ಮನೆ ಶುಭ ಸಮಾರಂಭಗಳಲ್ಲಿ ಸಾಹಿತ್ಯ ಕಾರ್ಯಕ್ರಮ ನಡೆಸಿ: ಕಣಿವೆ ವಿನಯ್

| Published : Mar 11 2025, 12:46 AM IST

ಸಾರಾಂಶ

ನರಸಿಂಹರಾಜಪುರ, ಮನೆಗಳಲ್ಲಿ ನಡೆಯುವ ಶುಭ ಕಾರ್ಯಗಳಲ್ಲಿ ಸಾಹಿತ್ಯಕ್ಕೆ ಸಂಬಂಧ ಪಟ್ಟ ಕಾರ್ಯಕ್ರಮ ನಡೆಸಿದರೆ ಮನೆಗೆ ಬಂದ ಬಂಧುಗಳಲ್ಲೂ ಸಾಹಿತ್ಯ ಅಭಿರುಚಿ, ಪುಸ್ತಕ ಪ್ರೇಮ ಬೆಳೆಯಲಿದೆ ಎಂದು ಕಣಿವೆಯ ನಾಗಚಂದ್ರ ಪ್ರತಿಷ್ಠಾನದ ಮುಖ್ಯಸ್ಥ

ಭಾಗ್ಯರಾಮ ಲೇ ಔಟ್ ನ ನಾಗರಾಜ್ ಅಪ್ಪಾಜಿ ಮನೆಯಂಗಳದಲ್ಲಿ ಸಾಹಿತ್ಯ ಸಂಭ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮನೆಗಳಲ್ಲಿ ನಡೆಯುವ ಶುಭ ಕಾರ್ಯಗಳಲ್ಲಿ ಸಾಹಿತ್ಯಕ್ಕೆ ಸಂಬಂಧ ಪಟ್ಟ ಕಾರ್ಯಕ್ರಮ ನಡೆಸಿದರೆ ಮನೆಗೆ ಬಂದ ಬಂಧುಗಳಲ್ಲೂ ಸಾಹಿತ್ಯ ಅಭಿರುಚಿ, ಪುಸ್ತಕ ಪ್ರೇಮ ಬೆಳೆಯಲಿದೆ ಎಂದು ಕಣಿವೆಯ ನಾಗಚಂದ್ರ ಪ್ರತಿಷ್ಠಾನದ ಮುಖ್ಯಸ್ಥ

ಭಾನುವಾರ ಪಟ್ಟಣದ ಭಾಗ್ಯರಾಮ ಲೇಔಟ್ ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಸಬಾ ಹೋಬಳಿ ಕಾರ್ಯದರ್ಶಿ ನಾಗರಾಜ್ ಅಪ್ಪಾಜಿ ಮನೆಯಂಗಳದಲ್ಲಿ ಕಸಾಪ ಏರ್ಪಡಿಸಿದ್ದ ಸಾಹಿತ್ಯ ಸಂಭ್ರಮದಡಿ ಸಂಗೀತ ಸುಧೆ ಹಾಗೂ ಪ್ರಖ್ಯಾತ ಲೇಖಕರ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. 2018 ರಲ್ಲಿ ನಾನು ಮನೆಯಂಗಳದಲ್ಲಿ ಪ್ರಥಮ ಬಾರಿ ಸಾಹಿತ್ಯಕ್ಕೆ ಸಂಬಂಧಪಟ್ಟ ಕಾರ್ಯಕ್ರಮ ನಡೆಸಿದ್ದೆ. ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಕನ್ನಡ ಸಾಹಿತ್ಯ ಕಾರ್ಯಕ್ರಮವನ್ನು ಗ್ರಾಮೀಣ ಪ್ರದೇಶಕ್ಕೂ ತಲುಪಿಸಿದ್ದಾರೆ. ಬೆಳಗಾಂ ನಲ್ಲಿ ಮರಾಠಿ ಭಾಷಿಗರು ಕನ್ನಡಿಗರ ಮೇಲೆ ದೌರ್ಜನ್ಯ ಮಾಡುತ್ತಾರೆ. ಅಲ್ಲಿನ ರಾಜಕಾರಣಿಗಳಿಗೆ ಕನ್ನಡ ಭಾಷೆಗಿಂತ ಮರಾಠಿ ಗರ ಓಟು ಮುಖ್ಯವಾಗುತ್ತದೆ.ಕರ್ನಾಟಕದಲ್ಲಿ ಬೇರೆ ಭಾಷಿಗರಿಗೆ ಗೌರವ ನೀಡುತ್ತೇವೆ. ಆದರೆ, ಬೇರೆ ರಾಜ್ಯಗಳಲ್ಲಿ ಕನ್ನಡ ಗರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ಕನ್ನಡ ಭಾಷೆಯು ಸಾವಿರಾರು ವರ್ಷ ಕಳೆದರೂ ನಶಿಸಿಹೋಗುವ ಭಾಷೆಯಲ್ಲ. ಕನ್ನಡಕ್ಕೆ ತನ್ನದೇ ಆದ ಲಿಪಿ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಪ್ರತಿಯೊಬ್ಬ ಕನ್ನಡಿಗರು ಪುಸ್ತಕ ಕೊಂಡು ಓದಬೇಕು. ಕನ್ನಡ ಸಾಹಿತ್ಯ ಪರಿಷತ್ ಕಸಬಾ ಹೋಬಳಿ ಕಾರ್ಯದರ್ಶಿ ನಾಗರಾಜ್ ಅಪ್ಪಾಜಿ ಕನ್ನಡ ಭಾಷೆ, ಪುಸ್ತಕಗಳ ಬಗ್ಗೆ ಪ್ರೇಮ ಬೆಳೆಸಿಕೊಂಡವರು. ತಮ್ಮ ಮನೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಮಕ್ಕಳು ತಲೆ ತಗ್ಗಿಸಿ ಪುಸ್ತಕಗಳನ್ನು ಓದುತ್ತಾ ಬಂದರೆ ಮುಂದೆ ತಲೆ ಎತ್ತಿ ಜೀವನ ಮಾಡಬಹುದು. ತಲೆ ತಗ್ಗಿಸಿ ಮೊಬೈಲ್ ನೋಡುತ್ತಾ ಕುಳಿತರೆ ಮುಂದೆ ತಲೆ ಎತ್ತಿ ಜೀವನ ಮಾಡಲು ಕಷ್ಟವಾಗಬಹುದು. ಪ್ರತಿಯೊಬ್ಬರೂ ಬಂಧು ಗಳಿಗೆ ಮಿತ್ರರಿಗೆ ಉಡುಗೆರೆ ನೀಡುವಾಗ ಕನ್ನಡದ ಪುಸ್ತಕಗಳನ್ನು ನೀಡಬೇಕು. ಕಸಾಪ ಗ್ರಾಮೀಣ ಪ್ರದೇಶದಲ್ಲಿ ಮನೆ ಯಂಗಳದ ಕಾರ್ಯಕ್ರಮ ಹೆಚ್ಚಾಗಿ ನಡೆಸುತ್ತಿದ್ದೇವೆ. ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ತರೀಕೆರೆ ಪುರಸಭಾ ಸದಸ್ಯ ಮಂಜುನಾಥ್ ಮಾತನಾಡಿ, ಪ್ರತಿಯೊಂದು ಮನೆಯ ಶುಭ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಸಂಬಂಧಿತ ಕಾರ್ಯಕ್ರಮ ನಡೆಯಬೇಕು. ಕನ್ನಡ ಪುಸ್ತಕಗಳ ಬಗ್ಗೆ ಜನರಿಗೆ ಆಸಕ್ತಿ ಮೂಡುವಂತಾಗಬೇಕು.ಅನೇಕ ಸಂದರ್ಭದಲ್ಲಿ ಸಿನಿಮಾ ರಂಗಕ್ಕೆ ಬಂದ ಯುವ ನಟ, ನಟಿಯರು ಕನ್ನಡದ ಬದಲಿಗೆ ಇಂಗ್ಲೀಷ್ ಭಾಷೆ ಪದಗಳಲ್ಲೇ ಹೆಚ್ಚಾಗಿ ಬಳಸುತ್ತಾರೆ. ಇದು ಸರಿಯಲ್ಲ. ಕನ್ನಡ ಸುಂದರ ಭಾಷೆಯಾಗಿದ್ದು ಕನ್ನಡದಲ್ಲೇ ಮಾತನಾಡೋಣ ಎಂದರು.

ಕಸಾಪ ಕಸಬಾ ಹೋಬಳಿ ಕಾರ್ಯದರ್ಶಿ ಆರ್‌.ನಾಗರಾಜ್ ಉದ್ಘಾಟಿಸಿದರು. ಅತಿಥಿಗಳಾಗಿ ಭಡ್ತಿ ಮುಖ್ಯೋಪಾಧ್ಯಾಯರ ಸಂಘದ ರಾಜ್ಯ ಉಪಾಧ್ಯಕ್ಷ ಅಶೋಕ್ ಇದ್ದರು. ಹಿರಿಯ ಪತ್ರಕರ್ತ ಯಡಗೆರೆ ಮಂಜುನಾಥ್ ಮಾತನಾಡಿದರು. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಂಜುಂಡಪ್ಪ ಕಾರ್ಯಕ್ರಮ ನಿರೂಪಿಸಿದರು.ಯುವ ಗಾಯಕರಾದ ಸಿಂಸೆ ವಿಶ್ರೇಯ, ಕೈಮರ ಜಯರಾಜ್ ಹಾಗೂ ಇತರ ಗಾಯಕರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.