡವನ್ನು ಬಹರೈನ್‌, ದುಬಾಯಿ ದೇಶಗಳಿಗೆ ಕೊಂಡೊಯ್ದು ಯಕ್ಷಗಾನದ ಬಗ್ಗೆ ಅಭಿರುಚಿ ಬೆಳೆಯುವಂತೆ ಮಾಡಿದ್ದಾರೆ.

ಪ್ರಶಸ್ತಿಗಳ ಸರಮಾಲೆ:

ಅಮೃತ ಸೋಮೇಶ್ವರರ ತುಳುಭಾಷೆ ಹಾಗೂ ಕನ್ನಡ ಸಾಹಿತ್ಯ ಸೇವೆಗಾಗಿ ಸಂದ ಪುರಸ್ಕಾರಗಳು ಹಲವಾರು. ‘ತುಳುನಾಡ ಕಲ್ಕುಡೆ’ ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ‘ಯಕ್ಷಗಾನ ಕೃತಿ ಸಂಪುಟ’ಕ್ಕೆ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ, ‘ತುಳುಪಾಡ್ದನ ಕಥೆಗಳು’ ಕೃತಿಗೆ ಕೇಂದ್ರ ಶಿಕ್ಷಣ ಇಲಾಖೆಯ ಪ್ರಶಸ್ತಿ, ‘ತುಳುಪಾಡ್ದನ ಸಂಪುಟ’ಕ್ಕೆ ಕು.ಶಿ. ಹರಿವಾಸಭಟ್ಟ ಜಾನಪದ ಪ್ರಶಸ್ತಿ, ‘ಅಪಾರ್ಥಿನಿ’ ಕುಚೋದ್ಯ ಶಬ್ದ ಕೋಶಕ್ಕೆ ಆರ್ಯಭಟ ಪ್ರಶಸ್ತಿ, ಯಕ್ಷಗಾನದ ಕೊಡುಗೆಗಾಗಿ ‘ಪಾರ್ತಿಸುಬ್ಬ ಪ್ರಶಸ್ತಿ’ ಆಕಾಶವಾಣಿ ಬಹುಮಾನ, ತುಳು ಅಕಾಡಮಿ ಪ್ರಶಸ್ತಿ, ಕುಕ್ಕಿಲ ಪ್ರಶಸ್ತಿ, ನುಡಿಸಿರಿ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕಾರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳಲ್ಲದೆ ಮೂಲ್ಕಿಯಲ್ಲಿ ನಡೆದ ಅಖಿಲ ಭಾರತ ತುಳು ಸಮ್ಮೇಳನದ ಅಧ್ಯಕ್ಷತೆ, ಮುಂಬಯಿಯಲ್ಲಿ ನಡೆದ ಯಕ್ಷಗಾನ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಸಂದಿವೆ. ಜತೆಗೆ ಅಮೃತ್ ಸೋಮೇಶ್ವರ್ ಅವರಿಗೆ 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್ ಗೌರವ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.

ಗಣ್ಯರ ಸಂತಾಪ: ಅಮೃತ ಸೋಮೇಶ್ವರ ಅವರ ನಿಧನಕ್ಕೆ ಸಂತಾಪಗಳ ಮಹಪೂರವೇ ಹರಿದುಬಂದಿದೆ. ಸ್ಪೀಕರ್‌ ಯು.ಟಿ.ಖಾದರ್‌, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌, ಸಂಸದ ನಳಿನ್‌ ಕುಮಾರ್‌ ಕಟೀಲ್‌, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್‌, ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ವಿಶ್ವಹಿಂದು ಪರಿಷತ್‌, ಬಜರಂಗದಳ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತಿತರ ಸಂಘ, ಸಂಸ್ಥೆಗಳು, ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಇಂದು ಅಂತ್ಯಕ್ರಿಯೆ: ಅಮೃತ ಸೋಮೇಶ್ವರ ಅವರ ಸ್ವಗೃಹದಲ್ಲಿ ಮೃತದೇಹದ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಜ.7ರಂದು ಬೆಳಗ್ಗೆ 11 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಶ್ರೀಧರ್ಮಸ್ಥಳ ಮೇಳದಲ್ಲಿ ಹಿಟ್‌ ಆದ ಪ್ರಸಂಗಗಳುಅಮೃತ ಸೋಮೇಶ್ವರ ಅವರು ಸುಮಾರು 32ಕ್ಕೂ ಅಧಿಕ ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಬಹುತೇಕ ಪ್ರಸಂಗಗಳನ್ನು ಶ್ರೀಧರ್ಮಸ್ಥಳ ಯಕ್ಷಗಾನ ಮೇಳಕ್ಕಾಗಿಯೇ ಬರೆದಿದ್ದು, ಅದನ್ನು ಪ್ರದರ್ಶಿಸಿ ಹಿಟ್‌ ಆಗಿದೆ. ಸಹಸ್ರಕವಚ ಮೋಕ್ಷ, ಕಾಯಕಲ್ಪ, ಅಮರವಾಹಿನಿ, ತ್ರಿಪುರ ಮಥನ, ಮಹಾಕಲಿ ಮಗಧೇಂದ್ರ, ವಂಶವಾಹಿನಿ, ಮಹಾಶೂರ ಭೌಮಾಸುರ, ಚಕ್ರವರ್ತಿ ದಶರಥ, ಸಾರ್ವಭೌಮ ಸಹಸ್ರಾನೀಕ, ಅಂಧಕ ಮೋಕ್ಷ, ಭುವನ ಭಾಗ್ಯ ಪ್ರಸಂಗಗಳನ್ನು ರಚಿಸಿದ್ದು, ಅವು ಜನಜೀವನಕ್ಕೆ ಸತ್ವ ನೀಡುವ ಸಂದೇಶಗಳು, ಪ್ರಕೃತಿಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಪಾತ್ರಗಳ ವಿಶೇಷ ಚಿತ್ರಣ ನೀಡುತ್ತಿವೆ. ಪುರಾಣವನ್ನು ಇಂದಿನ ವಾಸ್ತವತೆಗೆ ಕೈಗನ್ನಡಿಯಾಗಿ ವಿಶೇಷ ಸಂದೇಶಗಳ ಜತೆಗೆ ಪ್ರಸ್ತುತಪಡಿಸುವಂತೆ ಪ್ರಸಂಗ ರಚಿಸುತ್ತಿದ್ದರು. ಧರ್ಮಸ್ಥಳ ಮೇಳದ ಹಿಂದಿನ ಕಲಾವಿದರ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರಸಂಗ ರಚಿಸುತ್ತಿದ್ದುದು ಇವರ ಹೆಚ್ಚುಗಾರಿಕೆ. ‘ಪುರಾಣದ ಚೌಕಟ್ಟು ಮೀರದೆ, ಅತೀ ಸರಳ, ಸುಂದರ ಶೈಲಿಯ ಛಂದಸ್ಸುಗಳಿಂದ ಅದ್ಭುತ ಸಂದೇಶವುಳ್ಳ ಪ್ರಸಂಗ ರಚಿಸುತ್ತಿದ್ದರು. ಯಾವುದೇ ಭಾಗವತರು ಪದ್ಯ ಹೇಳಿದರೆ ಸೈ ಎನಿಸುವ ಪ್ರಸಂಗ ರಚನೆ ಇರುತ್ತಿತ್ತು’ ಎನ್ನುವುದು ಶ್ರೀಧರ್ಮಸ್ಥಳ ಮೇಳದ ಪ್ರಧಾನ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯರ ಅಭಿಪ್ರಾಯ.ಡಾ.ವೀರೇಂದ್ರ ಹೆಗ್ಗಡೆ ಸಂತಾಪ: ಕನ್ನಡ, ತುಳು ಸಾರಸ್ವತ ಲೋಕದ ಖ್ಯಾತ ಸಾಹಿತಿಯಾಗಿ, ಸಂಶೋಧಕರಾಗಿ, ಯಕ್ಷಗಾನ ಪ್ರಸಂಗಕರ್ತರಾಗಿ ಪ್ರಸಿದ್ಧರಾಗಿದ್ದ ಡಾ. ಅಮೃತ ಸೋಮೇಶ್ವರವರು ಮೃದು ಸ್ವಭಾವಿ, ಸಹೃದಯಿಯಾಗಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಯಕ್ಷಗಾನ ಮೇಳಕ್ಕೆ ಪುರಾಣ, ಐತಿಹಾಸಿಕ ಸೇರಿದಂತೆ ೧೧ ಪ್ರಸಂಗಗಳನ್ನು ಬರೆದುಕೊಟ್ಟಿದ್ದರು. ಅವುಗಳ ಯಶಸ್ವಿ ಪ್ರಯೋಗಗಳು ನಡೆಯುತ್ತಿದ್ದವು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ. ರಾಜ್ಯಸಭಾ ಸದಸ್ಯರೂ ಆದ ಡಾ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.ತುಳುವಿನಲ್ಲಿ ಬರೆದ ಅವರ ಅನೇಕ ಹಾಡುಗಳು ಪ್ರಸಿದ್ಧವಾಗಿದ್ದವು. ಕೆಲವು ಹಾಡಿನ ತುಳು ಭಾಷಾಂತರ ಕೂಡ ಮಾಡಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿಯಿಂದ ಜಾನಪದ ತಜ್ಞ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಪ್ರಶಸ್ತಿ, ಯಕ್ಷಗಾನ ಅಕಾಡೆಮಿಯಿಂದ ಪಾರ್ತಿಸುಬ್ಬ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿ ಮೇರು ಸಾಹಿತಿಯಾಗಿದ್ದ ಅವರನ್ನು ಕಳೆದುಕೊಂಡದ್ದು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ.

ಬದುಕಿನ ಪ್ರಯಾಣದ ನಡುವೆ ಅನಂತ ಸಾಧನೆಗೈದು ಜನಪ್ರಿಯರೂ ಬಹುಮಾನ್ಯರೂ ಆಗಿರುವರು. ಶ್ರೀ ಕ್ಷೇತ್ರ ಧರ್ಮಸ್ಥಳದ ಅಭಿಮಾನಿಗಳಾಗಿದ್ದು ನಿರಂತರ ಸಂಪರ್ಕದಲ್ಲಿದ್ದವರು.

ನಾಡು ಇಂದು ಅತ್ಯಂತ ಹಿರಿಯ ಹಾಗೂ ಮೇಧಾವಿ ಸಾಹಿತಿಯನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕುವಂತೆ ಭಗವಾನ್ ಶ್ರೀ ಮಂಜುನಾಥ ಸ್ವಾಮಿ ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಡಾ.ಹೆಗ್ಗಡೆ ಅವರು ಸಂತಾಲಪ ಸೂಚಕದಲ್ಲಿ ತಿಳಿಸಿದ್ದಾರೆ.