ಜಂಟಿ ಸರ್ವೆ ನಡೆಸಿ ವಿದ್ಯುತ್‌ ಕಂಬಗಳ ಕೇಬಲ್‌ ತೆರವಿಗೆ ಕ್ರಮ: ಮಂಗಳೂರು ಪಾಲಿಕೆ

| Published : Jun 30 2024, 12:49 AM IST

ಸಾರಾಂಶ

ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಅಧ್ಯಕ್ಷತೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ವಿದ್ಯುತ್‌ ಕಂಬಗಳಲ್ಲಿರುವ ಅನಧಿಕೃತ ಕೇಬಲ್‌ಗಳಿಂದ ಪ್ರಾಣಕ್ಕೆ ಸಂಚಕಾರವಾಗುತ್ತಿದೆ. ಆದ್ದರಿಂದ ಅವುಗಳನ್ನು ತೆರವುಗೊಳಿಸುವ ಬಗ್ಗೆ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪಕ್ಷಬೇಧ ಮರೆತು ಸದಸ್ಯರು ಆಗ್ರಹಿಸಿದರು. ಈ ಬಗ್ಗೆ ಪಾಲಿಕೆ ಹಾಗೂ ಮೆಸ್ಕಾಂ ವತಿಯಿಂದ ಜಂಟಿ ಸರ್ವೆ ನಡೆಸಿ ತೆರವಿಗೆ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಭರವಸೆ ನೀಡಿದರು.

ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.

ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ ಪ್ರಸ್ತಾಪಕ್ಕೆ ಸದಸ್ಯರಾದ ಮಹಮ್ಮದ್‌ ಲತೀಫ್‌, ಅಬ್ದುಲ್ ರವೂಫ್‌, ಶಶಿಧರ ಹೆಗ್ಡೆ ದನಿಗೂಡಿಸಿ, ವಿದ್ಯುತ್‌ ಕಂಬಗಳಲ್ಲಿ ಬೇಕಾಬಿಟ್ಟಿ ಕೇಬಲ್‌ ಅಳವಡಿಸಲಾಗಿದೆ. ಎಲ್ಲ ಕೇಬಲ್‌ಗಳನ್ನು ತೆರವುಗೊಳಿಸಿ ಭೂಗತ ಅಳವಡಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಮೆಸ್ಕಾಂ ಅಧಿಕಾರಿ, ಕಳೆದ ಎರಡು ವರ್ಷದಿಂದ ಹೊಸದಾಗಿ ಕೇಬಲ್‌ ಅಳವಡಿಕೆಗೆ ಯಾರಿಗೂ ಅನುಮತಿ ನೀಡಿಲ್ಲ. ಪಾಲಿಕೆಯಿಂದ ನಿರಕ್ಷೇಪಣಾ ಪತ್ರ ನೀಡಿದರೆ ಮಾತ್ರ ಅನುಮತಿ ನೀಡಲಾಗುತ್ತದೆ. ಈ ಬಗ್ಗೆ ನೋಟಿಸ್‌ ನೀಡಿಯೇ ವಿದ್ಯುತ್‌ ಕಂಬಗಳಿಂದ ಕೇಬಲ್‌ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಅನಧಿಕೃತ ಕೇಬಲ್‌ಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಮೇಯರ್‌ ಸೂಚಿಸಿದರು.

ಜಲಸಿರಿ ಬಗ್ಗೆ ಪ್ರತ್ಯೇಕ ಸಭೆ:

2019ರಲ್ಲಿ ಆರಂಭವಾದ ಸುಮಾರು 800 ಕೋಟಿ ರು.ಗಳ ಜಲಸಿರಿ ಯೋಜನೆಯ ಕಾಮಗಾರಿ ಇನ್ನೂ ನಿಧಾನಗತಿಯಲ್ಲಿ ನಡೆಯುತ್ತಿದೆ. ಇದೇ ಜುಲೈಗೆ ಮುಕ್ತಾಯಗೊಳ್ಳಬೇಕಾದ ಯೋಜನೆ ಇನ್ನೂ ಸರಿಯಾಗಿ ಆರಂಭವಾಗಿಯೇ ಇಲ್ಲ. ಇನ್ನು ಹಳೆ ಮೀಟರ್‌ಗಳನ್ನೇ ಗ್ರಾಹಕರ ನೀರಿನ ಸಂಪರ್ಕಕ್ಕೆ ಅ‍ಳ‍ವಡಿಸುತ್ತಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ವಿಪಕ್ಷ ಸದಸ್ಯ ಎ.ಸಿ.ವಿನಯರಾಜ್‌ ಪ್ರಸ್ತಾಪಿಸಿದರು. ಇದಕ್ಕೆ ಜಲಸಿರಿ ಅಧಿಕಾರಿ ಉತ್ತರಿಸಿದರೂ ಅದರಿಂದ ತೃಪ್ತರಾಗದ ಸದಸ್ಯರು ಪ್ರತ್ಯೇಕ ಸಭೆ ನಡೆಸುವಂತೆ ಆಗ್ರಹಿಸಿದರು. ಈ ಬಗ್ಗೆ ಪ್ರತ್ಯೇಕ ಸಭೆ ಕರೆದು ವಿಸೃತ ಚರ್ಚೆ ನಡೆಸುವುದಾಗಿ ಮೇಯರ್‌ ಭರವಸೆ ನೀಡಿದರು.

ಸ್ಥಾಯಿ ಸಮಿತಿ ಸಭೆಗಳಿಗೆ ಆಯುಕ್ತರು ಹಾಜರಾಗದಿರುವ ಬಗ್ಗೆ ಸದಸ್ಯೆ ಶೋಭಾ ಸತೀಶ್‌ ಪ್ರಸ್ತಾಪಿಸಿದರು. ಇದರಿಂದಾಗಿ ಸ್ಥಾಯಿ ಸಮಿತಿಗಳಿಗೆ ಬೆಲೆ ಇಲ್ಲದಂತಾಗಿದೆ ಎಂದರು. ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವಾಗ ಆಯುಕ್ತರ ಜತೆ ಚರ್ಚಿಸಬೇಕಾಗುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ಲೋಪ ಆಗದಂತೆ ಮೇಯರ್‌ ಅವರು ಆಯುಕ್ತರಿಗೆ ಸೂಚಿಸಿದರು.

ಉಪ ಮೇಯರ್‌ ಸುನಿತಾ, ಆಯುಕ್ತ ಆನಂದ್‌, ವಿವಿಧ ಸ್ಥಾಯಿ ಸಮಿತಿ ಸದಸ್ಯರು ಇದ್ದರು. ಗೌರವಧನ ಹೆಚ್ಚಳಕ್ಕೆ ಪ್ರಯತ್ನ: ಐವನ್‌ ಡಿಸೋಜಾಕಳೆದ ಅವಧಿಯಲ್ಲಿ ನನ್ನ ಪ್ರಯತ್ನದಿಂದ ಪಾಲಿಕೆ ಸದಸ್ಯರ ಗೌರವಧನ 1 ಸಾವಿರ ರು.ನಿಂದ 6 ಸಾವಿರ ರು.ಗೆ ಹೆಚ್ಚಳವಾಗಿತ್ತು. ಈ ಬಾರಿ ಮತ್ತೆ ಅದರ ಹೆಚ್ಚಳಕ್ಕೆ ಪ್ರಯತ್ನಿಸುವುದಾಗಿ ವಿಧಾನ ಪರಿಷತ್‌ ನೂತನ ಸದಸ್ಯ ಐವನ್‌ ಡಿಸೋಜಾ ಭರವಸೆ ನೀಡಿದರು. ಪಾಲಿಕೆ ಸಭಾಂಗಣದಲ್ಲಿ ನೂತನ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಅಪೂರ್ಣವಾಗಿರುವ ಹಲವು ಕಾಮಗಾರಿಗಳನ್ನು ಪೂರ್ತಿಗೊಳಿಸಲು ಪ್ರಯತ್ನಿಸುತ್ತೇನೆ ಎಂದರು.ಆಸ್ತಿ ತೆರಿಗೆ ಪರಿಷ್ಕರಣೆ ಅಧಿಕಾರ ಪಾಲಿಕೆಗೆ: ಶಾಸಕ ಡಾ.ಭರತ್‌ ಶೆಟ್ಟಿ

ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಳಗೊಂಡಿರುವ ಕುರಿತು ಮಾತನಾಡಿದ ಮಂಗಳೂರು ಉತ್ತರ ಶಾಸಕ ಡಾ.ಭರತ್‌ ಶೆಟ್ಟಿ, 2023ರಲ್ಲಿ ಸರ್ಕಾರ ಆಸ್ತಿ ತೆರಿಗೆ ಹೆಚ್ಚಳ ಮಾಡುವಂತೆ ಸೂಚಿಸಿತ್ತು. ಅದರಂತೆ ಪಾಲಿಕೆ ಆಯುಕ್ತರು ಸರ್ಕಾರದಿಂದ ಅನುಮತಿ ಪಡೆದು ಆಸ್ತಿ ತೆರಿಗೆ ಹೆಚ್ಚಳ ಮಾಡಿದ್ದರು. ಬಳಿಕ ಪಾಲಿಕೆಯಲ್ಲಿ ಕೈಗೊಂಡ ನಿರ್ಣಯದಂತೆ ಸರ್ಕಾರದ ನಿರ್ದೇಶನಕ್ಕೆ ತೊಂದರೆಯಾಗದಂತೆ ಆಸ್ತಿ ತೆರಿಗೆ ಹೆಚ್ಚಳ ಪರಿಷ್ಕರಿಸಲಾಗಿತ್ತು. ಅದೇ ರೀತಿ ಈ ಬಾರಿ ಹೆಚ್ಚಳಗೊಂಡ ಆಸ್ತಿ ತೆರಿಗೆ ಇಳಿಕೆಗೆ ಮುಂದಿನ ಸಭೆಯಲ್ಲಿ ಅಜೆಂಡಾ ಮಂಡಿಸಿ ನಿರ್ಣಯ ಕೈಗೊಳ್ಳಬೇಕು. ಬಳಿಕ ಸರ್ಕಾರದ ಮಟ್ಟದಲ್ಲಿ ಇಳಿಕೆಗೆ ಅನುಮತಿ ಪಡೆಯಲಾಗುವುದು ಎಂದರು.

------------