ಸಾರಾಂಶ
ಅಕ್ರಮ ಭೂ ಕಬಳಿಕೆ ಬಗ್ಗೆ ಸಮಗ್ರ ತನಿಖೆ ನಡೆಸಿ, ಅಕ್ರಮ ಭೂಮಿ ವಶಪಡಿಸಿಕೊಂಡು ರೈತರಿಗೆ ಹಂಚಬೇಕು. ಹಾಗೇ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೂಡಲೇ ಕ್ರಮಕೈಗೊಳ್ಳಬೇಕು. ಹೋರಾಟಗಾರರು ನಿರಂತರವಾಗಿ ಸಮಸ್ಯೆಗಳ ಬಗ್ಗೆ ನಿಲುವು ತೆಗೆದುಕೊಳ್ಳುತ್ತಾರೆ. ಆದರೆ, ಜನಪ್ರತಿನಿಧಿಗಳು ಕೇವಲ ಚುನಾವಣೆ ವೇಳೆ ಗಿಮಿಕ್ ರಾಜಕಾರಣ ಮಾಡುತ್ತಾರೆ. ಇದನ್ನು ರೈತರು ಅರ್ಥಮಾಡಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಭಾರತೀನಗರ
ಅಕ್ರಮ ಭೂ ಕಬಳಿಕೆ ಬಗ್ಗೆ ಸಮಗ್ರ ತನಿಖೆ ನಡೆಸಿ, ಅಕ್ರಮ ಭೂಮಿ ವಶಪಡಿಸಿಕೊಂಡು ರೈತರಿಗೆ ಹಂಚಬೇಕು ಎಂದು ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಡಿ.ಕೆ.ಲತಾ ಆಗ್ರಹಿಸಿದರು.ಕರ್ನಾಟಕ ಪ್ರಾಂತ ರೈತಸಂಘದ ಸದಸ್ಯರು ಮಳವಳ್ಳಿಯಿಂದ ಆರಂಭಿಸುವರು ಬೈಕ್ ಜಾಥಾವನ್ನು ಜನವಾದಿ ಮಹಿಳಾ ಸಂಘಟನೆಯಿಂದ ಸ್ವಾಗತಿಸಿ ಅಕ್ರಮ ಭೂ ಕಬಳಿಕೆಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಕೂಡಲೇ ಕ್ರಮಕೈಗೊಳ್ಳಬೇಕು. ಹೋರಾಟಗಾರರು ನಿರಂತರವಾಗಿ ಸಮಸ್ಯೆಗಳ ಬಗ್ಗೆ ನಿಲುವು ತೆಗೆದುಕೊಳ್ಳುತ್ತಾರೆ. ಆದರೆ, ಜನಪ್ರತಿನಿಧಿಗಳು ಕೇವಲ ಚುನಾವಣೆ ವೇಳೆ ಗಿಮಿಕ್ ರಾಜಕಾರಣ ಮಾಡುತ್ತಾರೆ. ಇದನ್ನು ರೈತರು ಅರ್ಥಮಾಡಿಕೊಳ್ಳಬೇಕೆಂದು ತಿಳಿಸಿದರು.ಈ ಹಿಂದೆ ಬೇಡಿಕೆಗೆ ಆಗ್ರಹಿಸಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ ವೇಳೆ ತಹಸೀಲ್ದಾರ್ ಮತ್ತು ಎಡಿಸಿ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆವಿಗೂ ಯಾವುದೇ ಸಮಸ್ಯೆ ಬಗೆಹರಿದಿಲ್ಲ. ಕೂಡಲೇ ಬಡ ಕೂಲಿಕಾರರ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು.
ನರೇಗಾದಲ್ಲಿ 200 ದಿನಗಳ ಕೂಲಿ ದಿನಕ್ಕೆ 600 ರು. ಕೂಲಿ ನೀಡಬೇಕು. ಕೂಲಿಕಾರರಿಗೆ ಪ್ರತೀದಿನ ಹಣ ಪಾವತಿಸಬೇಕು ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಬೇಕು. ಸರ್ಕಾರಿ ಹಳ್ಳ, ಕಟ್ಟೆ, ಕೆರೆ, ರಸ್ತೆ ಇತರೆ ಸಾರ್ವಜನಿಕರ ಆಸ್ತಿಯನ್ನು ಅದ್ದುಬಸ್ತು ನಿಗಧಿ ಪಡಿಸಿ ಅವುಗಳ ರಕ್ಷಣೆಗೆ ಜಿಲ್ಲಾಧಿಕಾರಿಗಳು ಮುಂದಾಗಬೇಕೆಂದು ಒತ್ತಾಯಿಸಿದರು.ಇದೇ ವೇಳೆ ಪ್ರಾಂತ ರೈತ ಸಂಘದ ಮಳವಳ್ಳಿ ತಾಲೂಕು ಅಧ್ಯಕ್ಷ ಭರತ್ ರಾಜು, ಜಿಲ್ಲಾ ಉಪಾಧ್ಯಕ್ಷೆ ಶೋಭಾ, ಜಿಲ್ಲಾ ಪದಾಧಿಕಾರಿ ಜೈಶೀಲ, ಜಯಮ್ಮ, ಪುಟ್ಟಲಕ್ಷ್ಮಮ್ಮ ಸೇರಿದಂತೆ ಹಲವರಿದ್ದರು.