ಸಾರಾಂಶ
ಕನ್ನಡಪ್ರಭವಾರ್ತೆ ಬಸವನಬಾಗೇವಾಡಿಪಾದಾಚಾರಿಗಳಿಗೆ, ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಬೀದಿ ಬದಿಯ ವ್ಯಾಪಾರಸ್ಥರು ವ್ಯಾಪಾರ ವಹಿವಾಟು ನಡೆಸಬೇಕೆಂದು ತಹಸೀಲ್ದಾರ್ ವೈ.ಎಸ್.ಸೋಮನಕಟ್ಟಿ ಸೂಚನೆ ನೀಡಿದರು.ಪಟ್ಟಣದ ಪುರಸಭೆಯಲ್ಲಿ ನಡೆದ ಬೀದಿ ಬದಿಯ ವ್ಯಾಪಾರಿಗಳ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಶಾಲೆ, ಆಸ್ಪತ್ರೆ, ಸರ್ಕಾರಿ ಕಟ್ಟಡ, ನ್ಯಾಯಾಲಯ, ಅಗ್ನಿಶಾಮಕ ಕಚೇರಿ ಮುಂತಾದ ಪ್ರಮುಖ ಪ್ರದೇಶದಿಂದ ಕನಿಷ್ಠ ೧೦೦ ಮೀಟರ್ ದೂರದಲ್ಲಿ ಬೀದಿ ಬದಿಯ ವ್ಯಾಪಾರಸ್ಥರು ತಮ್ಮ ವ್ಯಾಪಾರ ಮಾಡಬೇಕು. ಶಾಶ್ವತ ರಚನೆ ಮಾಡಿಕೊಳ್ಳದೇ ಸಂಚಾರದ ಮೂಲಕ ಇಲ್ಲವೇ ನಿರ್ದಿಷ್ಟಪಡಿಸಿದ ಸ್ಥಳಗಳಲ್ಲಿ ವ್ಯಾಪಾರ ಮಾಡಬೇಕು. ಈ ನಿಯಮವನ್ನು ಬೀದಿ ಬದಿಯ ವ್ಯಾಪಾರಸ್ಥರು ಪಾಲಿಸಬೇಕು. ನಿಯಮ ಪಾಲಿಸದಿದ್ದರೆ ವ್ಯಾಪಾರಸ್ಥರ ಮೇಲೆ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಅಧ್ಯಕ್ಷತೆ ವಹಿಸಿದ್ದ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಮಾತನಾಡಿ, ೨೦೧೯ ರಲ್ಲಿ ಬೀದಿ ಬದಿಯ ವ್ಯಾಪಾರಸ್ಥರ ಸಮೀಕ್ಷೆ ನಡೆಸಲಾಗಿದೆ. ಈಚೆಗೆ ಪಟ್ಟಣದಲ್ಲಿ ಹೆಚ್ಚು ವ್ಯಾಪಾರಿಗಳಿದ್ದು, ಮತ್ತೆ ಶೀಘ್ರದಲ್ಲಿ ಸಮೀಕ್ಷೆ ನಡೆಸಲಾಗುವುದು ಎಂದರು. ಸಭೆಯಲ್ಲಿ ಪಿಎಂ ಸ್ವನಿಧಿ ಯೋಜನೆಯಡಿ ಸಾಲದ ಅರ್ಜಿಗಳನ್ನು ಬ್ಯಾಂಕುಗಳ ಮಟ್ಟದಲ್ಲಿ ಪರಿಶೀಲಿಸಿ ಸಾಲ ಕೊಡಿಸುವ ಕುರಿತು ಹಾಗೂ ದಾಖಲಾತಿ ಸಲ್ಲಿಸದೇ ಇರುವ ವ್ಯಾಪಾರಿಗಳಿಂದ ದಾಖಲಾತಿ ಸಂಗ್ರಹಿಸಿ ಬ್ಯಾಂಕುಗಳಿಗೆ ನೀಡುವ ಕುರಿತು, ಬೀದಿ ಬದಿಯ ವ್ಯಾಪಾರಿಗಳ ಗುರುತಿನ ಚೀಟಿ ನೀಡದವರಿಗೆ ನೀಡುವ ಕುರಿತು, ಗುರುತಿನ ಚೀಟಿ ರದ್ದುಪಡಿಸುವ ಕುರಿತಂತೆ ನಿರ್ಣಯಿಸಲಾಯಿತು. ಮೆಗಾಮಾರುಕಟ್ಟೆ ಸೇರಿದಂತೆ ಇತರೇ ಮುಖ್ಯರಸ್ತೆಯ ಭಾಗಗಳಲ್ಲಿ ಬೀದಿ ಬದಿಯ ವ್ಯಾಪಾರಿಗಳಿಗೆ ಸ್ಥಳ ಕಲ್ಪಿಸುವ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಪಿಎಸ್‌ಐ ಮನೋಹರ ಕಂಚಗಾರ, ಪುರಸಭೆ ಸಿಬ್ಬಂದಿ ಸತ್ಯಪ್ಪ ಪೂಜಾರಿ, ಮಹೇಶ ಹಿರೇಮಠ, ಸಂಪನ್ಮೂಲ ಸಹಾಯಕರಾದ ಲಕ್ಷ್ಮೀ ರಾಂಪೂರ, ನೀಲಮ್ಮ ಬಳವಾಟ, ಆರೋಗ್ಯ ಇಲಾಖೆಯ ಎಸ್.ಎಸ್.ಮೇಟಿ, ಕಂದಾಯ ನಿರೀಕ್ಷಕ ಸಂತೋಷ ದೇಸಾಯಿ, ಬೀದಿ ಬದಿಯ ವ್ಯಾಪಾರಸ್ಥರ ಸಮಿತಿ ಸದಸ್ಯರಾದ ಜಾಕೀರ ನದಾಫ, ಪರಸಪ್ಪ ಭೂತನಾಳ, ಡೋಂಗ್ರಿಮಾ ಬೈರವಾಡಗಿ, ರೇಖಾ ಭಜಂತ್ರಿ, ಮಹಾದೇವಿ ಮನಗೂಳಿ, ಜನಾಬಾಯಿ ಕಾಸರ, ಈರಣ್ಣ ಹೂಗಾರ ಇತರರು ಇದ್ದರು.